ಮುಂಬೈ: ಇತ್ತೀಚಿನ ದಿನಗಳಲ್ಲಿ ನಡೆದ ಖ್ಯಾತ ಬರಹಗಾರರ ಹತ್ಯೆಯನ್ನು ಖಂಡಿಸಿರುವ ಇತಿಹಾಸಕಾರ ರಾಮಚಂದ್ರ ಗುಹ ಬರಹಗಾರರ ಹತ್ಯೆಯನ್ನು ತಡೆಗಟ್ಟಲು ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾಗುತ್ತಿರುವ ಧಕ್ಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಾಮಚಂದ್ರ ಗುಹಾ ಮೋದಿ ಸರ್ಕಾರ ದೇಶ ಕಂಡಂತಹ ಅತ್ಯಂತ ಬುದ್ಧಿಜೀವಿ ವಿರೋಧಿ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ರಾಮಚಂದ್ರ ಗುಹಾ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಕ್ಕಾಗಿ ನರೇಂದ್ರ ಧಾಬೋಲ್ಕರ್, ಸಿಪಿಐ ನಾಯಕ ಗೋವಿಂದ್ ಪನ್ಸಾರೆ ಹಾಗೂ ಕಲ್ಬುರ್ಗಿ ಅವರನ್ನು ಬಲಪಂಥೀಯ ಗುಂಪಿನವರು ಹತ್ಯೆ ಮಾಡಿದರು. ಈ ಎಲ್ಲಾ ಹತ್ಯೆಗಳನ್ನು ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರಗಳು ತಡೆಗಟ್ಟಬಹುದಿತ್ತು ಎಂದು ಗುಹಾ ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಾ ರೀತಿಯ ವಿರೋಧಾಭಾಸಗಳನ್ನು ನಿಷೇಧಿಸುತ್ತಾ ಹೋದರೆ ದೇಶ ಅರಾಜಕತೆಯತ್ತ ಸಾಗುತ್ತದೆ ಎಂದಿರುವ ರಾಮಚಂದ್ರ ಗುಹಾ 1980 ರಲ್ಲಿ ರಾಜೀವ್ ಗಾಂಧಿ ಸಲ್ಮಾನ್ ರಶ್ದಿಯ ಸಟಾನಿಕ್ ವರ್ಸಸ್ ಪುಸ್ತಕವನ್ನು ನಿಷೇಧಿಸಿದ್ದನ್ನು ವಿರೋಧಿಸಿದ್ದಾರೆ.