ಸಿಡ್ನಿ, ಡಿ.6: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿಯನ್ನು ಮಂಗಳವಾರ ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್‌ನಲ್ಲಿ ಆಡುವ ಮೂಲಕ ಆರಂಭಿಸಲಿದೆ.
ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಅವರ ಆಕಸ್ಮಿಕ ಸಾವಿನ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಆಸ್ಟ್ರೇಲಿಯ ತಂಡದಿಂದ ಭಾರತಕ್ಕೆ ಕಠಿಣ ಸವಾಲನ್ನು ನಿರೀಕ್ಷಿಸಲಾಗಿದೆ. ಸ್ವದೇಶದಲ್ಲಿ ಹುಲಿಯಂತೆ ಘರ್ಜಿಸುವ ಟೀಮ್ ಇಂಡಿಯಾ ವಿದೇಶಿ ಪಿಚ್‌ನಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸುವಲ್ಲಿ ಎಡವುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಕುತೂಹಲ ಕೆರಳಿಸಿದೆ.
ಅಗ್ರ ಸರದಿ: ಟೆಸ್ಟ್‌ನಲ್ಲಿ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸಲಿದ್ದಾರೆ. ಇವರು ಆಸ್ಟ್ರೇಲಿಯದ ಹೊಸ ಚೆಂಡಿನ ದಾಳಿಯನ್ನು ಎದುರಿಸಲಿದ್ದಾರೆ. ಶಿಖರ್ ಧವನ್ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರು ಇನಿಂಗ್ಸ್‌ಗಳಲ್ಲಿ ಅರ್ಧಶತಕ ದಾಖಲಿಸುವಲ್ಲಿ ಎಡವಿದ್ದರು. ಈ ಕಾರಣದಿಂದಾಗಿ ಅವರು ಆಸ್ಟ್ರೇಲಿಯದ ಬೌನ್ಸಿ ಪಿಚ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ಚೆನ್ನಾಗಿ ಆಡಬೇಕಾಗಿದೆ. ಅಭ್ಯಾಸ ಪಂದ್ಯದಲ್ಲೂ ಅವರು ವಿಫಲರಾಗಿದ್ದಾರೆ.
ಮುರಳಿ ವಿಜಯ್ ಇಂಗ್ಲೆಂಡ್‌ನಲ್ಲಿ ಚೆನ್ನಾಗಿ ಆಡಿದ್ದರು. ಆಸ್ಟ್ರೇಲಿಯದಲ್ಲಿ ನಡೆದ ಅಭ್ಯಾಸ ಪಂದ್ಯಗಳ ಎರಡು ಇನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ನಂ.3 ಚೇತೇಶ್ವರ ಪೂಜಾರ 2014ರಲ್ಲಿ ಟೆಸ್ಟ್‌ನಲ್ಲಿ ದೊಡ್ಡ ಸಾಧನೆ ಮಾಡಿಲ್ಲ. ಗೋಡೆ ಖ್ಯಾತಿಯ ಕಲಾತ್ಮಕ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯೆಂದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡ ಪೂಜಾರ ತನ್ನ ಸ್ಥಾನಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯ ಸರಣಿಯಲ್ಲಿ ಶ್ರಮಿಸಬೇಕಾಗಿದೆ. ಅಗ್ರ ಸರದಿಯಲ್ಲಿ ತಂಡದ ಉಪನಾಯಕ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾ ಅತಿಯಾಗಿ ಅವಲಂಬಿಸಿದೆ.
ಮಧ್ಯಮ ಸರದಿ: ಅಜಿಂಕ್ಯ ರಹಾನೆ ನಂ.5 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ.ರಹಾನೆ ಆಸ್ಟ್ರೇಲಿಯ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ. ಪ್ರದರ್ಶನ ಪಂದ್ಯದಲ್ಲಿ ಅವರಿಂದ ಅರ್ಧಶತಕ ದಾಖಲಾಗಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ರೋಹಿತ್ ಶರ್ಮ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಸುರೇಶ್ ರೈನಾ ಮರಳಿ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈ ಹಿಂದೆ ಗಾಯದ ಕಾರಣದಿಂದಾಗಿ ಮೊದಲ ಟೆಸ್ಟ್‌ಗೆ ವಿಶ್ರಾಂತಿ ನೀಡಲಾಗಿತ್ತು. ವೇಳಾಪಟ್ಟಿ ಬದಲಾವಣೆಯ ಹಿನ್ನೆಲೆಯಲ್ಲಿ ಅವರು ಮೊದಲ ಟೆಸ್ಟ್‌ನಲ್ಲಿ ಆಡುವುದನ್ನು ನಿರೀಕ್ಷಿಸಲಾಗಿದೆ. ವಿದೇಶದಲ್ಲಿ ನಡೆಯುವ ಟೆಸ್ಟ್‌ನಲ್ಲಿ ಧೋನಿ ಬ್ಯಾಟ್‌ನಿಂದ ಚೆನ್ನಾಗಿ ರನ್ ಹರಿದು ಬರುತ್ತಿಲ್ಲ ಎನ್ನುವುದು ಹಳೆಯ ಆರೋಪ. ಇಂಗ್ಲೆಂಡ್ ಸರಣಿಯಲ್ಲಿ ಧೋನಿ ಗರಿಷ್ಠ ರನ್ ದಾಖಲಿಸಿದ ಆಟಗಾರರ ಪೈಕಿ ಎರಡನೆ ಸ್ಥಾನ ಪಡೆಯುವ ಮೂಲಕ ತನ್ನ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ. ಆಸ್ಟ್ರೇಲಿಯದಲ್ಲೂ ಧೋನಿ ತನ್ನ ಅಪೂರ್ವ ಫಾರ್ಮ್‌ನ್ನು ಮುಂದುವರಿಸುವುದನ್ನು ನಿರೀಕ್ಷಿಸಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಸರದಿ ವಿಫಲಗೊಂಡಾಗ ತಂಡವನ್ನು ರಕ್ಷಿಸಲು ಗರಿಷ್ಠ ಪ್ರಯತ್ನ ನಡೆಸುವ ಧೋನಿ ಟೆಸ್ಟ್‌ನಲ್ಲೂ ಅದೇ ಪ್ರಯತ್ನ ಮುಂದುವರಿಸಬೇಕಾಗಿದೆ.
ಆಲ್‌ರೌಂಡರ್: ಟೀಮ್ ಇಂಡಿಯಾ ವೇಗದ ಬೌಲಿಂಗ್‌ನ ಜೊತೆಗೆ ಬ್ಯಾಟಿಂಗ್‌ನಲ್ಲಿ ಮಿಂಚುವ ಆಲ್‌ರೌಂಡರ್ ಕೊರತೆ ಎದುರಿಸುತ್ತಿದೆ. ಭುವನೇಶ್ವರ ಕುಮಾರ್ ಇಂಗ್ಲೆಂಡ್‌ನಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಆಸ್ಟ್ರೇಲಿಯದಲ್ಲೂ ಭುವನೇಶ್ವರ ಕುಮಾರ್ ಆಲ್‌ರೌಂಡರ್ ಪಾತ್ರ ನಿರ್ವಹಿಸುವುದನ್ನು ನಿರೀಕ್ಷಿಸಲಾಗಿದೆ. ಸ್ನಿನ್ನರ್ ಆಲ್‌ರೌಂಡರ್ ಸ್ಥಾನಕ್ಕಾಗಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಪೈಪೋಟಿ ನಡೆಸುತ್ತಿದ್ದಾರೆ. ಸ್ಪಿನ್ ಬೌಲಿಂಗ್: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ರವಿಚಂದ್ರನ್ ಅಶ್ವಿನ್ ಬದಲಿಗೆ ವಿದೇಶಿ ಪಿಚ್‌ನಲ್ಲಿ ನಡೆದ ಟೆಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು. ಅಭ್ಯಾಸ ಪಂದ್ಯಗಳಲ್ಲಿ ಅಶ್ವಿನ್ ಮತ್ತು ಜಡೇಜ ಪ್ರದರ್ಶನ ಒಂದೇ ರೀತಿಯ ಪ್ರದರ್ಶನ ನೀಡಿದ್ದರು. ಲೆಗ್ ಸ್ಪಿನ್ನರ್ ಕರಣ್ ಶರ್ಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ವೇಗದ ಬೌಲಿಂಗ್: ಇಶಾಂತ್ ಶರ್ಮ ಮತ್ತು ಭುವನೇಶ್ವರ ಕುಮಾರ್ ಭಾರತದ ವೇಗದ ಬೌಲಿಂಗ್ ದಾಳಿಯನ್ನು ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ. ಮೂರನೆ ವೇಗದ ಬೌಲರ್ ಸ್ಥಾನಕ್ಕಾಗಿ ವರುಣ್ ಆ್ಯರೊನ್, ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ ನಡುವೆ ಪೈಪೋಟಿ ಕಂಡು ಬಂದಿದೆ. ಅಭ್ಯಾಸ ಪಂದ್ಯಗಳಲ್ಲಿ ವರುಣ್ ಆ್ಯರೊನ್ ಮಿಂಚಿದ್ದಾರೆ. ಈ ಕಾರಣದಿಂದಾಗಿ ಮೊದಲ ಟೆಸ್ಟ್‌ಗೆ ಆ್ಯರೊನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.