ಮುಂಬೈ: ವೈದ್ಯೋ ನಾರಾಯಣೋ ಹರಿಃ ಎಂದು ವೈದ್ಯರನ್ನು ಸಾಕ್ಷಾತ್ ದೇವರಿಗೆ ಹೋಲಿಸಲಾಗುತ್ತದೆ. ಆದರೆ ಇಂಥಹ ವೈದ್ಯರು ರೋಗಿಗಳ ಮುಂದೆ ಡಾನ್ಸ್ ಮಾಡಿ ಖುಷಿಪಟ್ಟಿದ್ದಾರೆ.
ಹೌದು, ಮುಂಬೈ ನಗರದ ಚೆೆಂಬೂರ್ನಲ್ಲಿರುವ ಮಾ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ಗಳು ಹಾಗೂ ಡಿ ದರ್ಜೆ ನೌಕರರು ತಮ್ಮ ಮಕ್ಕಳ ಸಹಿತ ಆಸ್ಪತ್ರೆಗೆ ಆಗಮಿಸಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆಸ್ಪತ್ರೆಯಲ್ಲಿ 800ಕ್ಕೂ ಅಧಿಕ ರೋಗಿಗಳಿದ್ದು, ಅರ್ಧದಷ್ಟು ರೋಗಿಗಳನ್ನು ಮಾತ್ರ ತಪಾಸಣೆ ನಡೆಸಲಾಗಿದೆ ಎಂದು ರೋಗಿಗಳು ಆರೋಪಿಸಿದ್ದಾರೆ. ಇಷ್ಟಕ್ಕೂ ವೈದ್ಯರು ಈ ರೀತಿ ನೃತ್ಯ ಮಾಡಲು ಕಾರಣ ಎಂದರೇ ಬಿಎಮ್ ಆರೋಗ್ಯ ಇಲಾಖೆ ಏರ್ಪಡಿಸಿದ್ದ ‘ಹಳದಿ-ಕುಂಕುಮ್ ಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ.
ವಿಡಿಯೋ ಸಹಿತವಾಗಿ ನೀಡಲಾದ ಅನಾಮಿಕ ದೂರೊಂದರಲ್ಲಿ ವೈದ್ಯರ ಈ ನಡುವಳಿಕೆಯನ್ನು ಖಂಡಿಸಲಾಗಿದ್ದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆ ಮುಖ್ಯಸ್ಥ ಡಾ. ವಿಕ್ರಾಂತ ತಿಕೋಣೆ ಪ್ರತಿಕ್ರಿಯಿಸಿ, ಅಂದು ಎಲ್ಲಾ ರೋಗಿಗಳನ್ನು ತಪಾಸಣೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದ ಮಾಹಿತಿಗಳನ್ನು ಈಗಾಗಲೇ ಪೊಲೀಸರಿಗೆ ನೀಡಿದ್ದೇವೆ. ಪ್ರತಿವರ್ಷವು ಮಹಿಳಾ ಉದ್ಯೋಗಸ್ಥರಿಗಾಗಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಸ್ಥಳಾವಕಾಶದ ಅಭಾವದಿಂದ ಆಸ್ಪತ್ರೆಯಲ್ಲಿ ಪೂರ್ವಸಿದ್ಧತೆ ನಡೆಸಲಾಗಿದೆ. ಇನ್ನು ಮುಂದೆ ಆಸ್ಪತ್ರೆಯ ಟೆರೇಸ್ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.