ಮುಂಬೈ

ಟ್ರಸ್ಟೀಗಳು ಮಹಿಳೆಯರ ಪ್ರವೇಶ ತಡೆಯುವಂತಿಲ್ಲ: “ಮಹಾ” ಸರ್ಕಾರ

Pinterest LinkedIn Tumblr

Haji-Ali-Dargah-Mumbaiಮುಂಬೈ: ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿರುವ ಕ್ರಮವನ್ನು ವಿರೋಧಿಸಿರುವ ಮಹಾರಾಷ್ಟ್ರ ಸರ್ಕಾರ, ಯಾವುದೇ ಕಾರಣಕ್ಕೂ ಟ್ರಸ್ಟೀಗಳು ಮಹಿಳೆಯರು ದರ್ಗಾ  ಪ್ರವೇಶ ಮಾಡುವುದನ್ನು ನಿರ್ಬಂಧಿಸುವಂತಿಲ್ಲ ಎಂದು ಹೇಳಿದೆ.

ಈ ಸಂಬಂಧ ಬಾಂಬೇ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಹೇಳಿಕೆ ನೀಡಿರುವ ಸರ್ಕಾರ, ಟ್ರಸ್ಟೀಗಳು ತಮ್ಮದೇ ಆದ ವ್ಯಾಖ್ಯಾನಗಳಿಂದ ದರ್ಗಾಕ್ಕೆ ಮಹಿಳೆಯರು ಪ್ರವೇಶ  ಮಾಡುವುದನ್ನು ತಡೆಯಲೆತ್ನಿಸುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ. ಮಹಿಳೆಯರಿಗೂ ದರ್ಗಾ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಹೇಳಿದೆ.

ಇತ್ತ ಮಹಾಸರ್ಕಾರದ ಒತ್ತಾಯವನ್ನು ನಿರಾಕರಿಸಿರುವ ದರ್ಗಾದ ಆಡಳಿತ ಮಂಡಳಿ ಸದಸ್ಯರು, ಈ ಹಿಂದಿನ ವಿಚಾರಣೆಯಲ್ಲಿ ಮುಸ್ಲಿಂ ಸಂತರ ಸಮಾಧಿ ಸ್ಥಳಕ್ಕೆ ಮಹಿಳೆಯರು ಪ್ರವೇಶ  ಮಾಡುವುದು ಘೋರವಾದ ಪಾಪ. ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿದರೆ ಸಂತರನ್ನು ಅವಮಾನಿಸಿದಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಮಹಿಳೆಯರಿಗೆ ದರ್ಗಾ ಪ್ರವೇಶಕ್ಕೆ  ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.

ಇನ್ನು ಈ ಸಂಬಂಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲಿ ಕಾದುನೋಡುವ ತಂತ್ರ ಅನುಸರಿಸುತ್ತಿರುವ ಬಾಂಬೇ ಹೈಕೋರ್ಟ್, ಶಬರಿ ಮಲೆಗೆ ಮಹಿಳೆಯರ  ಪ್ರವೇಶಕ್ಕೆ ಅವಕಾಶ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮತ್ತು ತೀರ್ಪಿಗಾಗಿ ಕಾದು ನೋಡುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನಿರ್ಧಾರದ ಬಳಿಕ ಬಾಂಬೇ  ಹೈಕೋರ್ಟ್ ತನ್ನ ತೀರ್ಪು ನೀಡುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಜನವರಿ 29ರಂದು ಮಹಾರಾಷ್ಟ್ರದ ಖ್ಯಾತ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂದು ಆಗ್ರಹಿಸಿ ಕೆಲ ಮಹಿಳಾ ಪರ ಸಂಘಟನೆಗಳು ಮತ್ತು ಮುಸ್ಲಿಂ  ಸಂಘಟನೆಗಳು ದರ್ಗಾದ ಹೊರವಲಯದಲ್ಲಿ ಪ್ರತಿಭಟನೆ ನಡೆಸಿದ್ದವು.

Write A Comment