ಮುಂಬೈ: ಶಿವಸೇನೆ ಮಾಜಿ ಮುಖ್ಯಸ್ಥ ದಿವಂಗತ ಬಾಳ ಠಾಕ್ರೆ ಅವರನ್ನು ಹತ್ಯೆ ಮಾಡಲು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಯತ್ನ ನಡೆಸಿತ್ತು ಎಂದು 26/11ರ ಮುಂಬೈ ದಾಳಿಯ ಆರೋಪಿ ಡೇವಿಡ್ ಹೆಡ್ಲಿ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ.
ಈ ಕುರಿತಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಮಾತನಾಡಿರುವ ಹೆಡ್ಲಿ, ಎಲ್ ಇಟಿ ಶಿವಸೇನೆ ನಾಯಕ ಮುಖ್ಯಸ್ಥನನ್ನು ಹತ್ಯೆ ಮಾಡಲು ಯೋಜನೆ ರೂಪಿಸಿತ್ತು. ಅವರ ಹೆಸರು ಬಾಳ ಠಾಕ್ರೆ. ಬಾಳ ಠಾಕ್ರೆಯನ್ನು ಕೊಲ್ಲಲು ಪ್ರತೀ ಬಾರಿ ಅವಕಾಶವನ್ನು ಹುಡುಕುತ್ತಿತ್ತು.
ಬಾಳ ಠಾಕ್ರೆ ಶಿವಸೇನೆ ಮುಖ್ಯಸ್ಥ ಎಂಬುದು ನನಗೆ ಗೊತ್ತಿತ್ತು. ಹತ್ಯೆ ಯೋಜನೆಯಲ್ಲಿ ಮೊದಲು ನನ್ನ ಕೈವಾಡವಿರಲಿಲ್ಲ. ಎಲ್ ಇಟಿ ಹತ್ಯೆಗೆ ಸಂಚು ರೂಪಿಸಿತ್ತು. ಹೇಗೆ ಸಂಚು ರೂಪಿಸಿತ್ತು ಎಂಬುದು ನನಗೆ ಗೊತ್ತಿಲ್ಲ. ಹತ್ಯೆಗೆ ಸಂಘಟನೆ ವ್ಯಕ್ತಿಯೊಬ್ಬನನ್ನು ನಿಯೋಜಿಸಿತ್ತು. ಆದರೆ, ಆತನನ್ನು ಪೊಲೀಸರು ಬಂಧಿಸಿದ್ದರು. ನಂತರ ಆತ ಬಂಧನದಿಂದ ತಪ್ಪಿಸಿಕೊಂಡಿದ್ದ ಎಂದು ಹೇಳಿದ್ದಾನೆ.
ಇದೇ ವೇಳೆ ಪಾಕಿಸ್ತಾನಕ್ಕೆ ಹೋಗಲು ಎಲ್ ಇಟಿ ಆರ್ಥಿಕ ನೆರವು ನೀಡಿತ್ತು ಎಂಬ ಆರೋಪಗಳನ್ನು ತಳ್ಳಿಹಾಕಿರುವ ಹೆಡ್ಲಿ, ಎಲ್ ಇಟಿ ಯಿಂದ ನಾನು ಯಾವುದೇ ಹಣವನ್ನು ಪಡೆದಿಲ್ಲಿ. ಇದು ಅಸಂಬದ್ಧವಾದದ್ದು. ನಾನು ಎಲ್ ಇಟಿಗೆ ಹಣವನ್ನು ನೀಡಿದ್ದೇನೆ. 60-70 ಲಕ್ಷ ಪಾಕಿಸ್ತಾನ ಹಣವನ್ನು ಸಂಘಟನೆಗೆ ನೀಡಿದ್ದೇನೆ. 2006ರವರೆಗೂ ಎಲ್ ಇಟಿಗೆ ಹಣವನ್ನು ಪೂರೈಸಿದ್ದೇನೆಂದು ಹೇಳಿದ್ದಾನೆ.