ಮುಂಬೈ,ಅ.16: ಶಿವಸೇನೆ ಮತ್ತು ಬಿಜೆಪಿ ನಡುವಿನ ವಾಗ್ಯುದ್ಧ ಇನ್ನಷ್ಟು ತೀವ್ರಗೊಂಡಿದೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಟ ಸಂಜಯ ದತ್ಗೆ ಶಿವಸೇನೆಯ ಬೆಂಬಲ ಮತ್ತು ದಿ.ಬಾಳ್ ಠಾಕ್ರೆಯವರು ತನ್ನ ನಿವಾಸದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರಿಗೆ ನೀಡಿದ್ದ ಆತಿಥ್ಯವನ್ನು ಬಿಜೆಪಿಯು ಪ್ರಶ್ನಿಸಿದೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಆಶಿಷ್ ಶೇಲರ್ ಅವರು ದತ್ಗೆ ಬಾಳ್ ಠಾಕ್ರೆಯವರ ಬೆಂಬಲವನ್ನು ಪ್ರಸ್ತಾಪಿಸಿ, ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಆರೋಪಿಯಾಗಿದ್ದ ದತ್ ಅವರನ್ನು ಬೆಂಬಲಿಸುವಲ್ಲಿ ಅದ್ಯಾವ ರಾಷ್ಟ್ರಪ್ರೇಮವಿತ್ತು ಎಂದು ಪ್ರಶ್ನಿಸಿದರು.
ನಮ್ಮ ರಾಷ್ಟ್ರಪ್ರೇಮದ ಬಗ್ಗೆ ಅಪಸ್ವರವೆತ್ತುವವರು ಮಾತೋಶ್ರೀ(ಬಾಂದ್ರಾದಲ್ಲಿನ ಠಾಕ್ರೆ ಕುಟುಂಬದ ನಿವಾಸ)ಯಲ್ಲಿ ಜಾವೇದ್ ಮಿಯಾಂದಾದ್ಗೆ ಆತಿಥ್ಯ ನೀಡಿದವರು ಯಾರು ಎನ್ನುವುದನ್ನು ನೆನಪಿಸಿಕೊಳ್ಳಬೇಕು ಎಂದರು.
ಈ ಅವಕಾಶವಾದದ ರಾಜಕೀಯ, ರಾಷ್ಟ್ರಪ್ರೇಮವನ್ನು ತಮ್ಮ ಅನುಕೂಲತೆಗೆ ತಕ್ಕಂತೆ ಬಳಸಿಕೊಳ್ಳುವ ರಾಜಕೀಯ ಜನತೆಗೆ ಅರ್ಥವಾಗುತ್ತದೆ ಎಂದು ಅವರು ಕುಟುಕಿದರು.
ನಮ್ಮ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ರಾಷ್ಟ್ರಪ್ರೇಮವನ್ನು ಕಲಿಸಲು ಬಯಸುತ್ತಿರುವವರು ತಮ್ಮ ಪಕ್ಷದ ಕಚೇರಿ(ಸೇನಾ ಭವನ)ಯ ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿಲ್ಲ ಎನ್ನುವುದನ್ನು ಮರೆಯಬಾರದು ಎಂದ ಶೇಲರ್, ಫಡ್ನವೀಸ್ ತನ್ನ ಎಳವೆಯಲ್ಲಿಯೇ ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದವರು. ಹವಾ ನಿಯಂತ್ರಿತ ಕೋಣೆಗಳಲ್ಲಿ ಕುಳಿತುಕೊಂಡು ಗೀಚುತ್ತಿರುವವರು ಫಡ್ನವೀಸ್ಗೆ ಕಲಿಸಬೇಕಾಗಿಲ್ಲ ಎಂದು ಶಿವಸೇನಾ ಸಂಸದ ಹಾಗೂ ಪಕ್ಷದ ಮುಖವಾಣಿ ‘ಸಾಮನಾ’ದ ಕಾರ್ಯನಿರ್ವಾಹಕ ಸಂಪಾದಕ ಸಂಜಯ ರಾವುತ್ ಅವರ ವಿರುದ್ಧ ಪರೋಕ್ಷ ದಾಳಿಯನ್ನು ನಡೆಸಿದರು. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿಯವರ ಮುಂಬೈ ಭೇಟಿ ಕುರಿತಂತೆ ಬಿಜೆಪಿ ವಿರುದ್ಧ ದಾಳಿ ನಡೆಸುತ್ತಿರುವವರಲ್ಲಿ ರಾವುತ್ ಪ್ರಮುಖರಾಗಿದ್ದಾರೆ.
ಶಿವಸೇನೆಯು ಬಿಜೆಪಿಗೆ ರಾಷ್ಟ್ರಪ್ರೇಮವನ್ನು ಕಲಿಸಬೇಕಾಗಿಲ್ಲ,ನಮ್ಮ ನಾಯಕರು ಕಾಶ್ಮೀರಕ್ಕಾಗಿ ಹೋರಾಡಿದ್ದಾರೆ ಎಂದ ಶೇಲರ್, ಯುವಸೇನೆಯ ನಾಯಕ ಹಾಗೂ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆ ರಾಹತ್ ಫತೇ ಅಲಿ ಖಾನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಬೆಟ್ಟು ಮಾಡಿದರು.
ಸೋಮವಾರ ಇಲ್ಲಿ ಕಸೂರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಮಾಜಿ ಬಿಜೆಪಿ ಚಿಂತಕ ಸುಧೀಂದ್ರ ಕುಲಕರ್ಣಿಯವರ ಮುಖಕ್ಕೆ ಶಿವಸೈನಿಕರು ಮಸಿ ಬಳಿದ ನಂತರ ಉಭಯ ಪಕ್ಷಗಳ ನಡುವಿನ ಸಂಬಂಧ ಹಳಸಿದೆ.