ಭುವನೇಶ್ವರ, ಡಿ.6: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿಯ ವಿರುದ್ಧ ಸೋಲು ಅನುಭವಿಸಿದೆ.
ಫೂಚಸ್ ಫ್ಲೋರಿಯನ್ 60ನೆ ನಿಮಿಷದಲ್ಲಿ ದಾಖಲಿಸಿದ ಏಕೈಕ ಗೋಲು ಸಹಾಯದಿಂದ ಜರ್ಮನಿ ತಂಡ ಭಾರತಕ್ಕೆ 1-0 ಅಂತರದಲ್ಲಿ ಸೋಲುಣಿಸಿತು.ಭಾರತದ ಗೋಲು ಕೀಪರ್ ಶ್ರೀಜೇಸ್ ಅವರು ಜರ್ಮನಿ ಆಟಗಾರರು ಗೋಲು ಗಳಿಸಲು ನಡೆಸಿದ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ್ದರು. ಆದರೆ ಅವರಿಗೆ ಫ್ಲೋರಿಯನ್ ಪ್ರಯತ್ನವನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ.
‘ಬಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಹಾಲೆಂಡ್ ತಂಡ ಅರ್ಜೆಂಟೀನವನ್ನು 3-0 ಅಂತರದಲ್ಲಿ ಬಗ್ಗು ಬಡಿದು ಗೆಲುವಿನ ಖಾತೆ ತೆರೆಯಿತು.
ಆಸ್ಟ್ರೇಲಿಯವನ್ನು ಬಗ್ಗು ಬಡಿದ ಇಂಗ್ಲೆಂಡ್ ಸ್ಯಾಮುಯೆಲ್ ವಾರ್ಡ್ ಬಾರಿಸಿದ ಎರಡು ಗೋಲುಗಳ ನೆರವಿನಲ್ಲಿ ಇಂಗ್ಲೆಂಡ್ ತಂಡ ಇಲ್ಲಿ ನಡೆದ 35ನೆ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 3-1 ಗೆಲುವಿನೊಂದಿಗೆ ಶುಭಾರಂಭ ಮಾಡಿತು.
ಕಳಿಂಗ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಲೆಸ್ಟೈರ್ ಬ್ರಾಗ್‌ಡಾನ್ ಇನ್ನೊಂದು ಗೋಲು ದಾಖಲಿಸಿದ ಇಂಗ್ಲೆಂಡ್‌ನ ಆಟಗಾರ.
ಆಸ್ಟ್ರೇಲಿಯ ತಂಡದಲ್ಲಿ ಮಿಡ್ ಮೀಲ್ಡರ್ ಜಮೈ ದ್ವಾಯೆರ್, ಮಾರ್ಕ್ ನೋಲ್ವೆಸ್, ಕೀರನ್ ಗೋವೆರ್ಸ್ ಮತ್ತು ಜೋಯೆಲ್ ಕ್ಯಾರೊಲ್ ಅವರು ಗಾಯದಿಂದಾಗಿ ಆಡಿರಲಿಲ್ಲ. ಇವರ ಅನುಪಸ್ಥಿತಿಯಲ್ಲಿ ಆಡಿದ ಆಸ್ಟ್ರೇಲಿಯ ತಂಡದ ವಿರುದ್ಧ ಇಂಗ್ಲೆಂಡ್ ಮೇಲುಗೈ ಸಾಧಿಸಿತ್ತು.
ಆರನೆ ನಿಮಿಷದಲ್ಲಿ ಬ್ರಾಗ್‌ಡಾನ್ ಇಂಗ್ಲೆಂಡ್‌ನ ಖಾತೆಗೆ ಮೊದಲ ಗೋಲು ಜಮೆ ಮಾಡಿದರು. 27ನೆ ನಿಮಿಷದಲ್ಲಿ ಸ್ಯಾಮುಯೆಲ್ ವಾರ್ಡ್ ಗೋಲು ಬಾರಿಸಿ ಇಂಗ್ಲೆಂಡ್‌ಗೆ 2-0 ಮುನ್ನಡೆ ಸಾಧಿಸಲು ನೆರವಾದರು. ಆದರೆ 54ನೆ ನಿಮಿಷದಲ್ಲಿ ಆಸ್ಟ್ರೇಲಿಯದ ಸಿರಿಯೆಲ್ಲೊ ಗೋಲು ದಾಖಲಿಸಿದರು. ಆದರೆ ಮತ್ತೆ ಎರಡು ನಿಮಿಷ ಕಳೆಯುವಷ್ಟರಲ್ಲಿ ಇಂಗ್ಲೆಂಡ್‌ನ ವಾರ್ಡ್ ಗೋಲು ಕಬಳಿಸಿ ತಂಡಕ್ಕೆ 3-1 ಗೆಲುವು ಸಾಧಿಸಲು ನೆರವಾದರು.