ತಾರಾಗಣ: ಒರಟ ಪ್ರಶಾಂತ್, ಶುಭಾ ಪೂಂಜಾ, ಅವಿನಾಶ್, ಓಂಪ್ರಕಾಶ್‌ರಾವ್, ನಿರ್ಮಾಣ: ಒರಟ ಪ್ರಶಾಂತ್, ನಿರ್ದೇಶನ: ಒರಟ ಪ್ರಶಾಂತ್, ಸಂಗೀತ: ಆರ್. ಶಂಕರ್, ಕ್ಯಾಮೆರಾ: ಸಿನಿಟೆಕ್ ಸೂರಿ, ರೇಟಿಂಗ್: * 1/2
ಪಾತಕ ಲೋಕಕ್ಕೆ ಸೆಡ್ಡು ಹೊಡೆಯುವ ‘ಒರಟ’ನೊಬ್ಬನ ಕತೆಯುಳ್ಳ ಸಾದಾಸೀದಾ ಸಿನಿಮಾ ‘ಚಿರಾಯು’. ಇಂಟರ್‌ವಲ್‌ಗೆ ಮುನ್ನ ರೌಡಿಯ ಕತೆ, ಇಂಟರ್‌ವಲ್ ನಂತರ ರೌಡಿ ಯಾಕಾದ ಎಂಬ ಕತೆ. ಜೊತೆಗೊಂದಿಷ್ಟು ಮಸಾಲೆ, ಹಾಡು, ಸಿಕ್ಕಾಪಟ್ಟೆ ಫೈಟ್‌ಗಳಿವೆ. ಚಿತ್ರದಲ್ಲಿ ಹಾಸ್ಯ ಲಾಸ್ಯಕ್ಕೆ ಬರಗಾಲ. ಚಿತ್ರದ ನಾಯಕ ಒರಟ ಪ್ರಶಾಂತ್. ನಿರ್ಮಾಣ, ನಿರ್ದೇಶನ, ಕತೆ, ಚಿತ್ರಕತೆ, ಸಂಭಾಷಣೆಯೂ ಅವರದ್ದೇ. ಮಾಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿದ ಚಿತ್ರವಾದರೂ ಇಲ್ಲಿ ಎಲ್ಲವೂ ಹದವಾದ ಪ್ರಮಾಣದಲ್ಲಿಲ್ಲ.
ಚಿತ್ರದೊಳಗಿನ ಚಿತ್ರ ನಿರ್ದೇಶಕನೊಬ್ಬ (ಓಂಪ್ರಕಾಶ್ ರಾವ್) ತನ್ನ ಮುಂದಿನ ಚಿತ್ರಕ್ಕಾಗಿ ರಿಯಲಿಸ್ಟಿಕ್ ಕತೆಯೊಂದನ್ನು ಹುಡುಕುತ್ತಿರುತ್ತಾನೆ. ಆತನ ಕೈಗೆ ‘ಚಿರಾಯು’ ಸ್ಕ್ರಿಪ್ಟ್ ಸಿಗುತ್ತದೆ. ಅದರಲ್ಲಿ ರೌಡಿಯೊಬ್ಬ ತನ್ನ ನೈಜ ಬದುಕಿನ ಬಗ್ಗೆ ಬರೆದಿರುತ್ತಾನೆ. ವಿಶ್ವ ಆಮಿತ್ರನ ತಪಸ್ಸು ಕೆಡಿಸಲು ಬರುವ ಮೇನಕೆಯಂತೆ ನಾಯಕನನ್ನು ಮಣಿಸಿ ಮುಗಿಸಲು ನಾಯಕಿ(ಶುಭಾ)ಯನ್ನು ವಿಲನ್ ಕಳುಹಿಸಿದ ಕತೆ ಅದಾಗಿರುತ್ತದೆ. ನಾಯಕ ನಾಯಕಿಯ ನಡುವಿನ ಲವ್ವಿಡವ್ವಿ ಶುರುವಾಗುತ್ತದೆ. ನಾಯಕಿ ನಾಯಕನಿಗೆ ಗುಂಡು ಹೊಡೆಯುತ್ತಾಳೆ. ನಾಯಕಿಗೆ ಅಪರಿಚಿತ ವ್ಯಕ್ತಿ ಗುಂಡು ಹೊಡೆಯುತ್ತಾನೆ. ಸ್ಕ್ರಿಪ್ಟ್‌ನಲ್ಲಿ ಇಷ್ಟೇ ಕತೆ ಇರುತ್ತದೆ. ಕತೆಯ ಮುಂದಿನ ಭಾಗಕ್ಕಾಗಿ ನಾಯಕನನ್ನು ಭೇಟಿಯಾಗುತ್ತಾರೆ.
ಹೊಡೆದಾಟದ ದೃಶ್ಯಗಳಲ್ಲಿ ಪ್ರಶಾಂತ್ ನಟನೆ ಪರವಾಗಿಲ್ಲ. ನಾಯಕಿ ಶುಭಾ ಪೂಂಜಾ ಅವರ ಸಹಜ ಮುಗ್ಧ ನಟನೆ ಮಾಯವಾಗಿದ್ದು, ಎಕ್ಸ್‌ಪೋಸಿಂಗ್‌ಗೆ ಸೀಮಿತಗೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಅವಿನಾಶ್ ಗಮನ ಸೆಳೆಯುತ್ತಾರೆ. ಅವರ ದೊಡ್ಡ ಮೀಸೆ, ಗತ್ತು, ಠೀವಿ ಗಮನ ಸೆಳೆಯುತ್ತದೆ. ಹೆಚ್ಚು ಮಾತನಾಡುವ ಓಂ ಪ್ರಕಾಶ್ ರಾವ್ ಪಾತ್ರವು ಚಿತ್ರದ ಸಹಜ ಓಘಕ್ಕೆ ಅಡ್ಡ ಬರುತ್ತದೆ. ಹಾಡುಗಳ ಸಾಹಿತ್ಯ ಉತ್ತಮ ವಾಗಿದ್ದರೂ ಕಿವಿಯಲ್ಲಿ ಗುಂಗಿಡಿಸದು. ಕ್ಯಾಮೆರಾ ಕೌಶಲ ಕಣ್ಣಿಗೆ ಬೀಳುವುದಿಲ್ಲ. ಚಿತ್ರದಲ್ಲಿ ಹುಡುಕಿದರೂ ತುಣುಕು ಹಾಸ್ಯ ದೃಶ್ಯವೂ ಕಾಣಸಿಗದು. ಸಂಭಾಷಣೆಗಳೂ ನಾಟಕೀಯ ಎನಿಸುತ್ತದೆ. ಪ್ರೇಕ್ಷಕನನ್ನು ಹಿಡಿದಿಟ್ಟುಕೊಂಡು ನೋಡಿಸುವಲ್ಲಿ ಚಿತ್ರ ಸೋಲುತ್ತದೆ.