ಈ ಹಿಂದೆ ಶತ್ರು ಹಾಗೂ ಸುಬ್ರಹ್ಮಣಿ ಚಿತ್ರಗಳನ್ನು ನಿರ್ದೇಶಿಸಿದ್ದ ಜೆಕೆಎಸ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಮೂರನೇ ಕನ್ನಡ ಸಿನಿಮಾ ‘ಅಲೋನ್’. ಸುಂದರ ತಾಣವಾದ ಕಾಪು ಬೀಚ್ ಬಳಿ ವಿಶೇಷವಾದ ಮನೆಯೊಂದನ್ನು ನಿರ್ಮಿಸಿ ಅಲ್ಲಿಯೇ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಸತತವಾಗಿ 26 ದಿವಸಗಳ ಕಾಲ ಚಿತ್ರೀಕರಣ ಮಾಡಿರುವ ನಿರ್ದೇಶಕ ಜೆ ಕೆ ಎಸ್ ಅವರು ಗೋವಾ ರಾಜ್ಯದಲ್ಲೂ 5 ದಿವಸಗಳ ಕ್ಲೈಮಾಕ್ಸ್ ಚಿತ್ರೀಕರಣ ಬಾಕಿ ಇಟ್ಟುಕೊಂಡಿದ್ದಾರೆ.
ಈ ಚಿತ್ರದ ವಿಶೇಷ ಪಾತ್ರದಲ್ಲಿ ಬಾಲಿವುಡ್ ಪ್ರಸಿದ್ಧ ನಟ ಸುನಿಲ್ ಶೆಟ್ಟಿ ನಟಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಸುನಿಲ್ ಶೆಟ್ಟಿ ಅವರದು ಪೊಲೀಸ್ ತನಿಖಾಧಿಯಾರಿ ಕಾಣಿಸಲಿದ್ದಾರೆ. ಈ ಚಿತ್ರಕ್ಕಾಗಿ ಸುನಿಲ್ ಒಂದು ವಾರದ ಕಾಲ್ ಶೀಟ್ ಕೊಟ್ಟಿದ್ದಾರೆ.
ಕಾಪು ಬೀಚ್ ಬಳಿ ನಿರ್ಮಾಣಗೊಂಡಿರುವ ಮನೆಯ ಒಡತಿ ನಾಯಕಿ ನಿಕಿಶಾ ಪಟೇಲ್. ಅವರ ಮನೆಯಲ್ಲಿ ಹಲವಾರು ವಿಚಿತ್ರ, ವಿಕ್ಷಿಪ್ತ ಘಟನೆಗಳು ಜರಗುತ್ತವೆ. ಅವೆಲ್ಲವೂ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುತ್ತವೆ. ಆ ಘಟನೆಗಳ ಅಸಲಿಯತ್ತೇನೆಂಬುದೇ ಚಿತ್ರದ ವಸ್ತು! ಈ ಕುತೂಹಲಕಾರಿ ಸಿನಿಮಾದ ತಾರಾಗಣದಲ್ಲಿ ಸುನಿಲ್ ಶೆಟ್ಟಿ, ನಿಕಿಶಾ ಪಟೇಲ್, ಇನಿಯ, ವಸಿಷ್ಠ, ಗಣೇಶ್, ಸಾಧು ಕೋಕಿಲ, ತಬ್ಲ ನಾಣಿ, ದಿಲೀಪ್, ಅವಿನಾಷ್, ಮಂಗಳೂರು ಸುರೇಶ್, ಶಾಂತಮ್ಮ ಹಾಗೂ ಇತರರು ಇದ್ದಾರೆ.
ನಿರ್ದೇಶಕ ಜೆ ಕೆ ಎಸ್ ಅವರು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಏಕ ಕಾಲದಲ್ಲಿ ಚಿತ್ರೀಕರಣ ಮಾಡುತ್ತಿರುವ ಈ ಚಿತ್ರದ ನಿರ್ಮಾಪಕರು ಅನಂತ್ ಹಾಗೂ ಪಿ ಕೆ ಫುಡ್ಸ್ ಮಾಲೀಕರಾದ ರಾಮಲಿಂಗಯ್ಯ. ಸುಜಿತ್ ಶೆಟ್ಟಿ ಅವರ ಸಂಗೀತ ಹಾಗೂ ಜೈ ಆನಂದ್ ಅವರು ಛಾಯಾಗ್ರಹಣ ಒದಗಿಸಿದ್ದಾರೆ.