ಮುಂಬೈ

2006ರ ಮುಂಬೈ ಸರಣಿ ಸ್ಫೋಟ ಪ್ರಕರಣ: 5 ಮಂದಿಗೆ ಗಲ್ಲು ಶಿಕ್ಷೆ, ಏಳು ಮಂದಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

mumbai blast

ಮುಂಬೈ: 2006ರ ಮುಂಬೈ ಸರಣಿ ಸ್ಫೋಟ ಪ್ರಕರಣದ 12 ಅಪರಾಧಿಗಳಿಗೆ ಮೋಕಾ(ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ವಿಶೇಷ ನ್ಯಾಯಾಲಯ ಬುಧವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಐವರುಗೆ ಗಲ್ಲು ಶಿಕ್ಷೆ ಹಾಗೂ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದ, ರೈಲಿನಲ್ಲಿ ಬಾಂಬ್ ಇಟ್ಟಿದ್ದ ಕಮಲ್ ಅಹ್ಮದ್ ಅನ್ಸಾರಿ(37), ಮೊಹಮ್ಮದ್ ಫೈಸಲ್ ಶೇಕ್(36), ಇಹ್ತೆಶಾಮ್ ಸಿದ್ದಿಕಿ(30), ನಾವೇದ್ ಹುಸೇನ್ ಖಾನ್ ಹಾಗೂ ಆಸಿಫ್ ಖಾನ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಇನ್ನು ಇತರೆ ತಪ್ಪಿತಸ್ಥರಾದ ಮೊಹಮ್ಮದ್ ಮಜೀದ್ ಶಫಿ(32), ಶೇಕ್ ಆಲಂ ಶೇಕ್(41), ಮೊಹಮ್ಮದ್ ಸಾಜಿದ್ ಅನ್ಸಾರಿ(34), ಮುಝಾಮಿಲ್ ಶೇಕ್(27), ಸೋಹೈಲ್ ಮೆಹಮೂದ್ ಶೇಕ್(43), ಜಮೀರ್ ಅಹ್ಮದ್ ಶೇಕ್ (36), ತನ್ವೀರ್ ಅಹ್ಮದ್ ಅನ್ಸಾರಿ(37)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮೋಕಾ ಕೋರ್ಟ್‌ ನ್ಯಾಯಾಧೀಶ ಯತಿನ್‌ ಡಿ. ಶಿಂಧೆ ಅವರು ಪ್ರಕರಣದ ವಿಚಾರಣೆಯನ್ನು ಕಳೆದ ವರ್ಷ ಆ.19ರಂದು ಅಂತ್ಯಗೊಳಿಸಿದ್ದರು. ಕಳೆದ 9 ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಸಲಾಗಿದ್ದು, ಪ್ರಾಸಿಕ್ಯೂಷನ್‌ ಪರ 192 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿತ್ತು. ಸಾಕ್ಷಿಗಳ ಹೇಳಿಕೆಗಳನ್ನು 5500 ಪುಟಗಳಲ್ಲಿ ದಾಖಲಿಸಲಾಗಿತ್ತು. ಪ್ರಕರಣದಲ್ಲಿ 13 ಆರೋಪಿಗಳು ಬಂಧಿತರಾಗಿದ್ದು, ಅಜಂ ಚೀಮಾ ಸೇರಿ 14 ಮಂದಿ ಇನ್ನೂ ನಾಪತ್ತೆಯಾದ್ದಾರೆ.

2006 ಜು.11ರಂದು ಮುಂಬೈ ಉಪನಗರ ರೈಲಿನಲ್ಲಿ ಸರಣಿ ಸ್ಫೋಟ ಸಂಭವಿಸಿತ್ತು. ಖಾರ್‌ರೋಡ್‌-ಸಾಂತಾಕ್ರೂಜ್‌ ಮತ್ತು ಬೊರಿವಲಿ ಮಧ್ಯೆ ವಿವಿಧೆಡೆ 7 ಆರ್‌ಡಿಎಕ್ಸ್‌ ಬಾಂಬ್ ಸ್ಫೋಟಿಸಿ, 200 ಮಂದಿಯನ್ನು ಬಲಿತೆಗೆದುಕೊಂಡಿದ್ದರು. ಅಲ್ಲದೆ 800ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ಮೋಕಾ ನ್ಯಾಯಾಲಯ, 13 ಆರೋಪಿಗಳ ಪೈಕಿ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲಾ 12 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು.

Write A Comment