ಹೊಸದಿಲ್ಲಿ, ನ.24: ಎಂಟು ದೇಶಗಳು ಭಾಗವಹಿಸುತ್ತಿರುವ ಪುರುಷರ ಚಾಂಪಿಯನ್ಸ್ ಟ್ರೋಫಿಗೆ ಹಾಕಿ ಇಂಡಿಯಾ ಸೋಮವಾರ ಸರ್ದಾರ್ ಸಿಂಗ್ ನೇತೃತ್ವದ 18 ಸದಸ್ಯರನ್ನು ಒಳಗೊಂಡಿರುವ ಭಾರತ ತಂಡವನ್ನು ಆಯ್ಕೆ ಮಾಡಿದೆ. ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯು ಡಿಸೆಂಬರ್ 6 ರಿಂದ 14ರ ತನಕ ಭುವನೇಶ್ವರದಲ್ಲಿ ನಡೆಯಲಿರುವುದು. ಸ್ಟ್ರೈಕರ್ ಗುರ್ವಿಂದರ್ ಚಾಂಡಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಚಾಂಡಿ ಬದಲಿಗೆ 9 ಹಾಕಿ ಪಂದ್ಯಗಳನ್ನು ಆಡಿರುವ ಲಲಿತ್ ಉಪಾಧ್ಯಾಯಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ನ.18 ರಂದು ಮೇಜರ್ ಧ್ಯಾನ್‌ಚಂದ್ ನ್ಯಾಶನಲ್ ಸ್ಟೇಡಿಯಂನಲ್ಲಿ ಟ್ರಯಲ್ಸ್ ನಡೆದ ನಂತರ ಹಾಕಿ ಇಂಡಿಯಾ ಆಯ್ಕೆಗಾರರು ತಂಡವನ್ನು ಆಯ್ಕೆ ಮಾಡಿದ್ದಾರೆ. ಚಾಂಡಿಯವರಲ್ಲದೆ ಮಿಡ್ ಫೀಲ್ಡರ್ ಚಿಂಗ್ಲೆನ್‌ಸಾನ ಸಿಂಗ್ ಕಾಂಗುಜಮ್ ತಂಡದಿಂದ ಹೊರಗುಳಿದಿದ್ದಾರೆ. ಕರ್ನಾಟಕದ ಹಾಕಿ ಪಟು ಎಸ್.ಕೆ. ಉತ್ತಪ್ಪ ಸ್ಥಾನ ಪಡೆದುಕೊಂಡಿದ್ದಾರೆ. ಹಾಕಿ ಇಂಡಿಯಾ ಆಯ್ಕೆಗಾರರಾದ ಹರ್ಬಿಂದರ್ ಸಿಂಗ್, ಆರ್‌ಪಿ ಸಿಂಗ್, ಅರ್ಜುನ್ ಹಾಲಪ್ಪ, ಉನ್ನತ ಪ್ರದರ್ಶ ನದ ನಿರ್ದೇಶಕ ರೊಲೆಂಟ್ ಒಲ್ಟಮನ್ಸ್ ಹಾಗೂ ಕೋಚ್ ಜ್ಯೂಡ್ ಫೆಲಿಕ್ಸ್ ಸಭೆ ನಡೆಸಿ ತಂಡವನ್ನು ಆಯ್ಕೆ ಮಾಡಿದ್ದಾರೆ.
ಇಂಚೋನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಹಾಕಿ ತಂಡದಲ್ಲಿ ಎರಡು ಬದಲಾವಣೆಯನ್ನು ಮಾಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿಫಲವಾಗಿದ್ದ ಸ್ಟ್ರೈಕರ್ ಆಕಾಶ್ ದೀಪ್ ಸಿಂಗ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದ್ದು, ಸಿಂಗ್ ಟೂರ್ನಮೆಂಟ್‌ನ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆಯಿದೆ. ಹರ್ಜೋತ್ ಸಿಂಗ್ ಹಾಗೂ ಗುರ್ಜಿಂದರ್ ಸಿಂಗ್ ತಂಡದಲ್ಲಿರುವ ಇಬ್ಬರು ಹೊಸ ಮುಖವಾಗಿದ್ದಾರೆ. ಏಷ್ಯನ್ ಗೇಮ್ಸ್‌ಗೆ 16 ಆಟಗಾರರು ತೆರಳಿದ್ದರು. ವಿಶ್ವದ ಅಗ್ರ 8 ತಂಡಗಳು ಭಾಗವಹಿಸುತ್ತಿರುವ ಚಾಂಪಿಯನ್ಸ್ ಲೀಗ್‌ನಲ್ಲಿ ಹಾಕಿ ಇಂಡಿಯಾ 18 ಸದಸ್ಯರನ್ನು ಆಯ್ಕೆ ಮಾಡಿದೆ. ಭಾರತದ ಪರವಾಗಿ 200 ಪಂದ್ಯಗಳನ್ನು ಆಡಿರುವ ಸರ್ದಾರ್ ಸಿಂಗ್‌ರನ್ನು ನಾಯಕರನ್ನಾಗಿ ಮುಂದುವರಿಸಲಾಗಿದೆ. ಗೋಲ್‌ಕೀಪರ್ ಪಿ.ಆರ್ ಶ್ರೀಜೇಶ್ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಭಾರತ ಡಿ.6 ರಂದು ಜರ್ಮನಿಯ ವಿರುದ್ಧ ಆಡುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಆರಂಭಿಸಲಿದೆ. ಡಿ.7 ರಂದು ಅರ್ಜೆಂಟೀನ ಹಾಗೂ ಡಿ.9 ರಂದು ಹಾಲೆಂಡ್ ತಂಡವನ್ನು ಎದುರಿಸಲಿದೆ. ‘‘ಟೀಮ್ ಇಂಡಿಯಾ ಅತ್ಯುತ್ತಮ ಫಾರ್ಮ್‌ನಲ್ಲಿದೆ. 2014ರ ಏಷ್ಯನ್ ಗೇಮ್ಸ್ ಹಾಗೂ ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನದ ನಂತರ ತಂಡದ ಆತ್ಮವಿಶ್ವಾಸವೂ ಹೆಚ್ಚಾಗಿದೆ. ನಾವು ಉತ್ತಮ ತಂಡವನ್ನು ಆಯ್ಕೆ ಮಾಡಿದ್ದು ಈ ತಂಡ ಎದುರಾಳಿ ತಂಡಕ್ಕೆ ಕಠಿಣ ಸ್ಪರ್ಧೆಯೊಡ್ಡಲಿದೆ’’ ಎಂದು ಒಲ್ಟಮನ್ಸ್ ಹೇಳಿದ್ದಾರೆ.