ಮುಂಬೈ, ಜ.16-ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದ ಅನ್ನದಾತನೊಬ್ಬನ ದಾರುಣ ಅಂತ್ಯ ಎಂಥವರನ್ನೂ ದಂಗುಬಡಿಸುವಂತಿದೆ. ಅದು ನಡೆದದ್ದು ಹೀಗೆ. ಸಾಲಬಾಧೆಯಿಂದ ನರಳುತ್ತಿದ್ದ 40 ವರ್ಷದ ರೈತ ಶೇಷ್ರಾವ್ ಶೆಜುಲ್ ತನ್ನ ಹಳ್ಳಿಯಲ್ಲಿರುವ ಎಲ್ಲರ ಮನೆಗೂ ಹೋಗಿ ತನ್ನ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನಿಸಿದ್ದಾನೆ. ಈತ ಜೋಕ್ ಮಾಡುತ್ತಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಮಾರನೆ ದಿನ ಅದೇ ರೈತ ಮರವೊಂದಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾದಾಗಲೇ ಜನರಿಗೆ ಅವನ ಪರಿಸ್ಥಿತಿಯ ಗಂಭೀರತೆಯ ಅರಿವಾಗಿದೆ. ಮಾರನೆ ದಿನ ಬೆಳಗ್ಗೆ ಎದ್ದು ಹೊರಬಂದ ಜನ ಹಾಗೂ ಅವನ ಕುಟುಂಬದವರು ಮನೆ ಮುಂದಿನ ಬೇವಿನ ಮರದಲ್ಲಿ ತುಗಾಡುತ್ತಿದ್ದ ಶೇಷರಾವ್ನ ಕಳೇಬರ ಕಂಡು ಹೌಹಾರಿದ್ದಾರೆ.
ಶೇಷ್ರಾವ್ಗೆ ಎರಡು ಎಕರೆ ಜಮೀನಿದೆ. ಅದರಲ್ಲಿ ಸೋಯಾಬೀನ್ ಬಿತ್ತನೆ ಮಾಡಿದ್ದಾನೆ. ಬರದ ಕಾರಣದಿಂದ ಎಲ್ಲ ನಾಶವಾಗಿ ಹೋಗಿದೆ. ಇದಕ್ಕಾಗಿ 80ಸಾವಿರ ರೂ. ಸಾಲ ಮಾಡಿದ್ದ. ಈಗ ಸಾಲ ತೀರಿಸಬೇಕು, ಅಷ್ಟೇ ಅಲ್ಲದೆ ಮಗಳ ಮದುವೆ ಮಾಡಬೇಕು. ಹೀಗೇ…… ದಾರಿಕಾಣದ ಶೇಷ್ರಾವ್ ನೇಣಿಗೆ ಶರಣಾಗಿದ್ದನೆ.
ದುಃಖತಪ್ತ ಕುಟುಂಬದವರು, ಗ್ರಾಮಸ್ಥರು ಅತ್ಯಂತ ನೋವಿನಿಂದ ಶೇಷರಾವ್ ಅಂತ್ಯಕ್ರಿಯೆ ನಡೆಸಿದ್ದಾರೆ. ಈಗ ಇದು ಬಿಜೆಪಿ-ಶಿವಸೇನೆ ಮೈತ್ರಿ ರಾಜಕೀಯದಲ್ಲಿ ಪರಸ್ಪರ ಕೆಸರೆರಚಾಟಕ್ಕೆ ದಾರಿಯಾಗಿದೆ. ಯಾರು ಯಾಕೆ ಸತ್ತರೂ ರಾಜಕೀಯ ಪಕ್ಷಗಳಂತೂ ಸಾವಿನರಾಜಕೀಯ ಮಾಡುವುದು ಎಂಥ ದುರಂಥ ಅಲ್ಲವೇ…?