ಕೆಜಿಎಫ್, ಸೆ.20: ಪೊಲೀಸರ ಎನ್‍ಕೌಂಟರ್‍ಗೆ ಬಲಿಯಾದ ಒಂದೇ ಕುಟುಂಬದ ನಾಲ್ವರು ರೌಡಿಗಳ ಜೀವನ ಕಥೆಯನ್ನು ಆಧರಿಸಿ ನಿರ್ಮಿಸಲಾಗುತ್ತಿರುವ ಕನ್ನಡ ಸಿನಿಮಾ ಕೋಲಾರ 1990 ಎಂಬ ಚಿತ್ರದ ವಿರುದ್ಧ ಅವರ ತಾಯಿ ಪೌಳಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ನಿರ್ದೇಶಕ ಎ.ಎಂ.ಮಹೇಶ್‍ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಬರ್ಟ್‍ಸನ್ ಪೇಟೆಯಲ್ಲಿ ರೌಡಿಗಳಾದ ತಂಗಂ, ಸಗಾಯಂ, ಗೋಪಿ ಮತ್ತು ಜಯಕುಮಾರ್ ತಾಯಿ ಪೌಳಿ ಅವರು ನನ್ನ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ. ಚಿತ್ರಕಥೆ ತೆಗೆಯುವ ಮುನ್ನ ಅವರೊಂದಿಗೆ ಚರ್ಚಿಸಿ ಅವರ ಒಪ್ಪಿಗೆ ನಂತರ ಶೂಟಿಂಗ್ ಪ್ರಾರಂಭಿಸಲಾಗಿದೆ.
ಸಿನಿಮಾ ಹಕ್ಕಿಗಾಗಿ ಅವರು 10ಲಕ್ಷ ಕೇಳಿದ್ದರು, ನಂತರ 7 ಲಕ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮುಂಗಡವಾಗಿ 1.5 ಲಕ್ಷ ರೂ. ಹಣ ನೀಡಲಾಗಿತ್ತು. ಉಳಿದ ಹಣ ಹಂತಹಂತವಾಗಿ ನೀಡುವುದಾಗಿ ಒಪ್ಪಂದ ಪತ್ರ ಬರೆಸಿಕೊಡಲಾಗಿದೆ ಮತ್ತು ಚಿತ್ರೀಕರಣದ ಮುಹೂರ್ತಕ್ಕೆ ಪೌಳಿ ಅವರೊಂದಿಗೆ ಇನ್ನಿತರರು ಪಾಲ್ಗೊಂಡಿದ್ದರು.
ಆದರೆ ಒಪ್ಪಂದದ ಪ್ರಕಾರ ಹಣವನ್ನು ಪಡೆಯದೆ ಚಿತ್ರೀಕಣದ ವೇಳೆ ಸ್ಥಳಕ್ಕಾಗಮಿಸಿ ನಮಗೆ ಪೂರ್ತಿ ಹಣವನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ನೀಡುವುದಾಗಿ ಮಾತುಕತೆ ನಡೆದಿದ್ದು ಈಗ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅವರು ನಮ್ಮ ವಿರುದ್ದ ನ್ಯಾಯಾಲಯಲ್ಲಿ ದಾವೆ ಹೂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ಯಾವುದೇ ಹಲ್ಲೆ ನಡೆಸಿಲ್ಲ ಎಂದು ತಿಳಿಸಿದ ಅವರು ನಾವು ಸಹ ಕಾನೂನು ರೀತ್ಯ ಹೋರಾಟಕ್ಕೆ ಸಿದ್ದ ಎಂದರು. ಈ ವೇಳೆ ಸಹ ನಿರ್ದೇಶಕ ಸಿ.ಆರ್.ಲಕ್ಷ್ಮೀನಾರಾಯಣ ಸೇರಿದಂತೆ ಮತ್ತಿರರು ಹಾಜರಿದ್ದರು.