ಮನೋರಂಜನೆ

ಕಮ್ಟಿ ಮಿಠಾಯಿ ಹಬ್ಬದ ಸಂಭ್ರಮ: ಸ್ಯಾಂಡಲ್‌ವುಡ್‌ ನಟ-ನಟಿಯರ ವಿಶೇಷ ಸಿದ್ಧತೆ

Pinterest LinkedIn Tumblr

Radhika

ಡಿಸೆಂಬರ್ 25 ಸಮೀಪಿಸುತ್ತಿದ್ದಂತೆಯೇ ಎಲ್ಲೆಲ್ಲೂ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡುತ್ತದೆ. ಕ್ರಿಸ್‌ಕೇಕ್ ತಯಾರಿಗೆ ಭರ್ಜರಿ ಸಿದ್ಧತೆಗಳೇ ನಡೆಯುತ್ತವೆ. ಕ್ರಿಸ್‌ಮಸ್ ಟ್ರಿ ಸಿಂಗಾರಗೊಳ್ಳುತ್ತದೆ. ಹೀಗಾಗಿ ಪ್ರತಿ ಕ್ರಿಸ್‌ಮಸ್‌ಗೂ ಸ್ಯಾಂಡಲ್‌ವುಡ್‌ನ ಸಾಕಷ್ಟು ನಟ ನಟಿಯರು ವಿಶೇಷವಾಗಿ ಸಿದ್ಧತೆಗೊಳ್ಳುತ್ತಾರೆ. ಈ ಕುರಿತು ಲವಲವಿಕೆಯ ಜತೆ ಅವರು ಮಾತಾಡಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ನಟಿ ರಾಧಿಕಾ ಪಂಡಿತ್ ಕ್ರಿಸ್‌ಮಸ್‌ಗಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರ ನಟನೆಯ ಸಿನಿಮಾ ಕೂಡ ಕ್ರಿಸ್‌ಮಸ್ ದಿನದಂದೇ ಬಿಡುಗಡೆ ಆಗುತ್ತಿದೆ. ಹೀಗಾಗಿ ಡಬ್ಬಲ್ ಖುಷಿಯಲ್ಲಿದ್ದಾರೆ ರಾಧಿಕಾ.

‘ನಾನು ಪ್ರೈಮರಿ ಸ್ಕೂಲ್‌ನಿಂದಲೂ ಕ್ರೈಸ್ತ್ ಮಷಿನರಿಯಲ್ಲಿ ಓದಿದವಳು. ಶಾಲಾ ದಿನಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಡಗರದಿಂದಲೇ ಆಚರಣೆ ಮಾಡುತ್ತಾ ಬಂದಿದ್ದರಿಂದ, ಈಗಲೂ ಅದನ್ನು ಮರೆಯೋಕೆ ಆಗಲ್ಲ. ಸ್ಕೂಲ್ ದಿನದಲ್ಲಿ ಕೃತಕ ಕ್ರಿಸ್‌ಮಸ್ ಟ್ರಿ ತಂದು ಕೊಡಲು ಅಪ್ಪನಿಗೆ ಹೇಳಿದ್ದೆ. ಅವರು ನಿಜವಾದ ಮರವನ್ನೇ ತಂದುಕೊಟ್ಟರು. ಆಗ ಅದು ಪುಟ್ಟದಿತ್ತು. ಈಗ ದೊಡ್ಡದಾಗಿದೆ. ಪ್ರತಿ ಬಾರಿಯೂ ಅದನ್ನು ನಾನು ಸಿಂಗರಿಸುತ್ತೇನೆ. ಈ ವರ್ಷವೂ ಮರವನ್ನು ಸಿಂಗರಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ. ಅಲ್ಲದೇ ಕೇಕ್ ಕೂಡ ತಯಾರಿ ಮಾಡುತ್ತೇನೆ. ನಮ್ಮ ಹಬ್ಬಗಳಂತೆಯೇ ಕ್ರಿಸ್‌ಮಸ್ ಕೂಡ ನಮ್ಮ ಮನೆಯ ಹಬ್ಬವೇ ಆಗಿದೆ’ ಅಂತಾರೆ ರಾಧಿಕಾ ಪಂಡಿತ್.

ಕ್ರಿಸ್‌ಮಸ್ ಅಂದಾಕ್ಷಣ ನಟ ನೆನಪಿರಲಿ ಪ್ರೇಮ್‌ಗೆ ನೆನಪಾಗುವುದು ಕಮ್ಟಿ ಮಿಠಾಯಿ. ಬಾಲ್ಯದಿಂದಲೂ ಕ್ರಿಸ್‌ಮಸ್ ಹಬ್ಬವನ್ನು ನೋಡುತ್ತಾ ಬೆಳೆದಿರುವ ಇವರು, ಈಗಲೂ ಕ್ರಿಸ್‌ಮಸ್ ದಿನದಂದು ಮಕ್ಕಳನ್ನು ಚರ್ಚ್‌ಗೆ ಕರೆದುಕೊಂಡು ಹೋಗುತ್ತಾರೆ. ಕೇಕ್ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಕಮ್ಟಿ ಮಿಠಾಯಿಯನ್ನು ತಮ್ಮ ಮಕ್ಕಳಿಗೆ ಪರಿಚಯಿಸುತ್ತಾರೆ. ಅಲ್ಲದೇ ಕೇಕ್ ಕೂಡ ಮನೆಯಲ್ಲಿ ತಯಾರಿಸುತ್ತಾರೆ.

‘ಈ ಬಾರಿ ಕ್ರಿಸ್‌ಮಸ್ ಹಬ್ಬವನ್ನು ಶೂಟಿಂಗ್‌ನಲ್ಲಿ ಮಾಡುತ್ತಿದ್ದೇನೆ. ಮೊಹಬ್ಬತ್ ಸಿನಿಮಾ ಶೂಟಿಂಗ್‌ಗಾಗಿ ನಾನು ಕೊಳ್ಳೆಗಾಲದಲ್ಲಿ ಇದ್ದೇನೆ. ಈ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಹೈದ್ರಾಬಾದ್‌ಗೆ ತೆರಳಬೇಕು. ಹೀಗಾಗಿ ಚರ್ಚ್‌ಗೆ ಹೋಗಲು ಆಗುತ್ತಿಲ್ಲ. ಕೆಲಸದ ಮೂಲಕ ಹಬ್ಬ ಆಚರಿಸುತ್ತಿದ್ದೇನೆ’ ಅಂದರು ಪ್ರೇಮ್.

ನಟಿಯರಾದ ರಾಗಿಣಿ, ಸಂಜನಾ, ಶ್ವೇತಾ ಶ್ರೀವಾತ್ಸವ್, ಹರ್ಷಿಕಾ ಪೂಣಚ್ಚ ಮೊದಲಾದ ನಟಿಯರು ಅಭಿಮಾನಿಗಳಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ ಎಂದು ಹಾರೈಸಿದ್ದಾರೆ.

Write A Comment