ಬೆಂಗಳೂರು: ಭಾರತ ತಂಡದ ಆಟಗಾರ್ತಿಯರು ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಏಕೈಕ ಮಹಿಳಾ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 16 ರನ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಮಹಿಳೆಯರು 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದರು.
ಈ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ಆಟಗಾರ್ತಿಯರು 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಶಕ್ತರಾದರು.
ಆರಂಭಿಕ ಆಟಗಾರ್ತಿ ಡ್ಯಾನ್ ವ್ಯಾನ್ ನೀಕರ್ಕ್ 47 ಎಸೆತಗಳಲ್ಲಿ 5 ಬೌಂಡರಿಗಳಿದ್ದ 46 ರನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಾರಿಜಾನೆ ಕಪ್ಪ ಕೇವಲ 16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಒಳಗೊಂಡ 33 ರನ್ ಗಳಿಸಿ ಉತ್ತಮ ಹೋರಾಟ ನಡೆಸಿದರು. ಆದರೆ, ಇತರ ಆಟಗಾರ್ತಿಯರ ವೈಫಲ್ಯದಿಂದಾಗಿ ದಕ್ಷಿಣ ಆಫ್ರಿಕಾ ವನಿತೆಯರಿಗೆ ಅಂತಿಮವಾಗಿ ಸೋಲು ಕಾದಿತ್ತು. ಪ್ರವಾಸಿ ತಂಡ 118ರಿಂದ 123ರನ್‌ಗಳಿಗೆ ತಲುಪುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದರಿಂದ ಗೆಲವಿನ ಉತ್ತಮ ಅವಕಾಶವನ್ನು ಹಾಳು ಮಾಡಿಕೊಂಡಂತಾಯಿತು. ಭಾರತದ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪೂನಂ ಯಾದವ್ 3 ಮತ್ತು ಏಕ್ತಾ ಬಿಷ್ತ್ 2 ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಸ್ಮೃತಿ ಮಂಧನ ಅರ್ಧಶತಕ ಗಳಿಸಿ ಗಮನ ಸೆಳೆದರು. ಅವರು ಕೇವಲ 42 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 52 ರನ್ ಗಳಿಸಿದರು. ಉಳಿದಂತೆ, ಆರಂಭಿಕ ಆಟಗಾರ್ತಿಯಾಗಿ ಆಡಲಿಳಿದಿದ್ದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್‌ನಲ್ಲಿ ಮಿಂಚುವ ಮೂಲಕ ಕೇವಲ 31 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 40 ರನ್ ಗಳಿಸಿದರು.
ಬೆಂಗಳೂರಿನಲ್ಲಿಯೇ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರಿಂದ ಸೋಲುಂಡಿದ್ದ ಭಾರತದ ಆಟಗಾರ್ತಿಯರು ಟಿ-20ಯಲ್ಲಿ ಮಾತ್ರ ತಮ್ಮ ಪ್ರಭುತ್ವ ಮೆರೆಯುವಲ್ಲಿ ಸಫಲರಾದರು.
ಸಂಕ್ಷಿಪ್ತ ಸ್ಕೋರ್
ಭಾರತ 20 ಓವರುಗಳಲ್ಲಿ 5 ವಿಕೆಟ್‌ಗೆ 146
(ಸ್ಮೃತಿ ಮಂಧನ 52, ಮಿಥಾಲಿ ರಾಜ್ 40, ಶಿಖಾ ಪಾಂಡೆ 23, ಸುನೆಟ್ಟೆ ಲೋಬ್ಸರ್ 29ಕ್ಕೆ 2)
ದಕ್ಷಿಣ ಆಫ್ರಿಕಾ: 20 ಓವರುಗಳಲ್ಲಿ 9 ವಿಕೆಟ್ 130 (ಡ್ಯಾನ್ ವ್ಯಾನ್ ನೀಕರ್ಕ್ 46, ಮಾರಿಜಾನೆ ಕಪ್ಪ 33, ಲಿಜೆಲಿ ಲೀ 19)
ಪೂನಂ ಯಾದವ್ 18ಕ್ಕೆ 3, ಏಕ್ತಾ ಬಿಷ್ತ್ 20ಕ್ಕೆ 2, ಹರ್ಮನ್ ಪ್ರೀತ್ ಕೌರ್ 24ಕ್ಕೆ 1