ಹೊಸದಿಲ್ಲಿ, ಡಿ.6: ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯದಲ್ಲಿ ಮುಂಬರುವ ಟೆಸ್ಟ್ ಸರಣಿಯಲ್ಲಿ ಯಶಸ್ವಿಯಾಗಲು ಆರಂಭಿಕ ಜೋಡಿ ಗರಿಷ್ಠ ರನ್ ದಾಖಲಿಸಿ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿಕೊಡಬೇಕಾಗಿದೆ.
ಭಾರತ ಕ್ರಿಕೆಟ್ ತಂಡಕ್ಕೆ ಆರಂಭಿಕ ಜೋಡಿ ಉತ್ತಮ ಫಾರ್ಮ್‌ನಲ್ಲಿದ್ದಾಗ ಗೆಲುವು ಸಾಧ್ಯವಾಗಿದೆ. ಟೆಸ್ಟ್ ತಂಡದ ಹಿಂದಿನ ಜೋಡಿ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ 2010ರಲ್ಲಿ ದಕ್ಷಿಣ ಆಫ್ರಿಕದ ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ 137 ರನ್‌ಗಳ ಜೊತೆಯಾಟ ನೀಡಿ ಗಮನ ಸೆಳೆದಿದ್ದರು. ಆ ಬಳಿಕ ವಿದೇಶಿ ನೆಲದಲ್ಲಿ ನಡೆದ 23 ಟೆಸ್ಟ್‌ಗಳಲ್ಲಿ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಇದೀಗ ಭಾರತ ಉತ್ತಮ ಆರಂಭಿಕ ಜೋಡಿಯ ಶೋಧದಲ್ಲಿ ತೊಡಗಿದೆ. ವಿದೇಶ ಪ್ರವಾಸದಲ್ಲಿ ಭಾರತದ ಆರಂಭಿಕ ದಾಂಡಿಗರು ಇತ್ತೀಚಿನ ದಿನಗಳಲ್ಲಿ ವೈಫಲ್ಯ ಅನುಭವಿಸುತ್ತಿರುವುದು ತಂಡವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ.
ಬ್ಯಾಟ್ಸ್‌ಮನ್‌ಗಳ ದೊಡ್ಡ ಕೊಡುಗೆಯಿಲ್ಲದೆ ಕೇವಲ ಬೌಲರ್‌ಗಳ ಪ್ರಯತ್ನದಿಂದಾಗಿ ಟೆಸ್ಟ್ ಗೆಲ್ಲಲು ಭಾರತಕ್ಕೆ ಸುಲಭವಲ್ಲ. ಕಳೆದ 23 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಬೌಲರ್‌ಗಳ ಉತ್ತಮ ಪ್ರದರ್ಶನದ ನೆರವಿನಲ್ಲಿ ಭಾರತ ಗೆಲುವು ದಾಖಲಿಸಿದೆ.
14 ಟೆಸ್ಟ್ ಪಂದ್ಯಗಳನ್ನು ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಭಾರತ ಕಳೆದುಕೊಂಡಿದೆ. ಭಾರತ ಬೌಲರ್‌ಗಳು ವಿದೇಶಿ ಟೆಸ್ಟ್‌ವೊಂದರಲ್ಲಿ ಎದುರಾಳಿ ತಂಡದ 20 ದಾಂಡಿಗರಿಗೆ ಪೆವಿಲಿಯನ್ ದಾರಿ ತೋರಿಸುತ್ತಾರೆ ಎನ್ನುವ ಭರವಸೆ ಇಲ್ಲ. ಭಾರತದ ಈಗಿನ ಟೆಸ್ಟ್ ಆರಂಭಿಕ ದಾಂಡಿಗರಾದ ಶಿಖರ್ ಧವನ್ ಮತ್ತು ಮುರಳಿ ವಿಜಯ್ 14 ಇನಿಂಗ್ಸ್‌ಗಳ ಪೈಕಿ ಇನ್ನಿಂಗ್ಸ್‌ವೊಂದರಲ್ಲಿ ದಾಖಲಾದ ಗರಿಷ್ಠ ಜೊತೆಯಾಟ 49 ರನ್. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಮುರಳಿ ವಿಜಯ್ ಸರದಿ ಬದಲಿಸಿ ಆಡಿ ಒಂದು ಶತಕ ಮತ್ತು 2 ಅರ್ಧಶತಕಗಳನ್ನು ಆಡಿದ್ದರು. ತಂಡದ ಅಗ್ರ ಸರದಿ ವೈಫಲ್ಯ ಅನುಭವಿಸಿದರೆ ಮಧ್ಯಮ ಸರದಿಯಲ್ಲಿ ಒತ್ತಡ ಕಂಡು ಬರುವುದು ಸಹಜ. ಈ ಕಾರಣದಿಂದಾಗಿ ಭಾರತಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಸಮರ್ಥ ಆಟಗಾರರನ್ನು ಆಯ್ಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ.
ವಿಜಯ್ ಕಳೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಚೆನ್ನಾಗಿ ಆಡಿ ಗಮನ ಸೆಳೆದಿದ್ದಾರೆ. ಆದರೆ ಧವನ್‌ರ ಪ್ರದರ್ಶನ ತಲೆನೋವು ತಂದಿದೆ. ಈ ಕಾರಣದಿಂದಾಗಿ ಅಜಿಂಕ್ಯ ರಹಾನೆ ಅಥವಾ ಕರ್ನಾಟಕದ ಯುವ ದಾಂಡಿಗ ಕೆ.ಎಲ್. ರಾಹುಲ್ ತಂಡದ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ರಾಹುಲ್‌ಗೆ ಅಭ್ಯಾಸ ಪಂದ್ಯಗಳಲ್ಲಿ ಅವಕಾಶ ನೀಡಲಾಗಿಲ್ಲ. ಈ ಕಾರಣದಿಂದಾಗಿ ಆಸ್ಟ್ರೇಲಿಯದ ಪಿಚ್‌ನಲ್ಲಿ ಅವರ ಬ್ಯಾಟಿಂಗ್ ಯಾವ ರೀತಿ ಇದೆ ಎಂಬ ವಿಚಾರ ಗೊತ್ತಾಗಿಲ್ಲ.
ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಅಂತಿಮ ಎರಡು ಟೆಸ್ಟ್‌ಗಳಿಗೆ ಧವನ್ ಬದಲಿಗೆ ಗೌತಮ್ ಗಂಭೀರ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ಎರಡೂ ಕೈಯಲ್ಲಿ ಬಾಚಿಕೊಳ್ಳುವ ಯತ್ನದಲ್ಲಿ ಗಂಭೀರ್ ಎಡವಿದರು. ಈ ಕಾರಣದಿಂದಾಗಿ ಆಸ್ಟ್ರೇಲಿಯ ಪ್ರವಾಸಕ್ಕೆ ಗಂಭೀರ್ ಟೆಸ್ಟ್ ತಂಡದಲ್ಲಿ ಅವಕಾಶ ಕಳೆದುಕೊಂಡರು.