ಮುಂಬೈ: ರೈಲ್ವೆಯಲ್ಲಿ ತಾವು ಬಯಸಿದ ಸೀಟು ನೀಡಲಿಲ್ಲ ಎಂಬ ಕಾರಣಕ್ಕೆ ಶಿವಸೇನೆಯ ಶಾಸಕರೊಬ್ಬರು ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಸ್(ಸಿಎಸ್ ಟಿ) ನಿಲ್ದಾಣದಲ್ಲಿ ಚೈನ್ ಎಳೆದು ರೈಲನ್ನು ನಿಲ್ಲಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಸಾವಿರಾರು ಪ್ರಯಾಣಿಕರಿಗೆ ತೊಂದರೆಯನ್ನುಂಟುಮಾಡಿದ ಘಟನೆ ಕಳೆದ ರಾತ್ರಿ ನಡೆದಿದೆ.
ನಂಡೇಡ್ ವಿಧಾನಸಭಾ ಕ್ಷೇತ್ರದ ಶಾಸಕ ಹೇಮಂತ್ ಪಾಟೀಲ್ ಮತ್ತು ಅವರ ಸಹಚರರೊಬ್ಬರಿಗೆ ದೇವಗಿರಿ ಎಕ್ಸ್ ಪ್ರೆಸ್ ರೈಲಿನ 2ನೇ ಎಸಿ ಬೋಗಿಯ 35 ಮತ್ತು 36 ಸಂಖ್ಯೆಯ ಬದಿಯ ಸೀಟುಗಳು ಮೀಸಲಾಗಿದ್ದವು. ಆದರೆ ಅವರು ಅಲ್ಲಿ ಕೂರಲು ಒಪ್ಪಲಿಲ್ಲ. ಹೀಗಾಗಿ ರೈಲು ಪ್ಲಾಟ್ ಫಾರಂ ಬಿಟ್ಟು ಮುಂದೆ ಹೋಗದಂತೆ ಚೈನನ್ನು ಎಳೆಯಲು ತಮ್ಮ ಸಹಚರರಿಗೆ ಹೇಳಿದರು. ನಿನ್ನೆ ರಾತ್ರಿ 9.10ಕ್ಕೆ ಹೊರಡಬೇಕಾಗಿದ್ದ ರೈಲು 93 ನಿಮಿಷ ತಡವಾಗಿ ಅಂದರೆ ರಾತ್ರಿ 9.57ಕ್ಕೆ ಹೊರಟಿತು. ಆದರೆ ಅದನ್ನು ಒತ್ತಾಯಪೂರ್ವಕವಾಗಿ ಮಸ್ಜೀದ್ ರೈಲ್ವೆ ಸ್ಟೇಷನ್ ನಲ್ಲಿ ನಿಲ್ಲಿಸಲಾಯಿತು.ಅಲ್ಲಿಂದ ರೈಲು ರಾತ್ರಿ 10.6ಕ್ಕೆ ಹೊರಟಿತು.
ಶಾಸಕರ ಸಮಸ್ಯೆ ಬಗೆಹರಿಯಲಿಲ್ಲ. ಈ ರೈಲ್ವೆ ತಡವಾದ್ದರಿಂದ ಮತ್ತೆರಡು ರೈಲಾದ ಸಿಎಸ್ ಟಿ-ಮಂಗಳೂರು ಎಕ್ಸ್ ಪ್ರೆಸ್, ಸಿದ್ದೇಶ್ವರ ಎಕ್ಸ್ ಪ್ರೆಸ್ ರೈಲುಗಳು 15 ನಿಮಿಷ ತಡವಾಗಿ ಹೊರಟವು. ಇನ್ನು ನಾಲ್ಕು ಸ್ಥಳೀಯ ರೈಲುಗಳು ಕೂಡ ತಡವಾಗಿ ಹೊರಟವು. ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ಸೇರಿದರು.
”ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುವುದು. ದೇವಗಿರಿ ಎಕ್ಸ್ ಪ್ರೆಸ್ ರೈಲಿನ ಚೈನು ಎಳೆದಿದ್ದರಿಂದ ಸುಮಾರು ಒಂದು ಗಂಟೆ ತಡವಾಯಿತು. ಘಟನೆಗೆ ನಿಖರ ಕಾರಣವೇನೆಂದು ತನಿಖೆ ನಡೆಸುವುದಾಗಿ ಕೇಂದ್ರ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಶಿವಸೇನಾ ವಕ್ತಾರ ಮತ್ತು ಶಾಸಕ ನೀಲಂ ಗೊರೆ ನಿರಾಕರಿಸಿದ್ದಾರೆ. ಹೇಮಂತ್ ಪಾಟೀಲ್ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಈ ಕೆಲಸ ಮಾಡಿರಬಹುದು. ಇದಕ್ಕೆ ನಾನು ಹೇಗೆ ಪ್ರತಿಕ್ರಿಯೆ ನೀಡಲಿ ಎಂದು ಕೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಔರಂಗಾಬಾದ್ ನ ಪ್ರಯಾಣಿಕರೊಬ್ಬರು, ಸಾಮಾನ್ಯ ಪ್ರಯಾಣಿಕರೊಬ್ಬರು ಹೀಗೆ ಮಾಡಿದ್ದರೆ ಜೈಲಿಗೆ ಕಳುಹಿಸುತ್ತಿದ್ದರು. ಜನಪ್ರತಿನಿಧಿಗಳು ಈ ರೀತಿ ಏಕೆ ವರ್ತಿಸುತ್ತಾರೆ? ಎಂದು ಕೇಳಿದರು.
ಜನಪ್ರತಿನಿಧಿಗಳಿಗೆ ಕಾನೂನು ಇಲ್ಲವೇ? ಎಲ್ಲಾ ಕಾನೂನುಗಳು ಸಾಮಾನ್ಯ ಜನರಿಗೆ ಮಾತ್ರವೇ? ಎಂದು ನಂಡೇಡ್ ನ ಮತ್ತೊಬ್ಬ ಪ್ರಯಾಣಿಕ ಸುಹಾಸ್ ಪಾಟೀಲ್ ಹೇಳುತ್ತಾರೆ. ಮಹಾರಾಷ್ಟ್ರ ವಿಧಾನಮಂಡಲ ಅಧಿವೇಶನ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಕ್ಷೇತ್ರಕ್ಕೆ ತೆರಳಲು ದೇವಗಿರಿ ಎಕ್ಸ್ ಪ್ರೆಸ್ ನ 2ನೇ ಎಸಿ ಕೋಚ್ ಗಳನ್ನು ಮೀಸಲಿಡಲಾಗಿತ್ತು.