ಮುಂಬೈ: ಉತ್ತರಪ್ರದೇಶ ಸರಕಾರದಿಂದ ನಮ್ಮ ಕುಟುಂಬದ ಸದಸ್ಯರಿಗೆ ದೊರೆಯುವ ಮಾಸಿಕ 50 ಸಾವಿರ ರೂಪಾಯಿಗಳ ಪಿಂಚಣಿಯನ್ನು, ಬಡವರು ಮತ್ತು ಅಗತ್ಯವಿದ್ದವರ ಏಳಿಗೆಗೆ ಅನುಕೂಲವಾಗುವಂತಹ ಧರ್ಮಾರ್ಥ ಕಾರ್ಯದಲ್ಲಿ ಬಳಸಿ ಎಂದು ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್, ಉತ್ತರಪ್ರದೇಶ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಯಶ್ ಭಾರ್ತಿ ಸಮ್ಮಾನ್ ಪ್ರಶಸ್ತಿ ಪಡೆದವರಿಗೆ ಮಾಸಿಕವಾಗಿ 50 ಸಾವಿರ ರೂಪಾಯಿ ಪಿಂಚಣಿ ಪಡೆಯುವ ಯೋಜನೆಯನ್ನು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಸರಕಾರ ಜಾರಿಗೊಳಿಸಿದ್ದರಿಂದ, ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ನನ್ನ ಕುಟುಂಬದ ಸದಸ್ಯರಿಗೆ ಯಶ್ ಭಾರ್ತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿರುವ ಉತ್ತರ ಪ್ರದೇಶ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಪ್ರಶಸ್ತಿ ವಿಜೇತರಿಗೆ ಮಾಸಿಕವಾಗಿ 50 ಸಾವಿರ ರೂ.ಗಳ ಪಿಂಚಣಿ ನೀಡಲು ಸರಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳಿಂದ ತಿಳಿದು ಬಂದಿದೆ. ನನ್ನ ಕುಟುಂಬದ ಸದಸ್ಯರಿಗೆ ನೀಡಲಾಗುವ ಪಿಂಚಣಿಯನ್ನು ಬಡವರ ಧರ್ಮಾರ್ಥ ಕಾರ್ಯಗಳಿಗಾಗಿ ಬಳಸಿ ಎಂದು ಉತ್ತರಪ್ರದೇಶ ಸರಕಾರಕ್ಕೆ ವಿನಮ್ರತೆಯಿಂದ ಕೋರುವುದಾಗಿ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರಿಗೂ ಪ್ರತ್ಯೇಕವಾಗಿ ಪತ್ರ ಬರೆದು ಕೋರುವುದಾಗಿ 73 ವರ್ಷ ವಯಸ್ಸಿನ ಅಮಿತಾಬ್ ಬಚ್ಚನ್ ಹೇಳಿದ್ದಾರೆ.