ಮುಂಬೈ (ಪಿಟಿಐ): ‘ಹೃತಿಕ್ ರೋಷನ್ ನನಗೆ ನೀಡಿರುವ ಕಾನೂನು ನೋಟಿಸ್ ಅನ್ನು ವಾಪಸ್ ಪಡೆಯಬೇಕು ಇಲ್ಲವೇ ಮುಂದಿನ ಕ್ರಮಕ್ಕೆ ಸಿದ್ಧರಾಗಬೇಕು’ ಎಂದು ಬಾಲಿವುಡ್ ನಟಿ ಕಂಗನಾ ರನೋಟ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ವಕೀಲರ ಮೂಲಕ ಹೇಳಿಕೆ ನೀಡಿರುವ ಕಂಗನಾ, ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಹೃತಿಕ್ ಮಾಧ್ಯಮಗಳ ಮೊರೆ ಹೊಕ್ಕಿದ್ದಾರೆ ಎಂದೂ ಆರೋಪಿಸಿದ್ದಾರೆ. ‘ಹೃತಿಕ್ ತಮ್ಮ ನೋಟಿಸ್ ವಾಪಸ್ ಪಡೆದು, ಸಾರ್ವಜನಿಕವಾಗಿ ತಮ್ಮ ಬಳಿ ಕ್ಷಮೆಯಾಚಿಸಿದಲ್ಲಿ ಕಂಗನಾ ವಿವಾದಕ್ಕೆ ಇತಿಶ್ರೀ ಹೇಳುವರು’ ಎಂದು ಕಂಗನಾ ಪರ ವಕೀಲ ರಿಜ್ವಾನ್ ಸಿದ್ಧಿಕಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘ನೋಟಿಸ್ ವಾಪಸ್ ಪಡೆಯುವುದನ್ನು ಬಿಟ್ಟರೆ ಹೃತಿಕ್ ಬಳಿ ಬೇರೆ ಆಯ್ಕೆಗಳಿಲ್ಲ. ವಿಷಯಾಂತರ ಮಾಡುವುದು ಮತ್ತು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಮಾಧ್ಯಮಗಳ ಮೊರೆ ಹೋಗುವುದು… ಇವೆಲ್ಲಾ ವಿವಾದವನ್ನು ಮತ್ತಷ್ಟು ಕಗ್ಗಂಟಾಗಿಸುತ್ತದೆ. ಅಲ್ಲದೆ, ಇದರಿಂದ ನ್ಯಾಯ ವಿತರಣೆ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬವಾಗುತ್ತದೆ’ ಎಂದು ಸಿದ್ಧಿಕಿ ಹೇಳಿದ್ದಾರೆ.
ಕಂಗನಾ ವಿರುದ್ಧ ಫೆಬ್ರುವರಿಯಲ್ಲಿ ನೋಟಿಸ್ ಜಾರಿ ಮಾಡಿದ್ದ ಹೃತಿಕ್, ‘ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಬೇಕು ಹಾಗೂ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ಕೂಡ, ಹೃತಿಕ್ಗೆ 21 ಪುಟಗಳ ನೋಟಿಸ್ ನೀಡಿದ್ದರು.
‘ಮಾರ್ಚ್ 1ರಂದು ಕಂಗನಾ ನೀಡಿರುವ ನೋಟಿಸ್ಗೆ ಹೃತಿಕ್ ಉತ್ತರಿಸಿಲ್ಲ. ಹೃತಿಕ್ ಪರ ಕೆಲ ಆಯ್ದ ಮಾಧ್ಯಮಗಳು ವಕಾಲತ್ತು ವಹಿಸಿದ್ದು. ಪ್ರಕರಣ ವಿಷಯಾಂತರವಾಗುತ್ತಿದೆ. ಈ ವಿಷಯ ಪ್ರತಿಬಾರಿಯೂ ಚರ್ಚೆಯಾದಾಗ, ಕಂಗನಾ ಹೆಸರು, ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಹೃತಿಕ್ ತಾವು ನೀಡಿರುವ ನೋಟಿಸ್ನ್ನು ವಾಪಸ್ ಪಡೆದಲ್ಲಿ ಪ್ರಕರಣ ಇತ್ಯರ್ಥ ಕಾಣಬಹುದು. ಆಗ ಕಂಗನಾ ಕೂಡಾ ಹೃತಿಕ್ಗೆ ನೀಡಿರುವ ಪ್ರತಿ ನೋಟಿಸ್ ಅನ್ನು ವಾಪಸ್ ಪಡೆಯುವರು’ ಎಂದು ವಕೀಲ ಸಿದ್ಧಿಕಿ ತಿಳಿಸಿದ್ದಾರೆ.