ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ, ನೆನ್ನೆ ಟಿಂಬಕ್ಟು ಚಲನಚಿತ್ರ ಪ್ರದರ್ಶನಗೊಂಡಿತು. ಅಬ್ಡರಹಮಾನ್ ಸಿಸ್ಸಾಕೋ ನಿರ್ದೇಶನದ ಈ ಚಲನಚಿತ್ರ ಈಗಾಗಲೇ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ವಿಮರ್ಶಕರ ಮೆಚ್ಚುಗೆ ಗಳಿಸಿದೆ. ಬಹು ವಿಖ್ಯಾತ ಕಾನ್ ಸಿನಿಮೋತ್ಸವದಲ್ಲಿ ಮುಖ್ಯ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿದ್ದ ಈ ಸಿನಿಮಾ ಜ್ಯೂರಿ ಪ್ರಶಸ್ತಿ ಗೆದ್ದಿತ್ತು.
ಸಾಮಾಜಿಕ-ರಾಜಕೀಯ ಚಿತ್ರಣ ಅದಕ್ಕೆ ಪ್ರತಿಕ್ರಿಯೆ ಮತ್ತು ಅತ್ಯುತ್ತಮ ಸಿನೆಮಾ ಗುಣಗಳು ಮೇಳೈಸಿರುವ ಸಿನೆಮ
ಉತ್ತರ ಆಫ್ರಿಕಾದ ಟಿಂಬಕ್ಟು ಎಂಬ ಪ್ರದೇಶದಲ್ಲಿ ರಿಲಿಜಿಯನ್ ಆಡಳಿತ ಬಂದ ಮೇಲೆ ಜನರು ಒಳಗಾಗುವ ಹಿಂಸೆಯನ್ನು ಪರಿಣಾಮಕಾರಿ ದೃಶ್ಯಗಳ ಮೂಲಕ ಸೆರೆ ಹಿಡಿದಿರುವ ಈ ಸಿನೆಮಾ ಸಿನಿಮೋತ್ಸವದ ಅತ್ಯುತ್ತಮ ಆಯ್ಕೆಗಳಲ್ಲೊಂದು.
ಮುಸ್ಲಿಂ ಧರ್ಮದ ತೀವ್ರವಾದಿಗಳ ಆಡಳಿತವನ್ನು ವಿರೋಧಿಸಿ, ನಗರದ ಇನ್ನೊಂದು ಬದಿಗೆ ಒಂದು ಸರಳ ಟೆಂಟ್ ನಲ್ಲಿ ಕಿದಾನೆ ತನ್ನ ಹೆಂಡತಿ ಸಾತಿಮಾ ಮತ್ತು ಮಗಳು ಟೋಯಾ ಜೊತೆ ವಾಸಿಸುತ್ತಾನೆ. ತನ್ನ ನೆರೆಹೊರೆಯವರೆಲ್ಲಾ ಮೂಲಭೂತವಾದಿಗಳಿಗೆ ಹೆದರಿ ಓಡಿಹೋಗಿರುತ್ತಾರೆ ಅಥವಾ ಹಿಂಸೆಗೆ ಬಲಿಯಾಗಿರುತ್ತಾರೆ. ಈ ಧಾರ್ಮಿಕ ತೀವ್ರವಾದಿಗಳು ದಿನಾಲು ಹೊಸ ಹೊಸ ಧಾರ್ಮಿಕ ಕಾನೂನನ್ನು ಜನರ ಮೇಲೆ ಹೇರುತ್ತಿರುತ್ತಾರೆ. ಸಿಗರೇಟ್ ಸೇದದಂತೆ, ಮಹಿಳೆಯರು ಕೈಗಳನ್ನು ಮತ್ತು ಕಾಲುಗಳನ್ನು ಕೈಚೀಲ ಮತ್ತು ಕಾಲು ಚೀಲಗಳಿಂದ ಮುಚ್ಚಿಕೊಂಡು ಓಡಾಡುವಂತೆ, ಫುಟ್ ಬಾಲ್ ಮತ್ತು ಸಂಗೀತವನ್ನು ನಿಷೇಧಿಸಿದ ಕಾನೂನುಗಳ ಮಧ್ಯೆ ಜನ ಬದುಕುತ್ತಿರುವ ಘಟನೆಗಳನ್ನು ಮನಕಲಕುವಂತೆ ಚಿತ್ರಿಸಿದ್ದಾರೆ. ಈ ಹಿಂಸೆಯ ಮಧ್ಯೆಯೂ ಪ್ರತಿರೋಧ ತೋರುವ ಮಹಿಳೆಯರೂ, ಇವರ್ಯಾರಿಗೂ ಹೆದರಿಕೊಳ್ಳದ ಹುಚ್ಚಿ, ತೀವ್ರವಾದಿಗಳ ಮುಂದೆ ಧರ್ಮಗ್ರಂಥದ ನಿಜ ಅರ್ಥವನ್ನು ಅವರಿಗೆ ಅರ್ಥ ಮಾಡಿಸಲು ಸಾಧ್ಯವಾಗದೆ ಕೈಚೆಲ್ಲಿ ಕೂರುವ ಮುಸ್ಲಿಂ ಧರ್ಮನಾಯಕನ ಪಾತ್ರಗಳು ಗಟ್ಟಿಯಾಗಿ ನಿಲ್ಲುತ್ತವೆ. ಫುಟ್ ಬಾಲ್ ನಿಷೇದಿತ ಸಮಾಜದಲ್ಲಿ, ಚೆಂಡೇ ಇಲ್ಲದೆ ಬರೀ ಆಕ್ಷನ್ ಮೂಲಕ ಮಕ್ಕಳು ಫುಟ್ ಬಾಲ್ ಆಡುವುದು, ಮಹಿಳೆ ಸಂಗೀತ ಹಾಡುತ್ತಿದ್ದಳೆಂದು ಅವಳನ್ನು ಶಿಕ್ಷೆಗೆ ಒಳಪಡಿಸಿ ಛಡಿ ಏಟಿಗೆ ಗುರಿಯಾದಾಗ, ಏಟು ತಿನ್ನುವಾಗ ನೋವು ಸಹಿಸಿಕೊಳ್ಳಲು ಮತ್ತೆ ಹಾಡುವುದಕ್ಕೆ ಮೊರೆ ಹೋಗುವುದು, ಇಂತಹ ದೃಶ್ಯಗಳು ಮನದಲ್ಲಿ ಉಳಿದು ಬಿಡುತ್ತವೆ. ಹಾಗೆಯೇ ಫುಟ್ ಬಾಲ ನಿಷೇಧವಿದ್ದರೂ ಯುವ ಪೋಲಿಸರೇ ಫುಟ್ ಬಾಲ್ ಪಂದ್ಯಗಳ ಬಗ್ಗೆ ಚರ್ಚಿಸುವುದು, ಕದ್ದು ಮುಚ್ಚಿ ಸಿಗರೆಟ್ ಸೇದುವುದು ಇಂತಹ ದೃಶ್ಯಗಳು ಹೇಗೆ ಅಲ್ಲಿನ ಯುವಕರು ಮೂಲಭೂತವಾದಕ್ಕೆ ಒಲವಿಲ್ಲದೆ ಬಲಿಯಾಗುತ್ತಾರೆ ಎಂಬುದನ್ನು ಚಿತ್ರಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಕಿದಾನೆ ಒಂದು ಜಗಳದಲ್ಲಿ ಒಬ್ಬ ಮನುಷ್ಯನನ್ನು ಕೊಂದು ಜೈಲು ಪಾಲಾಗುತ್ತಾನೆ. ಇಂತಹ ಸ್ಥಿತಿಯಲ್ಲಿ ತನ್ನ ಹೆಂಡತಿ ಮತ್ತು ತನ್ನ ಮಗಳನ್ನು ಅಗಲಿ, ಧಾರ್ಮಿಕ ಶಿಕ್ಷೆಗೆ ಒಳಗಾಗುವ ದುರಂತ ಕಥೆ ಇದಾಗಿದೆ.
ಧಾರ್ಮಿಕ ವ್ಯವಸ್ಥೆ ಮತ್ತು ಧರ್ಮದ ಕಾನೂನುಗಳು (ಅದೂ ತಪ್ಪು ಅರ್ಥದ ಮತ್ತು ತಪ್ಪು ಕಲ್ಪನೆಯ) ರಾಜಕೀಯ ವ್ಯವಸ್ಥೆಯನ್ನು ಒಳಹೊಕ್ಕಾಗ ಆಗುವ ದುರಂತವನ್ನು ಚಿತ್ರಿಸುವ ಈ ಸಿನೆಮಾ, ಘೋರ ರಾಜಕೀಯ ಸನ್ನಿವೇಶಕ್ಕೆ ನೀಡಿದ ಪ್ರತಿಕ್ರಿಯೆಯಷ್ಟೇ ಅಲ್ಲದೆ, ಸಿನೆಮಾದ ಎಲ್ಲ ಗುಣಗಳನ್ನೂ ಅಳವಡಿಸಿಕೊಂಡಿದೆ. ಚಿತ್ರೀಕರಣ, ನಿಶ್ಯಬ್ಧದ ಬಳಕೆ, ಹಿನ್ನಲೆ ಸಂಗೀತ, ಸಂಗೀತ, ನಟನೆ ಮತ್ತು ಕಥೆ ಮೇಳೈಸಿರುವ ಈ ಸಿನೆಮಾ ಎಲ್ಲರೂ ನೋಡಲೇಬೇಕಾದ ಸಿನಿಮಾ..
ಈ ಸಿನೆಮಾ ಮತ್ತೆ ಡಿಸೆಂಬರ್ ೮ ರಂದು ಲಿಡೋ ನಲ್ಲಿ ಸ್ಕ್ರೀನ್ ಮೂರರಲ್ಲಿ ೧೨:೪೫ಕ್ಕೆ ಪ್ರದರ್ಶನಗೊಳ್ಳಲಿದೆ.