ಅಡಿಲೇಡ್, ಡಿ.4: ವೇಗದ ಬೌಲರ್ ವರುಣ್ ಆ್ಯರೊನ್‌ರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ದ್ವಿದಿನ ಅಭ್ಯಾಸ ಪಂದ್ಯದ ಮೊದಲ ದಿನವಾದ ಗುರುವಾರ ಭಾರತ ತಂಡ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ತಂಡವನ್ನು 243 ರನ್‌ಗೆ ಆಲೌಟ್ ಮಾಡಿದೆ.
ಮೊದಲ ದಿನದಾಟದಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದ್ದು, ಮುರಳಿ ವಿಜಯ್ (39) ಹಾಗೂ ನಾಯಕ ವಿರಾಟ್ ಕೊಹ್ಲಿ(30) ಕ್ರೀಸ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ದಾರುಣ ಸಾವಿನ ಹಿನ್ನೆಲೆಯಲ್ಲಿ ಕಳೆದ ವಾರ ಅಡಿಲೇಡ್ ಓವಲ್‌ನಲ್ಲಿ ನಡೆಯಬೇಕಾಗಿದ್ದ ಎರಡನೆ ಅಭ್ಯಾಸ ಪಂದ್ಯ ರದ್ಧಾಗಿತ್ತು.
ಗುರುವಾರ ಅಭ್ಯಾಸ ಪಂದ್ಯ ಆರಂಭಕ್ಕೆ ಮೊದಲು ಉಭಯ ತಂಡಗಳು ಒಂದು ನಿಮಿಷ ವೌನ ಪ್ರಾರ್ಥನೆ ನಡೆಸಿದವು. ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದವು. ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸಿದ ವೇಗದ ಬೌಲರ್ ವರುಣ್ ಆ್ಯರೊನ್ ಇನಿಂಗ್ಸ್‌ನ ಎರಡನೆ ಓವರ್‌ನಲ್ಲಿ ಆ್ಯಶ್ಟನ್ ಟರ್ನರ್ ವಿಕೆಟ್ ಉರುಳಿಸಿದರು.
ಇಬ್ಬರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡ ಆತಿಥೇಯರು 3 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದ್ದರು. ಜೋರ್ಡನ್ ಸಿಲ್ಕ್ ಹಾಗೂ ಅಲೆಕ್ಸ್ ಕೀತ್ (19) 71 ರನ್ ಸೇರಿಸಿ ತಂಡವನ್ನು ಆಧರಿಸಿದರು. ಸಿಲ್ಕ್ (58) ವಿಕೆಟ್ ಉಡಾಯಿಸಿದ ಆ್ಯರೊನ್ ಈ ಜೋಡಿಯನ್ನು ಬೇರ್ಪಡಿಸಿದರು. ಆ್ಯರೊನ್ 14.3 ಓವರ್‌ಗಳಲ್ಲಿ 41 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನೋರ್ವ ವೇಗದ ಬೌಲರ್ ಮುಹಮ್ಮದ್ ಶಮಿ ಎರಡು ವಿಕೆಟ್ ಪಡೆದರು. ಸ್ಪಿನ್ನರ್ ಕರಣ್ ಶರ್ಮ 3 ವಿಕೆಟ್ ಪಡೆದು ಗಮನ ಸೆಳೆದರು.
ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ಗೆ ಉತ್ತರಿಸಹೊರಟಿರುವ ಭಾರತ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ (0) ಹಾಗೂ ಚೇತೇಶ್ವರ ಪೂಜಾರರನ್ನು(22) ಅಲ್ಪ ಮೊತ್ತಕ್ಕೆ ಕಳೆದುಕೊಂಡಿದೆ. ಮೂರನೆ ವಿಕೆಟ್‌ಗೆ 63 ರನ್ ಜೊತೆಯಾಟ ನಡೆಸಿದ ವಿಜಯ್ ಹಾಗೂ ಕೊಹ್ಲಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್
ಮೊದಲ ಇನಿಂಗ್ಸ್: 243 ರನ್ (ಜೋರ್ಡನ್ ಸಿಲ್ಕ್ 58, ಗೊಟ್ಚೆ ಅಜೇಯ 58, ವರುಣ್ ಆ್ಯರೊನ್ 4-41, ಕರಣ್ ಶರ್ಮ 3-57, ಶಮಿ 2-37)
ಭಾರತ ಪ್ರಥಮ ಇನಿಂಗ್ಸ್: 99/2 (ಮುರಳಿ ವಿಜಯ್ ಅಜೇಯ 39, ಜೊಶ್ ಲಲಾರ್ 2-18)