ಮನೋರಂಜನೆ

ಹ್ಯೂಸ್ ಸಾವಿನಿಂದ ಚೇತರಿಸಿಕೊಳ್ಳದ ಕ್ರಿಕೆಟ್: ಭಾರತ -ಆಸ್ಟ್ರೇಲಿಯ ಮೊದಲ ಟೆಸ್ಟ್ ಮುಂದೂಡಿಕೆ

Pinterest LinkedIn Tumblr

ಸಿಡ್ನಿ, ನ.29: ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್‌ರ ಸಾವಿನ ಆಘಾತದಿಂದ ಕ್ರಿಕೆಟ್ ಜಗತ್ತು ಇನ್ನೂ ಹೊರ ಬಂದಿಲ್ಲ. ಈ ಕಾರಣದಿಂದಾಗಿ ಡಿ.4ರಂದು ಆರಂಭಗೊಳ್ಳಬೇಕಿದ್ದ ಭಾರತ-ಆಸ್ಟ್ರೇಲಿಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿದೆ.
ಹ್ಯೂಸ್ ಮೃತದೇಹದ ಅಂತ್ಯಕ್ರಿಯೆ ತವರು ಪಟ್ಟಣ ಮಾಕ್ಸ್‌ವಿಲ್ಲೆಯಲ್ಲಿ ಬುಧವಾರ ನಿಗದಿಯಾಗಿದೆ. ಈ ಕಾರಣದಿಂದಾಗಿ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿದೆ.
ಎರಡನೆ ಟೆಸ್ಟ್ ಆಡಿಲೇಡ್‌ನಲ್ಲಿ ಡಿ.12ರಿಂದ 16ರ ತನಕ ನಡೆಯಲಿದೆ.
140 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓರ್ವ ಕ್ರಿಕೆಟ್‌ನ ಸಾವಿನ ಕಾರಣದಿಂದಾಗಿ ಮೊದಲ ಬಾರಿ ಟೆಸ್ಟ್ ಮುಂದೂಡಲ್ಪಟ್ಟಿದೆ. ಯುದ್ಧ ಮತ್ತು ಭಯೋತ್ಪಾದನೆ, ರಾಜಕೀಯ ಅಸ್ಥಿರತೆ, ಪ್ರತಿಕೂಲ ಹವಾಮಾನ ಮತ್ತಿತರ ಕಾರಣಗಳಿಂದಾಗಿ ಈ ಹಿಂದೆ ಹಲವು ಪಂದ್ಯಗಳು ,ಟೆಸ್ಟ್ ಸರಣಿ ರದ್ಧಾಗಿತ್ತು. ಆದರೆ ಈ ಹೊತ್ತು ಕ್ರಿಕೆಟ್ ಜಗತ್ತಿಗೆ ಹೊಸ ಸವಾಲು ಎದುರಾಗಿದೆ. ವಿಶ್ವ ಕ್ರಿಕೆಟ್ ಹ್ಯೂಸ್ ಸಾವಿನ ಕಾರಣದಿಂದಾಗಿ ಶೋಕ ಸಾಗರದಲ್ಲಿ ಮುಳುಗಿದೆ.
1877ರಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೊದಲ ಟೆಸ್ಟ್ ನಡೆದಿತ್ತು. ಆ ಬಳಿಕ ಈ ತನಕ 2,147 ಟೆಸ್ಟ್ ಪಂದ್ಯ ನಡೆದಿದೆ.ಆಸ್ಟ್ರೇಲಿಯ ಮತ್ತು ಭಾರತ ತಂಡಗಳ 2,148ನೆ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಬೇಕಿತ್ತು.
ಕಳೆದ 137 ವರ್ಷಗಳ ಅವಧಿಯಲ್ಲಿ ಜಾಗತಿಕ ಎರಡು ಯುದ್ಧಗಳ ಕಾರಣದಿಂದಾಗಿ ಟೆಸ್ಟ್ ಕ್ರಿಕೆಟ್‌ಗೆ ಧಕ್ಕೆ ಉಂಟಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಅಸ್ಥಿರತೆ, ಭಯೋತ್ಪಾಕರ ಹಾವಳಿಯಿಂದಾಗಿ ಕೆಲವು ಟೆಸ್ಟ್ ಪಂದ್ಯಗಳು ರದ್ಧಾಗಿತ್ತು.
ಇತ್ತೀಚೆಗೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಅಂತಾರಾಷ್ಟ್ರೀಯ ಐದು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ರದ್ಧಾಗಿತ್ತು. ಮೂರನೆ ಪಂದ್ಯ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ರದ್ಧಾಗಿತ್ತು. ಅಂತಿಮ ಪಂದ್ಯ ವಿಂಡೀಸ್ ಆಟಗಾರರು ವೇತನಕ್ಕೆ ಸಂಬಂಧಿಸಿ ಮಂಡಳಿಯೊಂದಿಗೆ ಸಂಘರ್ಷಕ್ಕೆ ಇಳಿದ ಪರಿಣಾಮವಾಗಿ ನಡೆಯಲಿಲ್ಲ.
ಹಿಂದೆ ರಾಜಕೀಯ ಅಸ್ಥಿರತೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳಿಗೆ ಅಡಚಣೆ ಉಂಟಾಗಿತ್ತು. ಭಾರತ ಮತ್ತು ಪಾಕಿಸ್ತಾನ 1952ರಲ್ಲಿ ಮೊದಲ ಬಾರಿ ಪರಸ್ಪರ ಎದುರಿಸಿತ್ತು. 1962 ಮತ್ತು 1977ರಲ್ಲಿ ಯುದ್ಧದ ಕಾರಣದಿಂದಾಗಿ ಉಭಯ ತಂಡಗಳ ನಡುವೆ ಕ್ರಿಕೆಟ್ ನಡೆಲಿಲ್ಲ. 1999ರಲ್ಲೂ ಈ ಎರಡು ದೇಶಗಳ ತಂಡಗಳ ಸರಣಿಗೆ ಮತ್ತೊಮ್ಮೆ ತೊಂದರೆ ಉಂಟಾಯಿತು. 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ನಡೆದ ಬಳಿಕ ಭಾರತ-ಪಾಕಿಸ್ತಾನ ತಂಡಗಳ ಕ್ರಿಕೆಟ್‌ಗೆ ಧಕ್ಕೆ ಉಂಟಾಗಿತ್ತು.
2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾದ ತಂಡ ಪ್ರಯಾಣಿಸುತ್ತಿದ್ದ ಬಸ್ಸಿನ ಮೇಲೆ ಉಗ್ರರ ದಾಳಿ ನಡೆದ ಪರಿಣಾಮವಾಗಿ ಪಾಕಿಸ್ತಾನ -ಶ್ರೀಲಂಕಾ ತಂಡಗಳ ನಡುವಿನ ಮೂರನೆ ಟೆಸ್ಟ್ ಅರ್ಧದಲ್ಲಿ ರದ್ಧಾಗಿತ್ತು. ಆ ಬಳಿಕ ಪಾಕಿಸ್ತಾನಕ್ಕೆ ತವರು ಸರಣಿ ಆಯೋಜಿಸಲು ಸಾಧ್ಯವಾಗಿಲ್ಲ. ಪಾಕಿಸ್ತಾನ ತಂಡ ಯುಎಇಯಲ್ಲಿ ವಿವಿಧ ತಂಡಗಳೊಂದಿಗೆ ಟೆಸ್ಟ್ ಸರಣಿಯನ್ನು ಆಯೋಜಿಸುತ್ತಿದೆ.

1971 ಮತ್ತು 1992ರ ಅವಧಿಯಲ್ಲಿ ದಕ್ಷಿಣ ಆಫ್ರಿಕದಲ್ಲಿ ಕ್ರಿಕೆಟ್ ಸರಣಿ ನಿಂತು ಹೋಗಿತ್ತು.

ಭಾವೋದ್ವೇಗಕ್ಕೊಳಗಾದ ಕ್ಲಾರ್ಕ್
CLARK

ಸಿಡ್ನಿ, ನ.29: ದೇಶಿಯ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ಬೌನ್ಸರ್ ತಲೆಗೆ ಬಡಿದು ಗುರುವಾರ ದುರಂತ ಸಾವು ಕಂಡ ಮಾಜಿ ಸಹ ಆಟಗಾರ ಫಿಲಿಪ್ ಹ್ಯೂಸ್‌ಗೆ ಶ್ರದ್ದಾಂಜಲಿ ಸಲ್ಲಿಸುವ ವೇಳೆ ಆಸ್ಟ್ರೇಲಿಯದ ನಾಯಕ ಮೈಕಲ್ ಕ್ಲಾರ್ಕ್ ಭಾವೋದ್ವೇಗಕ್ಕೆ ಒಳಗಾದ ಘಟನೆ ಶನಿವಾರ ಇಲ್ಲಿ ನಡೆಯಿತು.

ಮಂಗಳವಾರ ಹ್ಯೂಸ್ ಗಂಭೀರ ಗಾಯಗೊಂಡ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಆಟಗಾರರ ಪರವಾಗಿ ಹೇಳಿಕೆಯನ್ನು ಓದಲು ಮುಂದಾದ ಕ್ಲಾರ್ಕ್ ದುಃಖವನ್ನು ತಡೆಯಲಾರದೆ ಕಣ್ಣೀರಿಟ್ಟರು. ಮಂಗಳವಾರ ಶೆಫೀಲ್ಡ್ ಶೀಲ್ಡ್ ಟೂರ್ನಿಯ ವೇಳೆ ಅಜೇಯ 63 ರನ್ ಗಳಿಸಿದ್ದ ಹ್ಯೂಸ್‌ಗೆ ನ್ಯೂ ಸೌಥ್ ವೇಲ್ಸ್ ಬೌಲರ್ ಸಿಯಾನ್ ಅಬೋಟ್ ಎಸೆದ ಬೌನ್ಸರ್ ತಲೆಗೆ ಬಡಿದ ಕಾರಣ ಎರಡು ದಿನಗಳ ಸಾವು-ಬದುಕಿನ ಹೋರಾಟ ನಡೆಸಿ ಗುರುವಾರ ನಿಧನರಾಗಿದ್ದರು. ಹ್ಯೂಸ್ ಅಕಾಲಿಕ ನಿಧನಕ್ಕೆ ಆಸ್ಟ್ರೇಲಿಯ ಹಾಗೂ ವಿಶ್ವದೆಲ್ಲೆಡೆ ತೀವ್ರ ಶೋಕ ವ್ಯಕ್ತವಾಗಿದೆ. ‘‘ಹ್ಯೂಸ್ ನಿಧನದಿಂದ ತಂಡಕ್ಕೆ ಎಷ್ಟೊಂದು ನಷ್ಟವಾಗಿದೆ ಎಂದು ವಿವರಿಸಲು ಶಬ್ದಗಳು ಸಿಗುತ್ತಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಹ್ಯೂಸ್‌ರಿಂದ ವಂಚಿತವಾಗಿದ್ದೇವೆ. ಈ ವಾರ ವಿಶ್ವ ಕ್ರಿಕೆಟ್ ಓರ್ವ ಪ್ರತಿಭಾವಂತ ಆಟಗಾರನನ್ನು ಕಳೆದುಕೊಂಡಿದೆ. ಅವರ ಅಕಾಲಿಕ ಅಗಲಿಕೆಯಿಂದ ನಾವೆಲ್ಲರೂ ಬಡವಾಗಿದ್ದೇವೆ ’’ಎಂದು ಕ್ಲಾರ್ಕ್ ತಿಳಿಸಿದ್ದಾರೆ. ಹ್ಯೂಸ್ ಅವರ ಅಂತಾರಾಷ್ಟ್ರೀಯ ಏಕದಿನ ಜರ್ಸಿ ಸಂಖ್ಯೆ 64ನ್ನು ತೆಗೆದು ಹಾಕುವಂತೆ ಆಟಗಾರರು ಕ್ರಿಕೆಟ್ ಆಸ್ಟ್ರೇಲಿಯಕ್ಕೆ ವಿನಂತಿಸಿದ್ದರು. ಕ್ರಿಕೆಟ್ ಮಂಡಳಿಯು ಆಟಗಾರರ ಮನವಿಯನ್ನು ಒಪ್ಪಿಕೊಂಡಿದೆ. ನಮ್ಮ ಡ್ರೆಸ್ಸಿಂಗ್ ರೂಮ್ ಈ ಹಿಂದಿನಂತೆ ಇರಲು ಸಾಧ್ಯವಿಲ್ಲ. ನಾವೆಲ್ಲರೂ ಹ್ಯೂಸ್‌ರನ್ನು ಪ್ರೀತಿಸುತ್ತಿದ್ದೆವು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹಾರೈಸುವೆವು ಎಂದು ಕ್ಲಾರ್ಕ್ ಕಣ್ಣೀರಿಡುತ್ತಾ ಶ್ರದ್ದಾಂಜಲಿ ಅರ್ಪಿಸಿದರು.

ಹ್ಯೂಸ್‌ಗೆ ಗೌರವ:
ಆಸ್ಟ್ರೇಲಿಯದಲ್ಲಿ ಶನಿವಾರವೂ ಫಿಲಿಪ್ ಹ್ಯೂಸ್ ನಿಧನಕ್ಕೆ ಗೌರವ ಕಾರ್ಯಕ್ರಮಗಳು ಎಲ್ಲೆಡೆ ಮುಂದುವರಿದಿತ್ತು. ಎಲ್ಲ ವಯೋಮಾನದ ಕ್ರಿಕೆಟ್ ತಂಡಗಳು ಹ್ಯೂಸ್‌ರನ್ನು ಸ್ಮರಿಸುವಂತೆ ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ. ದೇಶದ ಎಲ್ಲ ಮೈದಾನದ ಪಿಚ್‌ನಲ್ಲಿ ಹ್ಯೂಸ್ ಕೊನೆಯ ಇನಿಂಗ್ಸ್‌ನಲ್ಲಿ ಗಳಿಸಿದ್ದ ಅಜೇಯ 63 ರನ್ ಹಾಗೂ ಅವರು ಟೆಸ್ಟ್ ನಂಬರ್ 408ನ್ನು ಬಿತ್ತರಿಸಲಾಗಿದೆ. ಹ್ಯೂಸ್‌ಗೆ ಮುಂದಿನ ವಾರ ಸಿಡ್ನಿಯಲ್ಲಿ ಸರಕಾರಿ ಗೌರವ ನೀಡಲಾಗುತ್ತದೆ.

Write A Comment