ಇಂಚೆನ್: ಸಾನಿಯಾ ಮಿರ್ಜಾ ಮತ್ತು ಸಾಕೇತ್ ಮೈನೇನಿ ಜೋಡಿ ಏಷ್ಯನ್ ಕ್ರೀಡಾಕೂಟದ ಟೆನಿಸ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು.
ಸೋಮವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 6–4, 6–3 ರಲ್ಲಿ ಚೀನಾ ತೈಪೆಯ ಹಾವೊ ಚಿಂಗ್ ಚಾನ್ ಮತ್ತು ಸಿಯೆನ್ ಯಿನ್ ಪೆಂಗ್ ಅವರನ್ನು ಮಣಿಸಿತು. ಪಂದ್ಯದ ಎಲ್ಲ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಭಾರತದ ಜೋಡಿ 69 ನಿಮಿಷಗಳಲ್ಲಿ ಗೆಲುವು ಪಡೆಯಿತು.
ಪುರುಷರ ಡಬಲ್ಸ್‌ನಲ್ಲಿ ಸನಮ್ ಸಿಂಗ್ ಜೊತೆ ಆಡಿದ್ದ ಸಾಕೇತ್ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಆ ನಿರಾಸೆಯನ್ನು ಮರೆಸಿದರು. ಸಾನಿಯಾ– ಸಾಕೇತ್ ಹೊಂದಾಣಿಕೆಯ ಆಟ ತೋರುವಲ್ಲಿ ಯಶಸ್ವಿಯಾದರು. ಮೊದಲ ಸೆಟ್‌ನ ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದು ಮೇಲುಗೈ ಪಡೆದರು. ಆ ಬಳಿಕ ತಮ್ಮ ಸರ್ವ್‌ನಲ್ಲಿ ಪಾಯಿಂಟ್ ಗಳಿಸಿ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಆರಂಭದಲ್ಲೇ ಎದುರಾಳಿಯ ಸರ್ವ್ ಮುರಿದ ಭಾರತದ ಜೋಡಿ ಮಹತ್ವದ ಮೇಲುಗೈ ಸಾಧಿಸಿತು.
ಸಾಕೇತ್–ಸನಮ್‌ಗೆ ಬೆಳ್ಳಿ: ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾಕೇತ್– ಸನಮ್ ಸಿಂಗ್ ಜೋಡಿ 5–7, 6–7 ರಲ್ಲಿ ದಕ್ಷಿಣ ಕೊರಿಯದ ಯಾಂಗ್‌ಕ್ಯು ಲಿಮ್ ಮತ್ತು ಹ್ಯೋನ್ ಚುಂಗ್ ಕೈಯಲ್ಲಿ ಪರಾಭವಗೊಂಡಿತು. ಒಂದು ಗಂಟೆ 29 ನಿಮಿಷ ನಡೆದ ಹೋರಾಟದಲ್ಲಿ ಭಾರತದ ಜೋಡಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿತು. ಆದರೆ ನಿರ್ಣಾಯಕ ಹಂತದಲ್ಲಿ ಪಾಯಿಂಟ್ ಕಲೆಹಾಕಲು ವಿಫಲವಾಗಿ ನಿರಾಸೆ ಅನುಭವಿಸಿತು.
ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದ ಸಾಕೇತ್– ಸನಮ್ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದರು. ಮಾತ್ರವಲ್ಲ, ಸೆಟ್‌ಅನ್ನು ಟೈಬ್ರೇಕರ್‌ಗೆ ಕೊಂಡೊಯ್ದರು. ಆದರೆ ಟೈಬ್ರೇಕರ್‌ನಲ್ಲಿ ಕೊರಿಯದ ಆಟಗಾರರು ಮೇಲುಗೈ ಸಾಧಿಸಿ ಗೆಲುವಿನ ನಗು ಬೀರಿದರು.
2010ರ ಗುವಾಂಗ್‌ಜೌ ಏಷ್ಯನ್ ಕ್ರೀಡಾಕೂಟದಲ್ಲಿ ಸನಮ್ ಅವರು ಸೋಮದೇವ್ ದೇವವರ್ಮನ್ ಜತೆ ಸೇರಿ ಚಿನ್ನ ಜಯಿಸಿದ್ದರು. ಸತತ ಎರಡನೇ ಬಂಗಾರ ಗೆಲ್ಲುವ ಅವರ ಕನಸು ನನಸಾಗಲಿಲ್ಲ. ಟೆನಿಸ್‌ನಲ್ಲಿ ಭಾರತ ಒಟ್ಟು ಐದು ಪದಕ ಗೆದ್ದುಕೊಂಡಂತಾಗಿದೆ. ಭಾನುವಾರ ಪುರುಷರ ಸಿಂಗಲ್ಸ್ (ಯೂಕಿ ಭಾಂಬ್ರಿ), ಪುರುಷರ ಡಬಲ್ಸ್ (ಯೂಕಿ– ದಿವಿಜ್ ಶರಣ್) ಮತ್ತು ಮಹಿಳೆಯರ ಡಬಲ್ಸ್‌ನಲ್ಲಿ (ಸಾನಿಯಾ– ಪ್ರಾರ್ಥನಾ) ಕಂಚು ಗೆದ್ದುಕೊಂಡಿತ್ತು.
ಗುವಾಂಗ್‌ಜೌ ಕೂಟದಲ್ಲಿ ಭಾರತ ಎರಡು ಚಿನ್ನ ಒಳಗೊಂಡಂತೆ ಐದು ಪದಕಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಪ್ರಮುಖ ಆಟಗಾರರು ಇಲ್ಲದೆಯೂ ಐದು ಪದಕಗಳನ್ನು ಗೆಲ್ಲಲು ಸಾಧ್ಯವಾಗಿದೆ.