ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಕೆಲವು ಬಾರಿ ಸಿಟ್ಟಿಗೆದ್ದು ತಮ್ಮನ್ನು ತುಂಬಾ ಬೈಯುತ್ತಾರೆ. ಇದು ತಮಗೆ ಇಷ್ಟವಾಗುವುದಿಲ್ಲವೆಂದು ನಟಿ ಸೋನಾಕ್ಷಿ ಹೇಳಿದ್ದಾರಲ್ಲದೇ ಇದೊಂದನ್ನು ಬಿಟ್ಟರೆ ಸಲ್ಮಾನ್ ಖಾನ್ ನಿಜಕ್ಕೂ ಹೃದಯವಂತ ವ್ಯಕ್ತಿಯೆಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ಸೋನಾಕ್ಷಿ ಸಿನ್ಹಾ, ಸಲ್ಮಾನ್ ಖಾನ್ ಅವರ ‘ದಬಾಂಗ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ತಾವು ಪಾದಾರ್ಪಣೆ ಮಾಡಿದ್ದು, ನಟನೆಯಲ್ಲಿ ಸ್ವಲ್ಪ ಎಡವಿದರೂ ಸಲ್ಮಾನ್ ಖಾನ್ ಬೈಗುಳ ಗ್ಯಾರಂಟಿಯಾಗಿತ್ತು. ಇದರಿಂದ ತಾವು ಹಲವು ಬಾರಿ ಇರುಸುಮುರಿಸಿಗೊಳಗಾಗಿದ್ದಾಗಿ ತಿಳಿಸಿದ್ದಾರೆ.
ತಮಗೆ ಚಿತ್ರರಂಗದಲ್ಲಿ ಅತ್ಮೀಯರ ಸಂಖ್ಯೆ ಕಡಿಮೆಯಿರುವುದನ್ನು ಒಪ್ಪಿಕೊಂಡಿರುವ ಸೋನಾಕ್ಷಿ ಸಿನ್ಹಾ, ಹೊರಗಿನ ಗೆಳೆಯ, ಗೆಳತಿಯರು ತಮಗೆ ಜಾಸ್ತಿ ಇದ್ದು ಅದರೆ ಚಿತ್ರರಂಗದವರು ಸಿಕ್ಕಾಗ ಅತ್ಮೀಯತೆಯಿಂದಲೇ ಮಾತನಾಡುವುದಾಗಿ ಹೇಳಿದ್ದಾರೆ. ತಾವು ಯಾರನ್ನೂ ತಮ್ಮ ಪ್ರತಿಸ್ಪರ್ಧಿ ಎಂದು ಭಾವಿಸುವುದಿಲ್ಲ. ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯುತ್ತಾರೆ ಎಂದಿದ್ದಾರೆ.
ಶಾರೂಕ್ ಖಾನ್ ಮತ್ತು ಅಮೀರ್ ಖಾನ್ ಕುರಿತು ಕೇಳಿದ ಪ್ರಶ್ನೆಗೆ, ತಾವು ಅವರೊಂದಿಗೆ ನಟಿಸದ ಕಾರಣ ಅವರ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ತೆರೆಯ ಮೇಲೆ ಇಬ್ಬರೂ ಅದ್ಬುತ ನಟರೆಂದು ಹೊಗಳಿದ್ದಾರೆ.
ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ವಿವಾಹದ ಪಾರ್ಟಿ ಮುಂಬೈನಲ್ಲಿ ನಡೆದ ವೇಳೆ ಸಲ್ಮಾನ್ ಖಾನ್ ಸೋನಾಕ್ಷಿ ಸಿನ್ಹಾರನ್ನು ನಿಂದಿಸಿದ್ದ ಕಾರಣಕ್ಕೆ ಸೋನಾಕ್ಷಿ ಕಣ್ಣೀರಿಟ್ಟಿದ್ದರೆಂದು ವರದಿಯಾಗಿತ್ತು. ಆದರೆ ಸೋನಾಕ್ಷಿ ಇದನ್ನು ನಿರಾಕರಿಸಿದ್ದರು.