ಮುಂಬೈ

ಕದ್ದ ಚಿನ್ನದ ಸರವನ್ನು ಹೊಟ್ಟೆಯಿಂದ ಹೊರಗೆಳೆದ ಬಾಳೆಹಣ್ಣು!

Pinterest LinkedIn Tumblr

banana-ಮುಂಬೈ: ಬಾಳೆ ಹಣ್ಣಿಗೆ ಎಂತಹ ಅದ್ಭುತ ಶಕ್ತಿ ಇದೆ ಎಂಬುದು ಗೊತ್ತಿದೆಯೇ? ಹೊಟ್ಟೆ ಕೆಟ್ಟಿದ್ದರೆ ಮಲಗುವ ಮುನ್ನ ಬಾಳೆಹಣ್ಣು ತಿನ್ನಿ ಎಂದು ಸಲಹೆ ಮಾಡುವುದನ್ನು ನೀವು ಕೇಳಿರಬಹುದು. ಮುಂಬೈ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕದ್ದ ಮಾಲು ಪತ್ತೆ ಹಚ್ಚಲು ಬಾಳೆಹಣ್ಣನ್ನು ಬಳಸಿದ್ದಾರೆ.

ವಿಚಿತ್ರವಾದರೂ ನೈಜ ಘಟನೆ ಇದು. ಮುಂಬೈಯ ಘಾಟ್ಕೋಪರ್ ಪೂರ್ವ ಮೀನುಮಾರುಕಟ್ಟೆಯಲ್ಲಿ ಗೋಪಿ ಆರ್. ಘರ್​ವಾರೆ ಎಂಬಾತ ಮಹಿಳೆಯೊಬ್ಬರ ಬಳಿಯಿದ್ದ 25 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಓಡಿದ. ಆಕೆ ಬೊಬ್ಬಿರಿದಾಗ, ಸುತ್ತ ಮುತ್ತಣ ನಿವಾಸಿಗಳು ಕಳ್ಳನನ್ನು ಹಿಡಿದು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದರು. ಪಂತ್​ನಗರ ಪೊಲೀಸ್ ಠಾಣೆಯಲ್ಲಿ ಆತನನ್ನು ವಿಚಾರಣೆಗೆ ಗುರಿಪಡಿಸಿದ ತನಿಖಾಧಿಕಾರಿ ಕೈಲಾಸ್ ತಿರ್ಮರೆ ಅವರಿಗೆ ಕದ್ದ ಚಿನ್ನ ಸಿಗಲಿಲ್ಲ. ಸಮೀಪದ ರಾಜವಾಡಿ ಆಸ್ಪತ್ರೆಗೆ ಒಯ್ದು ಕ್ಷ-ಕಿರಣ ಪರೀಕ್ಷೆಗೆ ಒಳಪಡಿಸಿದಾಗ ಕರುಳಿನಲ್ಲಿ ಹೊಳೆಯುತ್ತಿದ್ದ ಚಿನ್ನ ಪತ್ತೆಯಾಯಿತು. ಮರುದಿನ ಮತ್ತೊಮ್ಮೆ ಕ್ಷ-ಕಿರಣ ಪರೀಕ್ಷೆ ನಡೆಸಿ ಹೊಟ್ಟೆಯಲ್ಲಿ ಚಿನ್ನ ಇದ್ದುದನ್ನು ಖಾತರಿ ಪಡಿಸಿಕೊಂಡ ಪೊಲೀಸರು ರಾತ್ರಿಯಿಂದ ಬೆಳಗಿನವರೆಗೆ ಕಳ್ಳನಿಗೆ ಬುಟ್ಟಿ ಬಾಳೆ ಹಣ್ಣು ತಿನ್ನಿಸಿದರು. ಬರೋಬ್ಬರಿ 48 ಬಾಳೆಹಣ್ಣಿನ ಸ್ವಾಹಾ ಬಳಿಕ ಮರುದಿನ ಮಲದ ಜೊತೆಗೆ ಚಿನ್ನ ಹೊರಬಂತು. ಆತನ ಕೈಯಿಂದಲೇ ಅದನ್ನು ಸ್ವಚ್ಛಗೊಳಿಸಿದ ಪೊಲೀಸರು ಬಳಿಕ ಪ್ರಕರಣ ದಾಖಲಿಸಿದರು.

ಮುಂಬೈ ಪೊಲೀಸರಿಗೆ ಇದು ಹೊಸತಲ್ಲವಲ್ಲವಂತೆ. ಸುಮಾರು 60,000 ರೂಪಾಯಿ ಮೌಲ್ಯದ ಪೆಂಡೆಂಟ್​ನುಂಗಿದ್ದ ಕಳ್ಳನೊಬ್ಬನಿಂದಲೂ ಇದೇ ರೀತಿ ‘ಬಾಳೆ ಹಣ್ಣು ಪ್ರಯೋಗ’ ನಡೆಸಿ ಪೊಲೀಸರು ಪೆಂಡೆಂಟ್​ನ್ನು ಹೊರತೆಗೆದಿದ್ದರಂತೆ. ಮತ್ತೊಂದು ಪ್ರಕರಣದಲ್ಲಿ ಕಳುವಾಗಿದ್ದ ಮಂಗಲಸೂತ್ರವೂ ಬಾಳೆಹಣ್ಣು- ಲೀಟರ್​ಗಟ್ಟಲೆ ಕ್ಷೀರ ಸೇವೆಯ ಬಳಿಕ ಇದೇ ರೀತಿ ಕಳ್ಳನ ಉದರದಿಂದ ಹೊರಬಂದಿತ್ತು ಎನ್ನುತ್ತವೆ ಪೊಲೀಸ್ ಮೂಲಗಳು.

Write A Comment