ಮನೋರಂಜನೆ

ಆಸ್ಪತ್ರೆಗೆ ದಾಖಲಾಗಿದ್ದ ಶಶಿಕಪೂರ ಆರೋಗ್ಯದಲ್ಲಿ ಚೇತರಿಕೆ

Pinterest LinkedIn Tumblr

shashi-kapoor

ಮುಂಬೈ, ಸೆ.22: ಹೃದಯ ಸೋಂಕು ತಗುಲಿದ್ದರ ಪರಿಣಾಮ ಬಾಲಿವುಡ್‍ನ ಹಿರಿಯ ನಟ ಶಶಿಕಪೂರ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಶಶಿಕಪೂರ್ ಅವರ ಹೃದಯದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಅವರನ್ನು ಕೋಕಿಲಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ.ರಾಮ್‍ನರೇನ್ ತಿಳಿಸಿದ್ದಾರೆ. ಶಶಿಕಪೂರ್ ಅವರಿಗೆ ಹೃದಯ ಸೋಂಕು, ಕೆಮ್ಮು ಮತ್ತು ಉಸಿರಾಟದ ತೊಂದರೆ ಉಂಟಾಗಿದ್ದು, ಸದ್ಯಕ್ಕೆ ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಹಿರಿಯ ನಟನೆಂದೇ ಗುರುತಿಸಿಕೊಂಡಿರುವ ಶಶಿಕಪೂರ್ 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

2010ರಲ್ಲಿ ಜೀವನ ಶ್ರೇಷ್ಠ ಸಾಧನೆಗಾಗಿ ಫಿಲ್ಮಂಫೇರ್ ಪ್ರಶಸ್ತಿ, ಮೂರು ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಮತ್ತಿತರ ಪ್ರಶಸ್ತಿಗೆ ಬಾಜನರಾಗಿದ್ದಾರೆ. ದೀವಾರ್, ಸಿಲ್‍ಸೀಲಾ, ಸತ್ಯಂ ಶಿವಂ ಸುಂದರಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರಬುದ್ಧ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಲವು ವರ್ಷಗಳಿಂದ ಆರೋಗ್ಯ ತೊಂದರೆ ಅನುಭವಿಸುತ್ತಿರುವ ಅವರಿಗೆ ಮೂವರು ಮಕ್ಕಳಿದ್ದು, ಪತ್ನಿ ಜನೀಫರ್ ಕೆಂಡಲ್ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು.

Write A Comment