ಮ್ಯಾಡ್ರಿಡ್, ನ.30: ಕರೀಮ್ ಬೆಂಝೆಮಾ ಹಾಗೂ ಗಾರೆತ್ ಬಾಲೆ ದಾಖಲಿಸಿದ ತಲಾ ಒಂದು ಗೋಲಿನ ನೆರವಿನಿಂದ ಲಾ ಲಿಗ ಟೂರ್ನಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಮಲಗ ತಂಡವನ್ನು 2-1 ಅಂತರದಿಂದ ಮಣಿಸಿದೆ.
ಈ ಗೆಲುವಿನೊಂದಿಗೆ ರಿಯಲ್ ಮ್ಯಾಡ್ರಿಡ್ ತಂಡ ಎಲ್ಲ ಟೂರ್ನಿಯಲ್ಲಿ ಸತತ 16ನೆ ಗೆಲುವು ಸಂಪಾದಿಸಿದೆ. ಐದು ಅಂಕವನ್ನು ಗಳಿಸಿ ಲಾ ಲಿಗ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. 18ನೆ ನಿಮಿಷದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನೀಡಿದ ಪಾಸನ್ನು ಬಳಸಿಕೊಂಡ ಕರೀಮ್ ಬೆಂಝೆಮಾ ರಿಯಲ್ ಮ್ಯಾಡ್ರಿಡ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು.
ಬೆಂಝೆಮಾ ಈ ಋತುವಿನಲ್ಲಿ 13ನೆ ಗೋಲು ಬಾರಿಸಿದ್ದಾರೆ. 83ನೆ ನಿಮಿಷದಲ್ಲಿ ಗೋಲು ಬಾರಿಸಿದ ಗಾರೆತ್ ಬಾಲೆ ರಿಯಲ್ ಮ್ಯಾಡ್ರಿಡ್‌ಗೆ 2-0 ಮುನ್ನಡೆ ಒದಗಿಸಿಕೊಟ್ಟರು. ಮಲಗಾ ತಂಡದ ಸ್ಯಾಂಟಕ್ರೂಝ್ ಇಂಜುರಿ ಸಮಯದಲ್ಲಿ ಏಕೈಕ ಗೋಲು ಬಾರಿಸಿದರು. ಆದರೆ, ಅದಾಗಲೇ ಮ್ಯಾಡ್ರಿಡ್ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಮಲಗಾ ಗೋಲ್‌ಕೀಪರ್ ಕಾರ್ಲೊಸ್ ಕಾಮೆನಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ರೊನಾಲ್ಡೊಗೆ ಈ ವರ್ಷದ ಲೀಗ್‌ನಲ್ಲಿ ಮೊದಲ ಬಾರಿ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.