ಬೆಂಗಳೂರು, ನ.24: ಭಾರತದ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೋಮವಾರ ಸೋಲು ಅನುಭವಿಸಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಮಹಿಳಾ ತಂಡ ಆಫ್ರಿಕದ ಡಿ ವ್ಯಾನ್ ನಿಕೆರ್ಕ್ (4-9) ಮರಿಝಾನೆ ಕಾಪ್ (4-21) ದಾಳಿಗೆ ಸಿಲುಕಿ 38.5 ಓವರ್‌ಗಳಲ್ಲಿ 114 ರನ್ ದಾಖಲಿಸುವಷ್ಟರಲ್ಲಿ ಆಲೌಟಾಗಿತ್ತು.
ಜೂಲನ್ ಗೋಸ್ವಾಮಿ(33) ಭಾರತದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಇವರನ್ನು ಹೊರತುಪಡಿಸಿದರೆ ಹರ್ಮನ್‌ಪ್ರೀತ್ ಕೌರ್(31), ಪೂನಮ್ ಯಾದವ್(ಔಟಾಗದೆ 13) , ವಿಆರ್ ವನಿತಾ(11), ಮಂಧಾನಾ (11) ಎರಡಂಕೆಯ ಕೊಡುಗೆ ನೀಡಿದ್ದರು. ಮಿಥಾಲಿ ರಾಜ್(4) , ಪೂನಂ ರಾವತ್(3) ಹಾಗೂ ಏಕತಾ ಬಿಸ್ಟ್ (2) ಕಳಪೆ ಮೊತ್ತಕ್ಕೆ ನಿರ್ಗಮಿಸಿದ್ದು, ವಿಕೆಟ್ ಕೀಪರ್ ಎಸ್.ವರ್ಮಾ(0), ಎಸ್.ಶರ್ಮ (0), ಮತ್ತು ಆರ್‌ಎಸ್ ಗಾಯಕ್‌ವಾಡ್(0) ಸೊನ್ನೆ ಸುತ್ತಿದರು.
ದಕ್ಷಿಣ ಆಫ್ರಿಕ ತಂಡಕ್ಕೆ ಗೆಲ್ಲಲು ದೊಡ್ಡ ಸವಾಲು ಇಲ್ಲದಿದ್ದರೂ, ಅದು 115 ರನ್‌ಗಳ ಗೆಲುವಿನ ಸವಾಲನ್ನು ಮುಟ್ಟುವ ಹೊತ್ತಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತು. 41.1 ಓವರ್‌ಗಳಲ್ಲಿ 118 ರನ್ ಗಳಿಸಿತು.
ದಕ್ಷಿಣ ಆಫ್ರಿಕದ ಕ್ಲೋ ಟ್ರೆಯಾನ್ ಅರ್ಧಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದರು. ಟ್ರೆಯಾನ್ 80 ಎಸೆತಗಳನ್ನು ಎದುರಿಸಿ7 ಬೌಂಡರಿ ಸಹಾಯದಿಂದ 50 ರನ್ ಗಳಿಸಿದರು. ಇವರ ಕೊಡುಗೆ ದೊರೆಯದೆ ಇರುತ್ತಿದ್ದರೆ ದಕ್ಷಿಣ ಆಫ್ರಿಕ ತಂಡ ಸೋಲುವ ಸಾಧ್ಯತೆ ಇತ್ತು. ಗೋಸ್ವಾಮಿ(3-22), ಎಸ್.ಶರ್ಮ(2-17) ಮತ್ತು ಎಚ್.ಕೌರ್(2-28) ಸಂಘಟಿತ ದಾಳಿ ನಡೆಸಿ ದಕ್ಷಿಣ ಆಫ್ರಿಕ ತಂಡದ ಆಟಗಾರ್ತಿಯರನ್ನು ಕಾಡಿದ್ದರು.
ಭಾರತದ ಜೊಲಿಯನ್ ಗೋಸ್ವಾಮಿ (3-22) ಅವರು ಆಫ್ರಿಕ ತಂಡ ಖಾತೆ ತೆರಯವ ಮೊದಲು ಮೊದಲ ಓವರ್‌ನ 3ನೆ ಎಸೆತದಲ್ಲಿ ಆರಂಭಿಕ ಆಟಗಾರ್ತಿ ಎಲ್.ಲೀ (0) ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಟಿ.ಚೆಟ್ಟಿ (15), ಡಿ ವ್ಯಾನ್ ನಿಕೆರ್ಕ್ (14), ವೈ ಫೋರಿಯೊ( ಔಟಾಗದೆ 12), ನಾಯಕಿ ಎಂ. ಡಿ. ಪ್ರೀಝ್(11) ಎರಡಂಕೆಯ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ 38.5 ಓವರ್‌ಗಳಲ್ಲಿ ಆಲೌಟ್ 114
(ಗೋಸ್ವಾಮಿ 33, ಕೌರ್ 31; ಮರಿಝಾನೆ ಕಾಪ್ 4-21).
ದಕ್ಷಿಣ ಆಫ್ರಿಕ 41.1 ಓವರ್‌ಗಳಲ್ಲಿ ಆಲೌಟ್ 118( ಟ್ರೆಯೊನ್ 50; ಗೋಸ್ವಾಮಿ 3-22).