ಮನೋರಂಜನೆ

ದೇವರು ಸಲ್ಮಾನ್‌ನನ್ನು ಚೆನ್ನಾಗಿಟ್ಟಿರಲಿ…! ಅಪಘಾತದ ಸಂತ್ರಸ್ತರ ಹಾರೈಕೆ

Pinterest LinkedIn Tumblr

salman_khan_victim

ಮುಂಬೈ,ಡಿ.12: 2002,ಸೆಪ್ಟಂಬರ್ 28ರ ರಾತ್ರಿಯು ದಿನಗೂಲಿ ಕಾರ್ಮಿಕ ಫಿರೋಜ್ ಶೇಖ್(26)ನ ಬದುಕನ್ನು ಶಾಶ್ವತವಾಗಿ ಬದಲಿಸಿಬಿಟ್ಟಿದೆ. ಕುಟುಂಬದ ಆಧಾರ ಸ್ತಂಭವಾಗಿದ್ದು ಅಂದು ರಾತ್ರಿ ಸಂಭವಿಸಿದ್ದ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದ ಏಕೈಕ ದುರ್ದೈವಿ ನೂರುಲ್ಲಾ ಶೇಖ್‌ನ ಪುತ್ರ, ಆಗಿನ್ನೂ 13ರ ಎಳೆಪ್ರಾಯದ ಫಿರೋಝ್‌ನ ಹಣೆಬರಹ ಅಂದೇ ನಿರ್ಧಾರವಾಗಿಬಿಟ್ಟಿತ್ತು. ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗಿಯಾಗಿದ್ದ ಆ ಅಪಘಾತ ಫಿರೋಝ್‌ನ ಕುಟುಂಬ ಸದಸ್ಯರು ತಮ್ಮ ಏಳಿಗೆಯ ಕನಸಿಟ್ಟುಕೊಂಡಿದ್ದ ಏಕೈಕ ದಾರಿಯನ್ನೂ ಮುಚ್ಚಿತ್ತು. ಕುಟುಂಬದವರ ತುತ್ತಿನ ಚೀಲವನ್ನು ತುಂಬಲು ತಾನೇ ದುಡಿಯಬೇಕಾದ ಅನಿವಾರ್ಯತೆಯಿಂದಾಗಿ ಫಿರೋಝ್ ಮಾರನೇ ದಿನದಿಂದಲೇ ಶಾಲೆಯನ್ನು ಮರೆತುಬಿಟ್ಟಿದ್ದ.

ಆ ಅಪಘಾತ ನನ್ನ ಇಡೀ ಬದುಕನ್ನು ಸಂಕಷ್ಟಕ್ಕೆ ನೂಕಿತ್ತು. ಸಲ್ಮಾನ್‌ಗೆ ಶಿಕ್ಷೆಯಾಗುತ್ತದೆಯೋ ಬಿಡುಗಡೆಯಾಗುತ್ತದೆಯೋ ಎಂಬ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಅದು ನನ್ನ ಬದುಕಿನಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ. ಸಲ್ಮಾನ್‌ನನ್ನು ಆಶೀರ್ವದಿಸು ಎಂದೇ ನಾನು ಸದಾ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಗುರುವಾರ ಸಲ್ಮಾನ್‌ನನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಫಿರೋಝ್ ಹೇಳಿದ.

ಸಲ್ಮಾನ್‌ನಿಂದ ಏನಾದರೂ ಆರ್ಥಿಕ ನೆರವು ಸಿಗಬಹುದೇ ಎಂದು ಫಿರೋಝ್ ಈಗ ಕಾಯುತ್ತಿದ್ದಾನೆ. ನನಗಂತೂ ಓದಲು ಆಗಲಿಲ್ಲ…ಅಂಗೂಠಾ ಛಾಪ್ ಆಗಿಬಿಟ್ಟೆ. ಆದರೆ ನನ್ನ ಗತಿ ನನ್ನಿಬ್ಬರು ಪುತ್ರರಿಗೆ ಬರಬಾರದು. ಪರಿಹಾರವಾಗಿ ನನಗೇನಾದರೂ ಲಭಿಸಿದರೆ ಅವರಿಬ್ಬರನ್ನೂ ಚೆನ್ನಾಗಿ ಓದಿಸುತ್ತೇನೆ ಎಂದಾತ ನೋವಿನಿಂದ ನುಡಿದ.

ಹಾಗಂತ ಅಂದಿನ ಅಪಘಾತದ ಎಲ್ಲ ಬಲಿಪಶುಗಳೂ ಸಲ್ಮಾನ್ ಪರವಾಗಿ ಮಾತನಾಡುವುದಿಲ್ಲ. ತಮ್ಮ ಬದುಕುಗಳನ್ನು ಹಾಳು ಮಾಡಿದ್ದಕ್ಕಾಗಿ ಆರಂಭದಲ್ಲಿ ಸಲ್ಮಾನ್‌ಗೆ ತಾನು ಶಾಪ ಹಾಕುತ್ತಿದ್ದೆ. ಕ್ರಮೇಣ ಅದು ಕಡಿಮೆಯಾಗಿದೆಯಾದರೂ ಅಪಘಾತವನ್ನು ಯಾರಾದರೂ ನೆನಪಿಸಿದಾಗ ಈಗಲೂ ತಾನು ಆತನನ್ನು ದ್ವೇಷಿಸುತ್ತೇನೆ ಎಂದು ಅಂದು ಗಾಯಗೊಂಡಿದ್ದ ನಾಲ್ವರಲ್ಲಿ ಓರ್ವನಾಗಿದ್ದ ಮುಹಮ್ಮದ್ ಅಬ್ದುಲ್ಲಾ ಶೇಖ್ ಹೇಳಿದ. ಇತ್ತಿಚಿಗಷ್ಟೇ ತನ್ನ ಸ್ವಂತ ಊರಿಗೆ ವಾಪಸಾಗಿರುವ ಶೇಖ್ ಪ್ರಕರಣದಲ್ಲಿನ ಬೆಳವಣಿಗೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದರಿಂದ ತನ್ನ ಖಿನ್ನತೆ ಇನ್ನಷ್ಟು ಹೆಚ್ಚುತ್ತದೆ ಎನ್ನುವ ಆತನಿಗೆ 2007ರಲ್ಲಿ ಮೂರು ಲಕ್ಷ ರೂ.ಪರಿಹಾರ ದೊರಕಿತ್ತಾದರೂ ವಕೀಲರ ಫೀಜು 1.2 ಲ.ರೂ.ಗಳನ್ನು ತಿಂದು ಹಾಕಿತ್ತು. ಅಪಘಾತದ ಎಲ್ಲ ಬಲಿಪಶುಗಳದ್ದೂ ಒಂದೇ ಪಲ್ಲವಿ…ಅದು ಪರಿಹಾರ ಕುರಿತು. ಪ್ರಾಸಿಕ್ಯೂಷನ್ ವಕೀಲರು ನಮಗೆ ಹೆಚ್ಚಿನ ಪರಿಹಾರಕ್ಕಾಗಿ ಒತ್ತಡ ಹೇರಬೇಕಾಗಿತ್ತು ಎಂದು ಕಲೀಂ ಪಠಾಣ್(35) ಹೇಳಿದ. ಅಪಘಾತದ ಬಳಿಕ ಗಾಯಗಳು ಆಗಾಗ್ಗೆ ಉಲ್ಬಣಿಸುತ್ತಿದ್ದರಿಂದ ನಿಯಮಿತವಾಗಿ ಕೆಲಸ ಮಾಡಲು ಸಾಧ್ಯವಾಗದೆ ಆತ ತನ್ನೂರು ಉತ್ತರ ಪ್ರದೇಶದ ಸುಲ್ತಾನಪುರಕ್ಕೆ ಮರಳಿದ್ದಾನೆ.

ಸಲ್ಮಾನ್‌ಗೆ ಶಿಕ್ಷೆಯಾಗಲಿ ಬಿಡಲಿ…ನಮಗದರಲ್ಲಿ ಆಸಕ್ತಿಯಿಲ್ಲ. ನನ್ನ ಮಗ ತನ್ನ ಯೌವನವನ್ನೇ ಕಳೆದುಕೊಂಡುಬಿಟ್ಟ. ಇಂದಿಗೂ ಆತನಿಗೆ ಸರಿಯಾಗಿ ನಡೆಯಲಾಗುವುದಿಲ್ಲ, ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ಆತನಿಗೆ ಚಿಕಿತ್ಸೆ ಕೊಡಿಸುವುದಾಗಿ ಸಲ್ಮಾನ್ ಕಡೆಯವರು ಹೇಳಿದ್ದರು, ಆದರೆ ಆ ಭರವಸೆ ಭರವಸೆಯಾಗಿಯೇ ಉಳಿಯಿತು ಎಂದು ಇನ್ನೋರ್ವ ಸಂತ್ರಸ್ತ, ಗೊಂಡಾದ ಮುಸ್ಲಿಮ್ ಶೇಖ್(39) ನ ತಂದೆ ನಿಯಾಮತ್ ಶೇಖ್ ನಿಡುಸುಯ್ದ.

ನಾವು ಬಡವರು,ನಮ್ಮ ಸಂಕಟಗಳನ್ನು ಕೇಳುವವರಾರೂ ಇಲ್ಲ. ನಾವೆಲ್ಲವನ್ನೂ ಮರೆತು ಬಿಟ್ಟಿದ್ದೇವೆ ಮತ್ತು ಅಪಘಾತದ ಬಗ್ಗೆ ನಮ್ಮ ತಂದೆಯೊಂದಿಗೆ ಚರ್ಚಿಸುವುದೂ ಇಲ್ಲ ಎಂದು ಅಪಘಾತದಲ್ಲಿ ಗಾಯಗೊಂಡಿದ್ದ ಮನ್ನುನ ಪುತ್ರ ಅಯೂಬ್ ಖಾನ್ ಹೇಳಿದ. ತಂದೆ-ಮಗ ಈಗ ಘಾಟಕೋಪರ್‌ನ ಕೊಳಗೇರಿಯಲ್ಲಿನ ಬೇಕರಿಯೊಂದರಲ್ಲಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

2002ರ ಅಪಘಾತದಲ್ಲಿ ಗಾಯಗೊಂಡಿದ್ದ ಎಲ್ಲ ನಾಲ್ವರು ಕಾರ್ಮಿಕರು ಆ ಬಳಿಕ ತಮ್ಮ ಕೆಲಸ ಬಿಟ್ಟಿದ್ದರು. ಇಬ್ಬರು ತಮ್ಮ ಹುಟ್ಟೂರುಗಳಿಗೆ ವಾಪಸಾಗಿದ್ದರೆ, ಇಬ್ಬರು ಇನ್ನೂ ಬಾಂದ್ರಾ ಮತ್ತು ಘಾಟಕೋಪರ್‌ನ ಬೇಕರಿಗಳಲ್ಲಿ ದುಡಿಯುತ್ತಿದ್ದಾರೆ.

Write A Comment