ಜೋಗಿ ಪ್ರೇಮ್ ನಾಯಕನಾಗಿ ಅಭಿನಯಿಸಿ, ರಕ್ಷಿತಾ ಪ್ರೇಮ್ ನಿರ್ಮಾಣದ ‘ಡಿಕೆ’ ಚಿತ್ರತಂಡ ಮತ್ತೆ ಮಾಧ್ಯಮಗಳ ಮುಂದೆ ಬಂತು. ಈಗಾಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು. ಲಡಾಖ್ ಮುಂತಾದ ಕಡೆ 60 ದಿನಗಳ ಕಾಲ ಶೂಟಿಂಗ್ ಸಂಚಾರ ಮಾಡಿದೆ.
ಮೊದಲ ಚಿತ್ರದಿಂದ ಬಿಡುಗಡೆಯ ಮೋಕ್ಷ ಸಿಗದ ನಟಿ ಚೈತ್ರಾ ಈ ಚಿತ್ರದ ನಾಯಕಿ. ವಿಶೇಷ ಅಂದರೆ ಈ ಚಿತ್ರದಲ್ಲಿ ನಟ ಪ್ರೇಮ್ ಪುತ್ರ ಸೂರ್ಯ ಹಾಡೊಂದರಲ್ಲಿ ಸ್ಟೆಪ್ ಹಾಕಿರುವುದು. ಮೈ ಕೊರೆಯುವ ಚಳಿಯಲ್ಲಿ ಪ್ರೇಮ್ ಮತ್ತು ಚೈತ್ರಾ ಲಡಾಖ್ನಲ್ಲಿ ಕುಣಿದು ಬಂದಿರುವುದು ‘ಡಿಕೆ’ ಚಿತ್ರದ ಹೈಲೈಟ್.
ಅಂದಹಾಗೆ ಇದು ನಟಿ ರಕ್ಷಿತಾ ಹಾಗೂ ಪ್ರೇಮ್ ಅವರ ರಿಯಲ್ ಲೈಫ್ ಕಥೆಯಂತೆ. ಇವರ ನಿಜ ಜೀವನದ ಕಥೆಯನ್ನೇ ಸಿನಿಮಾ ಮಾಡಿದ್ದು, ಇಲ್ಲಿ ನಾಯಕಿ ಚೈತ್ರಾ ಅವರದ್ದು ರಕ್ಷಿತಾ ಅವರ ನಿಜ ಪಾತ್ರವನ್ನು ಮಾಡಿದ್ದಾರಂತೆ. ಹೀಗೆ ಹೇಳಿಕೊಂಡಿದ್ದು ನಿರ್ದೇಶಕ ಉದಯ್ ಪ್ರಕಾಶ್.
ಸಿನಿಮಾ ಶುರುವಾದಾಗಿನಿಂದಲೂ ಸಿನಿಮಾ ಬಗ್ಗೆ ಮಾತನಾಡುವುದಕ್ಕಿಂತ ಪ್ರಚಾರಕ್ಕಾಗಿ ಸಿನಿಮಾ ಕಥೆಯ ಹೊರತಾದ ವಿಚಾರಗಳನ್ನೇ ಹೇಳಿಕೊಂಡು ಬರುತ್ತಿರುವ ಉದಯ್ ಪ್ರಕಾಶ್, ಮೊನ್ನೆ ಮಾಧ್ಯಮಗಳ ಮುಂದೆಯೂ ಈ ರಿಯಲ್ ಸ್ಟೋರಿಯ ಕುರಿತು ರೀಲ್ ಬಿಟ್ಟರು.
ನಾವು ಅಂದುಕೊಂಡಂತೆ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ನಾಯಕಿ ಚೈತ್ರಾ, ರಕ್ಷಿತಾ ಅವರನ್ನು ಹೋಲುವ ಪಾತ್ರ ಮಾಡಿದ್ದಾರೆ. ಚೈತ್ರಾ ಅವರ ಪಾತ್ರದಲ್ಲಿ ರಕ್ಷಿತಾ ಅವರ ನಿಜ ಜೀವನದಲ್ಲಿ ಅಂಶಗಳು ಅಡಗಿವೆ.
ಲಡಾಖ್ ನಲ್ಲಿ ತುಂಬಾ ಚೆನ್ನಾಗಿ ಚಿತ್ರೀಕರಣ ಮಾಡಿದ್ದೇವೆ. ಜತೆಗೆ ಇಲ್ಲಿ ಶೂಟಿಂಗ್ ಮಾಡುವುದು ದೊಡ್ಡ ಸಾಹಸ. ಆದರೂ ಚಿತ್ರತಂಡ ಶ್ರಮ ಹಾಕಿದ್ದರಿಂದ ಚಿತ್ರೀಕರಣ ಚೆನ್ನಾಗಿ ನಡೆದಿದೆ ಎಂಬುದು ಉದಯ್ ಪ್ರಕಾಶ್ ಮಾತು.
ನಟಿ ಚೈತ್ರಾ ಅವರದ್ದು ಇಲ್ಲಿ ತುಂಬಾ ಗ್ಲಾಮರಸ್ ಕಂ ಆ್ಯಕ್ಟಿಂಗ್ ಓರಿಯೆಂಟೆಡ್ ಪಾತ್ರವಂತೆ. ಈ ಚಿತ್ರದ ಮೂಲಕ ನನಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಬರುತ್ತದೆ. ಯಾಕೆಂದರೆ ‘ಡಿಕೆ’ ಚಿತರವನ್ನು ಪ್ರೇಕ್ಷಕರು ಖಂಡಿತ ಮೆಚ್ಚಿಕೊಳ್ಳುತ್ತಾರೆಂಬ ನಂಬಿಕೆ ಇದೆ ಎಂಬುದು ಚೈತ್ರಾ ಅವರ ವಿಶ್ವಾಸ. ಇನ್ನೂ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಅರ್ಜುನ್ ಜನ್ಯ ಮತ್ತು ಪ್ರೇಮ್ ಅವರದ್ದು ಹಳೇ ಕಾಂಬಿನೇಷನ್. ‘ಪ್ರೇಮ್ ಹಾಡೂ ಮತ್ತು ಸಂಗೀತಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆಂದು ಗೊತ್ತು. ಹೀಗಾಗಿ ಅವರ ಅಭಿರುಚಿಗೆ ತಕ್ಕಂತೆ ಸಂಗೀತ ಸಂಯೋಜಿಸಿದ್ದೇನೆ’ ಎಂದರು ಅರ್ಜುನ್ ಜನ್ಯ.
ಜೋಗಿ ಪ್ರೇಮ್, ನಿರ್ದೇಶಕ ಉದಯ್ ಪ್ರಕಾಶ್ರ ಕೆಲಸವನ್ನು ಮೆಚ್ಚಿಕೊಂಡರು. ‘ಚಿತ್ರದ ಎಲ್ಲ ಭಾಗಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಮಾಸ್ಮಾದ ಅದ್ಭುತವಾದ ಸಾಹಸ ದೃಶ್ಯಗಳನ್ನು ಸಂಯೋಜನೆ ಮಾಡಿದ್ದಾರೆ.
ರೆಗ್ಯುಲರ್ ಅಲ್ಲದೆ ಫೈಟ್ಗಳನ್ನು ಸಂಯೋಜನೆ ಮಾಡಿದ್ದಾರೆ. ತುಂಬಾ ಚೆನ್ನಾಗಿ ಮೂಡಿಬಂದಿವೆ. ಅರ್ಜುನ್ ಜನ್ಯ ಒಳ್ಳೆಯ ಸಂಗೀತ ಕೊಟ್ಟಿದ್ದಾರೆ. ಇಲ್ಲಿವರೆಗೂ ನನ್ನ ಸಿನಿಮಾಗಳಿಗೆ ಸಂಗೀತ ನೀಡಿದ ಎಲ್ಲರೂ ಒಳ್ಳೆಯ ಹಾಡೂಗಳನ್ನು ಕೊಟ್ಟಿದ್ದಾರೆ. ಅರ್ಜುನ್ ಕೂಡ ಮತ್ತಷ್ಟು ಕೇಳುವಂಥ ಹಾಡುಗಳನ್ನು ಕೊಟ್ಟಿದ್ದಾರೆ’ ಎಂದರು ಪ್ರೇಮ್.
‘ಸಿನಿಮಾ ಅದ್ಧೂರಿಯಾಗಿ ಬಂದಿದೆ. ಯಾವುದಕ್ಕೂ ಕಡಿಮೆ ಮಾಡದಂತೆ ಈ ಸಿನಿಮಾ ಮಾಡಿದ್ದೇವೆ’ ಎಂದರು ರಕ್ಷಿತಾ. ಆನಂದ್ ಆಡಿಯೋ ಶ್ಯಾಮ್, ಸಂಕಲನಕಾರ ಮನೋಹರ್, ಛಾಯಾಗ್ರಾಹಕ ಆನಂದ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.