ಮುಂಬೈ

ಶೀನಾ ಬೋರಾ ಸಮಾಧಿ ಅಗೆತ; ತಲೆಬುರುಡೆ, ಮೂಳೆಗಳು, ಸೂಟ್‌ಕೇಸ್ ಪತ್ತೆ

Pinterest LinkedIn Tumblr

Sheena-Boraಮುಂಬೈ, ಆ. 28: ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಂಬೈ ಪೊಲೀಸರು ಶುಕ್ರವಾರ ಬೆಳಗ್ಗೆ ಶೀನಾ ಬೋರಾರ ಮೃತದೇಹವನ್ನು ಎಸೆದಿದ್ದ ಸ್ಥಳವನ್ನು ಅಗೆದು ಕೆಲವು ಎಲುಬುಗಳು, ತಲೆಬುರುಡೆ ಮತ್ತು ಸೂಟ್‌ಕೇಸೊಂದನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪೆನ್‌ನಲ್ಲಿರುವ ಅಡವಿಯಲ್ಲಿ ಇವುಗಳನ್ನು ಪತ್ತೆಹಚ್ಚಲಾಗಿದೆ.
ಪತ್ತೆಯಾದ ದೇಹದ ಭಾಗಗಳು ಶೀನಾ ಬೋರಾರದು ಎಂಬುದು ಸಾಬೀತಾದರೆ, ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಮೂವರ ವಿರುದ್ಧ ಪೊಲೀಸರಿಗೆ ಪ್ರಬಲ ಪುರಾವೆ ಸಿಕ್ಕಿದಂತಾಗುತ್ತದೆ.
ಶೀನಾ ಬೋರಾರ ತಾಯಿ ಇಂದ್ರಾಣಿ ಮುಖರ್ಜಿ, ಇಂದ್ರಾಣಿಯ ಮಾಜಿ ಗಂಡ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಮ ರಾಯ್‌ಯನ್ನು ಪೊಲೀಸರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ. 2012ರಲ್ಲಿ ನಡೆದ ಶೀನಾ ಬೋರಾ ಕೊಲೆ ಪ್ರಕರಣ ಈಗ ಇಂದ್ರಾಣಿ ಮತ್ತು ಆಕೆಯ ಚಾಲಕ ನೀಡಿದ ಹೇಳಿಕೆಗಳ ಸುತ್ತ ಸುತ್ತಿತ್ತಿದೆ.
2012 ಎಪ್ರಿಲ್ 24ರಂದು ಶೀನಾ ಕೊಲೆಯಾದ ಒಂದು ತಿಂಗಳ ಬಳಿಕ, ಮುಂಬೈಯಿಂದ 84 ಕಿಲೋಮೀಟರ್ ದೂರದಲ್ಲಿರುವ ರಾಯಗಡದ ಪೆನ್‌ನಲ್ಲಿ ಗ್ರಾಮಸ್ಥರು ಸೂಟ್‌ಕೇಸೊಂದರಲ್ಲಿ ಶೀನಾರ ಮೃತದೇಹವನ್ನು ಪತ್ತೆಹಚ್ಚಿದ್ದರು. ಆದರೆ, ವಿಧಿವಿಧಾನಗಳನ್ನು ಗಾಳಿಗೆ ತೂರಿದ ಸ್ಥಳೀಯ ಪೊಲೀಸರು, ಮೃತದೇಹವನ್ನು ಒಯ್ಯಲು ಯಾರೂ ಬಂದಿಲ್ಲ ಎಂದು ಹೇಳಿ ವಿಧಿವಿಜ್ಞಾನ ಪರೀಕ್ಷೆಯನ್ನೂ ಮಾಡದೆ ಶವವನ್ನು ಸ್ಥಳದಲ್ಲೇ ಹೂಳಿದ್ದರು.
ದೇಹವನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಒಂದು ಬುರುಡೆ ಮತ್ತು ಎಲುಬುಗಳು ಪತ್ತೆಯಾಗಿವೆ ಎಂದು ಮುಂಬೈ ಪೊಲೀಸರು ಹೇಳುತ್ತಾರೆ. ಕೊಲೆಯನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ದೇಹದ ಭಾಗಗಳ ವಿಧಿವಿಜ್ಞಾನ ವಿಶ್ಲೇಷಣೆ ಮಹತ್ವದ್ದಾಗಿದೆ.
ಶೀನಾರನ್ನು ಕೊಂದ ಬಳಿಕ ಆಕೆಯ ಮುಖವನ್ನು ಜಜ್ಜಿ, ದೇಹವನ್ನು ಸೂಟ್‌ಕೇಸ್‌ನೊಳಗೆ ತುರುಕಿ ಸುಡಲಾಗಿತ್ತು ಎಂದು ಪೊಲೀಸರು ಹೇಳುತ್ತಾರೆ.
ಕೊಲೆಯ ಮುನ್ನಾ ದಿನದಂದು ಮೂವರು ಆರೋಪಿಗಳು ಶೀನಾರ ಮೃತದೇಹವನ್ನು ಎಸೆಯುವ ಜಾಗದ ಪರಿಶೀಲನೆ ನಡೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಟಾರ್ ಇಂಡಿಯಾದ ಮಾಜಿ ಮುಖ್ಯಸ್ಥ ಪೀಟರ್ ಮುಖರ್ಜಿ ಹೆಂಡತಿ ಹಾಗೂ ಪ್ರಮುಖ ಮಾಧ್ಯಮ ಉದ್ಯಮಿ ಇಂದ್ರಾಣಿ ಮುಖರ್ಜಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆಕೆಯ ಚಾಲಕನ ತಪ್ಪೊಪ್ಪಿಗೆ ಆಧಾರದಲ್ಲಿ ಇಂದ್ರಾಣಿಯ ಬಂಧನವಾಗಿತ್ತು. ಶೀನಾರ ಮೃತದೇಹವನ್ನು ಎಸೆದ ಸ್ಥಳಕ್ಕೆ ಚಾಲಕನು ಪೊಲೀಸರನ್ನು ಕರೆದುಕೊಂಡು ಹೋಗಿದ್ದನು.
ಶೀನಾರನ್ನು ಆಕೆಯ ತಾಯಿ ಇಂದ್ರಾಣಿ ಕಾರಿನೊಳಗೆ ಎಳೆದುಕೊಂಡ ಬಳಿಕ ಮತ್ತು ಬರಿಸುವ ಔಷಧಿ ನೀಡಲಾಗಿತ್ತು ಹಾಗೂ ಬಳಿಕ ಸಂಜೀವ್ ಖನ್ನಾ ಆಕೆಯ ಕತ್ತು ಹಿಸುಕಿ ಕೊಲೆಗೈದನು ಎಂದು ಚಾಲಕ ಹೇಳಿದ್ದಾನೆ.

Write A Comment