ಮನೋರಂಜನೆ

ಕೊಚ್ಚಿಯಲ್ಲಿ ಮುಳುಗಿದ ಧೋನಿ ದೋಣಿ

Pinterest LinkedIn Tumblr

SAMYLS

ಕೊಚ್ಚಿ, ಅ.8: ಇಲ್ಲಿನ ನೆಹರು ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಮರ್ಲಾನ್ ಸ್ಯಾಮುಯೆಲ್ಸ್‌ರ ಶತಕ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಲ್ಲಿ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಗೆಲುವಿನತ್ತ ಹೆಜ್ಜೆ ಇರಿಸಿದೆ.

ಗೆಲುವಿಗೆ 322 ರನ್‌ಗಳ ಕಠಿಣ ಸವಾಲನ್ನು ಪಡೆದ ಟೀಮ್ ಇಂಡಿಯಾ 38 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 166ರನ್ ಗಳಿಸಿದ್ದು, ಸೋಲಿನ ದವಡೆಗೆ ಸಿಲುಕಿದೆ. ರವೀಂದ್ರ ಜಡೇಜ ಔಟಾಗದೆ 19 ರನ್ ಮತ್ತು ಮುಹಮ್ಮದ್ ಶಮಿ ಔಟಾಗದೆ 5 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಶಿಖರ್ ಧವನ್ 68 ರನ್ (92ಎ,9ಬೌ), ಅಜಿಂಕ್ಯ ರಹಾನೆ 24 ರನ್( 22ಎ, 4ಬೌ), ಅಂಬಟಿ ರಾಯುಡು 13 ರನ್( 21ಎ, 1ಬೌ) ,ವಿರಾಟ್ ಕೊಹ್ಲಿ 2(5ಎಸೆತ), ಸುರೇಶ್ ರೈನಾ 0(2ಎಸೆತ), ನಾಯಕ ಮಹೇಂದ್ರ ಸಿಂಗ್ ಧೋನಿ 8 ರನ್(21ಎ), ಭುವನೇಶ್ವರ ಕುಮಾರ್ 2 (10ಎ) ಗಳಿಸಿ ಔಟಾಗಿದ್ದಾರೆ.

ವಿಂಡೀಸ್ 321/6: ಈ ವರ್ಷ ಮೂರನೆ ಏಕದಿನ ಪಂದ್ಯವನ್ನಾಡಿದ ಮರ್ಲಾನ್ ಸ್ಯಾಮುಯೆಲ್ಸ್ ದಾಖಲಿಸಿದ ಶತಕದ ಸಹಾಯದಿಂದ ವೆಸ್ಟ್ ಇಂಡೀಸ್ ತಂಡ ಕಠಿಣ ಸವಾಲನ್ನು ವಿಧಿಸಿತ್ತು. 160ನೆ ಏಕದಿನ ಪಂದ್ಯವನ್ನಾಡಿದ ಸ್ಯಾಮುಯೆಲ್ಸ್ ಔಟಾಗದೆ 126 ರನ್(116ಎ, 11ಬೌ, 4ಸಿ) ಗಳಿಸಿ ತಂಡದ ಸ್ಕೋರನ್ನು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟದಲ್ಲಿ 321ಕ್ಕೆ ತಲುಪಿಸಲು ನೆರವಾದರು.ಸ್ಯಾಮುಯೆಲ್ಸ್ 96 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ತನ್ನ 6ನೆ ಏಕದಿನ ಶತಕ ಪೂರ್ಣಗೊಳಿಸಿದರು.

ಸ್ಯಾಮುಯೆಲ್ಸ್ ಮತ್ತು ದಿನೇಶ್ ರಾಮ್ದೀನ್ ನಾಲ್ಕನೆ ವಿಕೆಟ್‌ಗೆ 23.1 ಓವರ್‌ಗಳಲ್ಲಿ 165 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರನ್ನು 45.4 ಓವರ್‌ಗಳಲ್ಲಿ 285ಕ್ಕೆ ತಲುಪಿಸಲು ನೆರವಾದರು.

ಭಾರತದ ಪರ ವೇಗದ ಬೌಲರ್ ಮುಹಮ್ಮದ್ ಶಮಿ 66ಕ್ಕೆ 4 ವಿಕೆಟ್ ಕಬಳಿಸಿ ತಂಡದ ಯಶಸ್ವಿ ಬೌಲರ್ ಎನಿಸಿಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಚೆನ್ನಾಗಿರಲಿಲ್ಲ. ಆರಂಭಿಕ ದಾಂಡಿಗರಾದ ನಾಯಕ ಡ್ವೇಯ್ನಾ ಬ್ರಾವೋ ಮತ್ತು ಡ್ವೇಯ್ನಾ ಸ್ಮಿತ್ ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 34 ರನ್ ಸೇರಿಸಿದ್ದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ನಾಯಕ ಬ್ರಾವೋ(17) ಅವರು ಮುಹಮ್ಮದ್ ಶಮಿ ಎಸೆತದಲ್ಲಿ ಧವನ್‌ಗೆ ಕ್ಯಾಚ್ ನೀಡಿದರು.

ಎರಡನೆ ವಿಕೆಟ್‌ಗೆ ಸ್ಮಿತ್ ಮತ್ತು ಡರೆನ್ ಬ್ರಾವೋ 10.1 ಓವರ್‌ಗಳಲ್ಲಿ 6.29 ರನ್ ಸರಾಸರಿಯಂತೆ 64 ರನ್ ಸೇರಿಸಿದರು. ತಂಡದ ಸ್ಕೋರ್ ಶತಕ ತಲುಪಲು 2 ರನ್‌ಗಳ ಆವಶ್ಯಕತೆ ಇದ್ದಾಗ ಸ್ಮಿತ್ ಅವರು ಜಡೇಜ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಸ್ಮಿತ್ 46 ರನ್(45ಎ, 4ಬೌ) ಗಳಿಸಿದರು.

ಡರೆನ್ ಬ್ರಾವೋ ಮತ್ತು ಸ್ಯಾಮುಯೆಲ್ಸ್ 22.3 ಓವರ್‌ಗಳಲ್ಲಿ ಸ್ಕೋರನ್ನು 120ಕ್ಕೆ ತಲುಪಿಸಿದರು. ಬ್ರಾವೋ 28 ರನ್ ಗಳಿಸಿ ಅಮಿತ್ ಮಿಶ್ರಾ ಎಸೆತದಲ್ಲಿ ಧವನ್‌ಗೆ ಕ್ಯಾಚ್ ನೀಡಿದರು. ಬಳಿಕ ಸ್ಯಾಮುಯೆಲ್ಸ್‌ಗೆ ರಾಮ್ದೀನ್ ಸಾಥ್ ನೀಡಿದರು. ಈ ಜೋಡಿ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿತು. ನಾಯಕ ಧೋನಿ ಈ ಜೋಡಿಯನ್ನು ಮುರಿಯಲು ಇನ್ನಿಲ್ಲದ ಕಸರತ್ತು ನಡೆಸಿದರು. ವೇಗಿ ಭುವನೇಶ್ವರ ಕುಮಾರ್ ರನ್ ಪ್ರವಾಹಕ್ಕೆ ಕಡಿವಾಣ ಹಾಕಿ 10 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟರೂ ವಿಕೆಟ್ ಸಿಗಲಿಲ್ಲ.

45.5ನೆ ಓವರ್‌ನಲ್ಲಿ ಧೋನಿ ಪ್ರಯತ್ನ ಫಲ ನೀಡಿತು. ಶಮಿ ಬೌಲಿಂಗ್‌ನಲ್ಲಿ ರಾಮ್ದೀನ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಜಡೇಜಗೆ ಕ್ಯಾಚ್ ನೀಡಿದರು. ಔಟಾಗುವ ಮೊದಲು ರಾಮ್ದೀನ್ 61 ರನ್(59ಎ, 5ಬೌ, 2ಸಿ) ಕೊಡುಗೆ ನೀಡಿದರು.

ರಾಮ್ದೀನ್ ಔಟಾದ ಬಳಿಕ ಕ್ರೀಸ್‌ಗೆ ಆಗಮಿಸಿದ ಕೀರನ್ ಪೊಲಾರ್ಡ್ (2) ಮತ್ತು ರಸ್ಸೆಲ್(1) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಶಮಿಗೆ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ತುದಿಯಲ್ಲಿ ಅರ್ಭಟಿಸುತ್ತಿದ್ದ ಸ್ಯಾಮುಯೆಲ್ಸ್‌ಗೆ ಏಳನೆ ವಿಕೆಟ್‌ಗೆ ಡರೆನ್ ಸಮ್ಮಿ ಜೊತೆಯಾದರು. ಕೊನೆಯ ಎರಡು ಓವರ್‌ಗಳಲ್ಲಿ 23 ರನ್ ಸೇರಿಸಿದರು. ಡರೆನ್ ಸಮ್ಮಿ 10 ರನ್(6ಎ, 1ಸಿ) ಗಳಿಸಿ ಔಟಾಗದೆ ಉಳಿದರು.

ಸ್ಕೋರ್ ವಿವರ
ವೆಸ್ಟ್‌ಇಂಡೀಸ್ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 321
ಡೇಯ್ನ ಸ್ಮಿತ್ ಬಿ ಜಡೇಜ 46, ಡೇಯ್ನಿ ಬ್ರಾವೋ ಸಿ ಧವನ್ ಬಿ ಶಮಿ 17, ಡರೆನ್ ಬ್ರಾವೋ ಸಿ ಧವನ್ ಬಿ ಮಿಶ್ರಾ 28, ಮರ್ಲಾನ್ ಸ್ಯಾಮುಯೆಲ್ಸ್ ಔಟಾಗದೆ 126, ದಿನೇಶ್ ರಾಮ್ದೀನ್ ಸಿ ಜಡೇಜ ಬಿ ಶಮಿ 61, ಪೊಲಾರ್ಡ್ ಬಿ ಶಮಿ 2, ರಸ್ಸೆಲ್ ಸಿ ಕೊಹ್ಲಿ ಬಿ ಶಮಿ 1, ಡರೆನ್ ಸಮ್ಮಿ ಔಟಾಗದೆ 10, ಇತರೆ 30.
ವಿಕೆಟ್ ಪತನ: 1-34, 2-98, 3-120, 4-285, 5-296, 6-298.

ಬೌಲಿಂಗ್ ವಿವರ: ಭುವನೇಶ್ವರ ಕುಮಾರ್ 10-1-38-0, ಮೋಹಿತ್ ಶರ್ಮ 9-0-61-0, ಮುಹಮ್ಮದ್ ಶಮಿ 9-1-66-4, ರವೀಂದ್ರ ಜಡೇಜ 10-0-58-1, ಅಮಿತ್ ಮಿಶ್ರಾ 10-0-72-1, ಸುರೇಶ್ ರೈನಾ 2-0-14-0.

Write A Comment