ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಧೈರ್ಯದ ಹುಡುಗಿ ಎಂದು ಹೇಳುವ ಮೂಲಕ ಬಾಲಿವುಡ್ ಬಾದ್‌ಷಾ ಶಾರೂಖ್ ಖಾನ್ ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತಿದ್ದಾರೆ.
‘ಓಹ್ ಮೈ ಗಾಡ್! ದೀಪಿಕಾ ಪಡುಕೋಣೆ ಅವರ ಕ್ಲೀವೇಜ್ ಶೋ’ ಎಂದು ಪ್ರಕಟಿಸಿದ್ದ ದಿನಪತ್ರಿಕೆ ವಿರುದ್ಧ ಕೆಂಡ ಕಾರಿದ್ದ ದೀಪಿಕಾ ಧೈರ್ಯ ಮೆಚ್ಚಿರುವ ಶಾರೂಖ್, ಇಂತಹ ಗಟ್ಸ್ ಯಾರಿಗೂ ಇರುವುದಿಲ್ಲ. ದೀಪಿಕಾ ಪತ್ರಿಕೆಯ ತಪ್ಪನ್ನು ನೇರವಾಗಿ ಹೇಳುವ ಮೂಲಕ ಧೈರ್ಯ ಮೆರೆದಿದ್ದಾರೆ ಎಂದು ಶಾರೂಖ್ ಹೇಳಿದ್ದಾರೆ.
ಕ್ಲೀವೇಜ್ ಶೋ ಕುರಿತು ದೀಪಿಕಾ ಆಡಿರುವ ಮಾತುಗಳು ಅರ್ಥಪೂರ್ಣವಾಗಿವೆ. ಆಕೆ ಹೇಳಿರುವ ರೀತಿಯಲ್ಲಿ ಹೇಳಿಕೆ ನೀಡಲು ನಮಗೆ ಧೈರ್ಯವಿಲ್ಲ. ಆದರೆ, ದೀಪಿಕಾಳ ಮಾತು ಸರಿಯಾಗಿದೆ. ಈ ವಿಚಾರದಲ್ಲಿ ದೀಪಿಕಾಳನ್ನು ಬೆಂಬಲಿಸುತ್ತೇನೆ ಎಂದು ಶಾರೂಖ್ ತಿಳಿಸಿದ್ದಾರೆ.
ನಟ ಶಾರುಖ್ ಖಾನ್ ಜತೆ ನಟಿಸಿದ್ದ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರದ ಬಿಡುಗಡೆ ವೇಳೆ ಬಿಳಿ ವರ್ಣದ ಅನಾರ್ಕಲಿ ಸೂಟ್ ಮತ್ತು ಆಮ್ರಪಾಲಿ ಆಭರಣಗಳನ್ನು ತೊಟ್ಟ ದೀಪಿಕಾ ಅವರ ವಿಡಿಯೋವನ್ನು ದಿನಪತ್ರಿಕೆ ತಮ್ಮ ವೆಬೈಸೈಟ್‌ನಲ್ಲಿ ಹಾಕಿತ್ತು.
ಆ ವಿಡಿಯೋ ಬಗ್ಗೆ ಬರೆಯಲಾಗಿದ್ದ ಸುದ್ದಿ ಏನೆಂದರೆ- ‘ಓಹ್ ಮೈ ಗಾಡ್! ದೀಪಿಕಾ ಪಡುಕೋಣೆ ಅವರ ಕ್ಲೀವೇಜ್ ಶೋ’. ವಿಡಿಯೋದಲ್ಲಿ ದೀಪಿಕಾ ಅವರ ಕ್ಲೀವೇಜನ್ನೆ ಮತ್ತೆ-ಮತ್ತೆ ತೋರಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ನಟಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ತೋರಿಸಿಕೊಂಡಿದ್ದರು.
‘ಹೌದು! ನಾನು ಮಹಿಳೆ. ನನಗೆ ಸ್ತನಗಳಿವೆ. ಕ್ಲೀವೇಜ್ ಕೂಡಾ ಇದೆ. ನಿಮಗೆ ಇದರಿಂದ ಏನಾದರೂ ತೊಂದರೆ ಇದೆಯೇ? ತಮ್ಮನ್ನು ಭಾರತದ ಅಗ್ರ ದಿನಪತ್ರಿಕೆ ಎಂದು ಹೇಳಿಕೊಳ್ಳುವವರಿಗೆ ಇದು ವಾರ್ತೆಯೇ? ಮಹಿಳೆಯರನ್ನು ಗೌರವಿಸಲು ಗೊತ್ತಿಲ್ಲದಿದ್ದರೆ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡಬೇಡಿ!’ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದರು.