ಹಂಬನ್‌ಟೋಟ (ಶ್ರೀಲಂಕಾ), ಡಿ.4: ಆರಂಭಿಕ ಬ್ಯಾಟ್ಸ್‌ಮನ್ ಮೊಯೀನ್ ಅಲಿ (58 ರನ್) ಹಾಗೂ ಜೋಸ್ ಬಟ್ಲರ್ (55)ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
ಬುಧವಾರ ಇಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಡಕ್‌ವರ್ತ್ ಲೂವಿಸ್ ನಿಯಮದಂತೆ ಪರಿಷ್ಕೃತ ಗುರಿ 35 ಓವರ್‌ಗಳಲ್ಲಿ 236 ರನ್ ಪಡೆದಿತ್ತು. 8 ಎಸೆತಗಳು ಬಾಕಿಯಿರುವಾಗಲೇ ಗೆಲುವಿನ ದಡ ಸೇರಿದ ಆಂಗ್ಲರು ಏಳು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 35 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿತ್ತು. ಕುಮಾರ ಸಂಗಕ್ಕರ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 13,000 ರನ್ ಪೂರೈಸಿದ ವಿಶ್ವದ ನಾಲ್ಕನೆ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾದರು. 37ರ ಹರೆಯದ ಸಂಗಕ್ಕರ 13 ರನ್ ಗಳಿಸುವಷ್ಟರಲ್ಲಿ ಹೊಸ ಮೈಲುಗಲ್ಲನ್ನು ತಲುಪಿದ್ದು, 63 ರನ್ ಗಳಿಸಿ ತಂಡದ ಪರ ಅಗ್ರ ಸ್ಕೋರರ್ ಎನಿಸಿಕೊಂಡರು.
ಲಹಿರು ತಿರಿಮನ್ನೆ ಅಜೇಯ 62 ರನ್ ಗಳಿಸಿದ್ದರು. ಇಂಗ್ಲೆಂಡ್ ಇನಿಂಗ್ಸ್‌ನಲ್ಲಿ ಆರಂಭಿಕ ದಾಂಡಿಗ ಮೊಯೀನ್ ಅಲಿ (58 ರನ್, 40 ಎ, 2 ಬೌಂ, 6 ಸಿ.) ಉತ್ತಮ ಆರಂಭವನ್ನು ನೀಡಿದರು. ಆರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 84 ರನ್ ಸೇರಿಸಿದ ಜೊ ರೂಟ್ ಹಾಗೂ ಜೊಸ್ ಬಟ್ಲರ್ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು.
ಪಂದ್ಯಶ್ರೇಷ್ಠ ಬಟ್ಲರ್ 37 ಎಸೆತಗಳಲ್ಲಿ 55 ರನ್ ಬಾರಿಸಿದರು. ರೂಟ್ 48 ಎಸೆತಗಳಲ್ಲಿ 48 ರನ್ ದಾಖಲಿಸಿದರು. 15ನೆ ಓವರ್‌ನಲ್ಲಿ ಅಲಿ ರನೌಟಾದ ನಂತರ ಇಂಗ್ಲೆಂಡ್ ತಂಡ ಕೇವಲ 49 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ನಿರ್ಣಾಯಕ ಜೊತೆಯಾಟ ನಡೆಸಿದ ರೂಟ್ ಹಾಗೂ ಬಟ್ಲರ್ ಶ್ರೀಲಂಕಾ ಕೈಯಿಂದ ಗೆಲುವನ್ನು ಕಸಿದುಕೊಂಡರು. ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಲಂಕಾ ಗೆದ್ದುಕೊಂಡಿದೆ. ನಾಲ್ಕನೆ ಏಕದಿನ ಪಂದ್ಯ ರವಿವಾರ ಕೊಲಂಬೊದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 35 ಓವರ್‌ಗಳಲ್ಲಿ 242/8
(ಸಂಗಕ್ಕರ 63, ತಿರಿಮನ್ನೆ ಅಜೇಯ 62, ವೊಕೆಸ್ 3-41, ಜೋರ್ಡನ್ 2-42)
ಇಂಗ್ಲೆಂಡ್: 33.4 ಓವರ್‌ಗಳಲ್ಲಿ 236/5
(ಮೊಯೀನ್ ಅಲಿ 58, ಬಟ್ಲರ್ 55, ರೂಟ್ 48, ಮ್ಯಾಥ್ಯೂಸ್ 2-34).
ಪಂದ್ಯಶ್ರೇಷ್ಠ: ಜೋಸ್ ಬಟ್ಲರ್.