ಮನೋರಂಜನೆ

`ರುದ್ರತಾಂಡವ’ ವಿಲನ್‍ ಟ್ರೈಲರ್ ಬಿಡುಗಡೆ

Pinterest LinkedIn Tumblr

rudrathandav

ಮೊದಲೆಲ್ಲಾ ಸಿನೆಮಾವೊಂದು ಇನ್ನೇನು ಬಿಡುಗಡೆಯಾಗಬೇಕು ಎನ್ನುವಾಗ ಆ ಚಿತ್ರದ ಆಡಿಯೋ ರಿಲೀಸ್ ಮಾಡುತ್ತಿದ್ದರು. ನಂತರ ಆ ಚಿತ್ರದ ಸಂಪೂರ್ಣ ಸಾರಾಂಶವನ್ನು ತಿಳಿಸುವ ಟ್ರೇಲರ್‍ಗಳನ್ನು ಬಿಡುಗಡೆ ಮಾಡುವ ಟ್ರೆಂಡ್ ಕೂಡಾ ಆರಂಭವಾಗಿತ್ತು. ಸಿನಿಮಾದ ನಾಯಕ, ನಾಯಕಿಯರನ್ನು ಪ್ರಧಾನವಾಗಿರಿಸಿಕೊಂಡು ತಯಾರಾಗುವ ಟ್ರೇಲರ್‍ಗಳು ಪಬ್ಲಿಸಿಟಿಗೆ ಸಾಕಷ್ಟು ಅನುಕೂಲವಾಗುತ್ತವೆ. ಇನ್ನು ಕೆಲವರು ತಮ್ಮ ಸಿನಿಮಾದ ಆರಂಭಿಕ ದಿನದಲ್ಲೇ ಟ್ರೇಲರ್‍ಗಳನ್ನು ರಿಲೀಸ್ ಮಾಡುವ ಪರಿಪಾಠವನ್ನೂ ಬೆಳೆಸಿಕೊಂಡಿದ್ದಾರೆ.

ಇಲ್ಲೊಂದು ಚಿತ್ರತಂಡ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರದ `ವಿಲನ್ ಟ್ರೇಲರ್’ಅನ್ನು  ವಿಶೇಷ ಅತಿಥಿಯೊಬ್ಬರ ಮೂಲಕ ರಿಲೀಸ್ ಮಾಡಿಸಿದೆ! ಹೌದು ಅದು ಗುರುದೇಶಪಾಂಡೆ ನಿರ್ದೇಶನದ ರುದ್ರತಾಂಡವ ಚಿತ್ರದ್ದು…

ಎಲ್ಲರಿಗೂ ತಿಳಿದಿರುವಂತೆ ರುದ್ರತಾಂಡವ ಚಿತ್ರ ತಮಿಳಿನಲ್ಲಿ ಬಂದು ಸೂಪರ್ ಹಿಟ್ ಆಗಿದ್ದ `ಪಾಂಡಿಯ ನಾಡು’ ಚಿತ್ರದ ಅವತರಿಣಿಕೆ. ಮೂಲ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಶಾಲ್ ನಟಿಸಿದ್ದರು. ಆ ಚಿತ್ರವನ್ನು ನಾಯಕನಟ ವಿಶಾಲ್ ಅವರ ತಂದೆ ಜಿ.ಕೆ. ರೆಡ್ಡಿಯವರು ತಮ್ಮದೇ ಬ್ಯಾನರ್‍ನಲ್ಲಿ ನಿರ್ಮಿಸಿದ್ದರು. ಹೀಗಾಗಿ ಕನ್ನಡದ ಟ್ರೇಲರ್‍ಅನ್ನು ಸ್ವತಃ ಜಿ.ಕೆ. ರೆಡ್ಡಿಯವರೇ ಲೋಕಾರ್ಪಣೆ ಮಾಡಿದರು. ಹಾಗೆ ನೋಡಿದರೆ, ಜಿ.ಕೆ. ರೆಡ್ಡಿ ಕಳೆದ ಐವತ್ತು ವರ್ಷಗಳಿಂದ ಚೆನ್ನೈನಲ್ಲೇ ನೆಲೆಸಿದ್ದರೂ ಮೂಲತಃ ಕರ್ನಾಟಕದವರು. ಹೀಗಾಗಿ ಸ್ಪಷ್ಟವಾದ ಕನ್ನಡವನ್ನು ಮಾತಾಡಬಲ್ಲವರಾಗಿದ್ದಾರೆ. ತಾವೊಬ್ಬ ಸಿನಿಮಾ ನಟನಾಗಬೇಕೆಂದು ಮದರಾಸಿನತ್ತ ಹೆಜ್ಜೆಯಿರಿಸಿದ್ದ ರೆಡ್ಡಿಯವರು ತಮ್ಮ ಕನಸು ಕೈಗೂಡದಿದ್ದಾಗ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿದ್ದರಂತೆ. ನಂತರ ತಮಿಳಿನ ಅನೇಕ ಖ್ಯಾತ ನಟರ ಸಿನಿಮಾಗಳನ್ನು ನಿರ್ಮಿಸಿ ದೊಡ್ಡ ನಿರ್ಮಾಪಕರೆನಿಸಿಕೊಂಡಿದ್ದಾರೆ. ಮಾತ್ರವಲ್ಲ ತಮ್ಮ ಮಗ ವಿಶಾಲ್‍ನನ್ನೂ ಹೀರೋ ಮಾಡಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವಯಸ್ಸು ಎಪ್ಪತ್ತಾರಾದರೂ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಜಿ.ಕೆ. ರೆಡ್ಡಿಯವರಿಗೆ ಇಷ್ಟರಲ್ಲೇ ಕನ್ನಡ ಚಿತ್ರವೊಂದನ್ನು ನಿರ್ಮಿಸಿ ಅದರಲ್ಲಿ ನಟನೆಯನ್ನೂ ಮಾಡಬೇಕೆಂಬ ಪರಮ ಹಂಬಲವಂತೆ…

ಇನ್ನು ರುದ್ರತಾಂಡವ ಚಿತ್ರದಲ್ಲಿ ಹೀರೋಗೆ ಸರಿಸಮನಾಗಿ ಆರ್ಭಟಿಸಿರುವವರು ಖಳನಟ ರವಿಶಂಕರ್. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ರವಿಶಂಕರ್ ಅವದ್ದು `ರುದ್ರತಾಂಡವ’ದಲ್ಲಿ ಪವರ್‍ಫುಲ್ ಪಾತ್ರ. ನಿರ್ದೇಶಕ ಗುರುದೇಶಪಾಂಡೆ ಮೂಲ ತಮಿಳು ಚಿತ್ರವನ್ನೂ ಮೀರಿಸುವಂತೆ `ರುದ್ರತಾಂಡವ’ವನ್ನು ನಿರೂಪಿಸಿದ್ದಾರಂಥೆ. ಇನ್ನು ನಿರ್ದೇಶಕರ ಪ್ಲಾನ್‍ಗೆ ಅಕ್ಷರಶಃ ಜೀವಕಳೆ ತಂದುಕೊಟ್ಟಿರುವವರು ಛಾಯಾಗ್ರಾಹಕ ಜಗದೀಶ್ ವಾಲಿ. ಇವರ ಶ್ರಮದ ಪ್ರತಿಫಲವೆಂಬಂತೆ ಚಿತ್ರದ ಟ್ರೇಲರ್ರೇ ಅಷ್ಟು ಅದ್ದೂರಿಯಾಗಿ ಮೂಡಿಬಂದಿದೆ.

ಇನ್ನು ವಿಲನ್‍ಗಾಗೇ ವಿಶೇಷವಾಗಿ ಟ್ರೇಲರ್ ರಿಲೀಸ್ ಮಾಡಿರುವುದು ನಟ ರವಿಶಂಕರ್ ಅವರಿಗೆ ಇನ್ನಿಲ್ಲದ ಖುಷಿಯುಂಟುಮಾಡಿದೆ. ರವಿಶಂಕರ್ ಅವರ ಸಂಭಾಷಣೆಯ ಶೈಲಿ, ಮ್ಯಾನರಿಸಂನಿಂದ ಹಿಡಿದು ಅವರ ಹೇರ್‍ಸ್ಟೈಲ್ ತನಕ ಎಲ್ಲವನ್ನೂ ವಿಭಿನ್ನವಾಗಿಸಿದ್ದಾರೆ ನಿರ್ದೇಶಕ ಗುರುದೇಶಪಾಂಡೆ.

ಚಿತ್ರದ ಬಹುತೇಕ ಚಿತ್ರೀಕರಣವನ್ನು ಕೋಲಾರದಲ್ಲಿ ನಡೆಸಲಾಗಿದೆ. ಹೀಗಾಗಿ ಟ್ರೇಲರ್‍ನಲ್ಲೂ ಕನ್ನಡ ಮತ್ತು ತೆಲುಗು ಭಾಷೆಗಳು ಸಮಪ್ರಮಾಣದಲ್ಲಿ ಮಿಶ್ರಣಗೊಂಡಿದೆ.

`ರುದ್ರತಾಂಡವ’ ಚಿತ್ರದ ನಿರ್ಮಾಪಕ ವಿನೋದ್ ಮಾತನಾಡುತ್ತಾ ಚಿತ್ರೀಕರಣ ಚೆನ್ನಾಗಿ ಮೂಡಿಬಂದಿದ್ದು ಮಾಧ್ಯಮದ ಸಹಕಾರವನ್ನು ಮೆಚ್ಚಿಕೊಂಡರು. `ರುದ್ರ ತಾಂಡವ’ ಚಿತ್ರದಲ್ಲಿ ನಾಯಕ ಚಿರಂಜೀವಿ ಸರ್ಜಾ ವಿಶೇಷವಾಗಿ ಗೆಟಪ್ ಮತ್ತು ನಟನೆಯಿಂದ ಕಂಗೊಳಿಸಿದ್ದಾರೆ. ಇನ್ನು ಇವರ ಜೊತೆ ಡಾ. ಗಿರೀಶ್ ಕಾರ್ನಾಡ್, ಮಿತ್ರ, ಕುಮಾರ್ ಗೋವಿಂದ್, ರವಿಶಂಕರ್, ವಸಿಷ್ಠ, ಸುರೇಶ್ ಮಂಗಳೂರು ಮತ್ತು ನಾಯಕಿಯರಾಗಿ ರಾಧಿಕಾ ಕುಮಾರಸ್ವಾಮಿ ಹಾಗೂ ಶ್ರುತಿರಾಜ್ ನಟಿಸಿದ್ದಾರೆ.

ಜಗದೀಶ್ ವಾಲಿ ಅವರ ಛಾಯಾಗ್ರಹಣ ಮತ್ತು ವಿ. ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕಿದೆ. ಇತ್ತೀಚಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾದ ಶರವಣ ಹಾಗೂ ವಿನೋದ್ ಅವರು ಈ ಚಿತ್ರದ ನಿರ್ಮಾಪಕರುಗಳು.

Write A Comment