ಮನೋರಂಜನೆ

ಹಾಕಿ ಟೆಸ್ಟ್ ಸರಣಿ: ಆಸೀಸ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ; 200ನೆ ಪಂದ್ಯ ಆಡಿದ ಸರ್ದಾರ್‌ಗೆ ಗೆಲುವಿನ ಉಡುಗೊರೆ

Pinterest LinkedIn Tumblr

indiahockeypti-mಪರ್ತ್, ನ.9: ನಾಲ್ಕನೆ ಹಾಗೂ ಅಂತಿಮ ಹಾಕಿ ಟೆಸ್ಟ್ ಪಂದ್ಯದಲ್ಲಿ ಇಂದು ಭಾರತದ ಪುರುಷರ ಹಾಕಿ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು 3-1 ಅಂತರದಿಂದ ಮಣಿಸಿದೆ.

ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದೆ. ಕಳೆದ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಭಾರತ ತಂಡ 13ನೆ ನಿಮಿಷದಲ್ಲಿ ಗೋಲು ಖಾತೆ ತೆರೆಯಿತು. ಆಕಾಶ್‌ದೀಪ್ ಸಿಂಗ್ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿ ಕೊಟ್ಟರು.

ಮೊದಲಾರ್ಧದಲ್ಲಿ ಉಭಯ ತಂಡಗಳು ಹಲವು ಪೆನಾಲ್ಟಿ ಅವಕಾಶವನ್ನು ಪಡೆದಿದ್ದವು. ಆದರೆ, ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾದವು. ದ್ವಿತೀಯಾರ್ಧದ 36ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದ ಆಸೀಸ್‌ನ ಥಾಮಸ್ ಕ್ರೆಗ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.

ಸ್ಕೋರ್ ಸಮಬಲಗೊಳಿಸಿದ ನಂತರ ಉಭಯ ತಂಡಗಳು ಅವಕಾಶಕ್ಕಾಗಿ ಹೋರಾಟ ನಡೆಸಿದವು. 50ನೆ ನಿಮಿಷದಲ್ಲಿ ಗೋಲು ದಾಖಲಿಸಿದ ಆಕಾಶ್‌ದೀಪ್ ಸಿಂಗ್ ಭಾರತಕ್ಕೆ ಮತ್ತೊಮ್ಮೆ ಮೇಲುಗೈ ಒದಗಿಸಿಕೊಟ್ಟರು. ಕನ್ನಡಿಗ ಎಸ್.ಕೆ. ಉತ್ತಪ್ಪ 53ನೆ ನಿಮಿಷದಲ್ಲಿ ಭಾರತದ ಪರವಾಗಿ ಮೂರನೆ ಗೋಲನ್ನು ದಾಖಲಿಸಿ 3-1 ಮುನ್ನಡೆ ಒದಗಿಸಿಕೊಟ್ಟರು. ಕೊನೆಯ ಐದು ನಿಮಿಷದ ಅವಧಿಯಲ್ಲಿ ಆಸ್ಟ್ರೇಲಿಯ ಆಟಗಾರರು ಗೋಲು ಬಾರಿಸಲು ಯತ್ನಿಸಿದರೂ ಗೋಲುಕೀಪರ್ ಪಿ.ಆರ್. ಶ್ರೀಜೇಶ್ ಇದಕ್ಕೆ ಅವಕಾಶ ನೀಡಲಿಲ್ಲ.

ಇಂದು ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ದ ಐತಿಹಾಸಿಕ ಗೆಲುವು ಸಾಧಿಸಿದ ಭಾರತೀಯ ಆಟಗಾರರು 200ನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ನಾಯಕ ಸರ್ದಾರ್ ಸಿಂಗ್‌ಗೆ ಗೆಲುವಿನ ಉಡುಗೊರೆ ನೀಡಿದರು. ಭಾರತ ಮುಂಬರುವ ಹೀರೊ ಹಾಕಿ ಚಾಂಪಿಯನ್ಸ್ ಟ್ರೋಫಿ 2014ರ ಮೊದಲ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಚಾಂಪಿಯನ್ಸ್ ಟ್ರೋಫಿ ಡಿ.6 ರಿಂದ 14ರ ತನಕ ಭುವನೇಶ್ವರದಲ್ಲಿ ನಡೆಯಲಿದೆ.

-http://vbnewsonline.com

Write A Comment