ಮುಂಬೈ

ವಿಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟಿಗೆ ಛೋಟಾ ರಾಜನ್

Pinterest LinkedIn Tumblr

chota

ಮುಂಬೈ: 2011ರ ಪತ್ರಕರ್ತ ಜೆ.ಡೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಛೋಟಾ ರಾಜನ್​ನನ್ನು ತಿಹಾರ್ ಸೆರೆಮನೆಯಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕವಾಗಿ ಗುರುವಾರ ಇಲ್ಲಿನ ವಿಶೇಷ ಮೋಕಾ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು.

ಕೆಲ ಸಮಯ ಹಿಂದೆ ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದಲ್ಲಿ ಆಸ್ಟ್ರೆಲಿಯಾದಿಂದ ಬಂದಿಳಿಯುತ್ತಿದ್ದಂತೆ ಬಂಧನಕ್ಕೆ ಒಳಗಾಗಿದ್ದ ಛೋಟಾ ರಾಜನ್​ನನ್ನು ಬಳಿಕ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಭಾರತಕ್ಕೆ ಕರೆತರಲಾಗಿದ್ದ ಛೋಟಾ ರಾಜನ್​ನನ್ನು ಜನವರಿ ಏಳರಂದು ತನ್ನ ಮುಂದೆ ಹಾಜರುಪಡಿಸುವಂತೆ ವಿಶೇಷ ನ್ಯಾಯಾಧೀಶ ಎ.ಎಲ್. ಪನ್ಸಾರೆ ಕಳೆದ ಡಿಸೆಂಬರ್ 22ರಂದು ವಾರಂಟ್ ಜಾರಿಗೊಳಿಸಿದ್ದರು.

ಈದಿನ ತಮ್ಮ ಮುಂದೆ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಹಾಜರಾದ 54ರ ಛೋಟಾ ರಾಜನ್ ಜೊತೆ ಮರಾಠಿಯಲ್ಲಿ ಸಂಭಾಷಣೆ ನಡೆಸಿದ ವಿಶೇಷ ನ್ಯಾಯಾಧೀಶರು ಹೆಸರು ಹೇಳುವಂತೆ ಸೂಚಿಸಿದಾಗ ರಾಜನ್ ‘ನನ್ನ ಹೆಸರು ರಾಜೇಂದ್ರ ಸದಾಶಿವ ನಿಕಾಲ್ಜೆ’ ಎಂದು ಉತ್ತರಿಸಿದ. ಬಳಿಕ ಜೆ ಡೇ ಪ್ರಕರಣವನ್ನು ವಿವರಿಸಿದ ನ್ಯಾಯಾಧೀಶರು ಬಳಿಕ ರಾಜನ್​ನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಜನವರಿ 19ರಂದು ಮುಂದಿನ ವಿಚಾರಣೆ ನಡೆಸಲಾಗುವುದು, ಆಗ ಆತನ ವಿರುದ್ಧ ದೋಷಾರೋಪ ಹೊರಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು. ಇದೇ ಸಂದರ್ಭದಲ್ಲಿ ದೋಷಾರೋಪ ಪಟ್ಟಿಯನ್ನು ರಾಜನ್​ಗೆ ನೀಡದೇ ಇದ್ದುದಕ್ಕಾಗಿ ಮುಂಬೈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಅವರು ದೋಷಾರೋಪ ಪಟ್ಟಿಯನ್ನು ಒದಗಿಸುವಂತೆ ನಿರ್ದೇಶನ ನೀಡಿದರು.

Write A Comment