ಮೆಲ್ಬೋರ್ನ್, ಡಿ.28: ‘‘ಆಸ್ಟ್ರೇಲಿಯ ಆಟಗಾರರು ಮೈದಾನದೊಳಗೆ ನನ್ನನ್ನು ಕೆಣಕಿದ್ದಲ್ಲದೆ ಬೆದರಿಸಲು ಯತ್ನಿಸಿದ್ದರು.ಅವರ ಈ ವರ್ತನೆ ನಾನು ಜೀವನ ಶ್ರೇಷ್ಠ ಇನಿಂಗ್ಸನ್ನು ದಾಖಲಿಸಲು ನೆರವಾಯಿತು’’ ಎಂದು ಭಾರತದ ಉಪ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಮೂರನೆ ಟೆಸ್ಟ್‌ನ ಮೂರನೆ ದಿನದಾಟವಾದ ರವಿವಾರ ಕೊಹ್ಲಿ ಹಾಗೂ ಆಸ್ಟ್ರೇಲಿಯದ ವೇಗದ ಬೌಲರ್ ಜಾನ್ಸನ್ ನಡುವೆ ಮೈದಾನದೊಳಗೆ ವಾಗ್ವಾದ ನಡೆದಿತ್ತು. ‘‘ಆಸ್ಟ್ರೇಲಿಯದ ಆಟಗಾರರು ಅದರಲ್ಲೂ ಮುಖ್ಯವಾಗಿ ಜಾನ್ಸನ್ ದಿನದಾಟದ್ದುದ್ದಕ್ಕೂ ನನ್ನನ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ಕೆಣಕುತ್ತಿದ್ದರು. ಆಟಗಾರರು ನನ್ನನ್ನು ದ್ವೇಷಿಸಿದರೆ ಅದು ನನಗೆ ಇಷ್ಟವಾಗುತ್ತದೆ. ನನಗೆ ಆಸ್ಟ್ರೇಲಿಯದ ವಿರುದ್ಧ ಆಡಲು ಇಷ್ಟವಾಗುತ್ತದೆ. ಆ ತಂಡದ ವಿರುದ್ಧ ಶಾಂತಚಿತ್ತದಿಂದ ಆಡುವುದು ತುಂಬಾ ಕಷ್ಟ. ಅವರು ನನ್ನನ್ನು ಕೆಣಕಿದರೆ ಅದರಿಂದ ನನಗೆ ಲಾಭವಾಗುತ್ತದೆ. ಕಹಿ ಘಟನೆಗಳಿಂದ ಆಸ್ಟ್ರೇಲಿಯನ್ನರು ಪಾಠ ಕಲಿತಂತೆ ಕಾಣುತ್ತಿಲ್ಲ’’ ಎಂದು ಕೊಹ್ಲಿ ಹೇಳಿದ್ದಾರೆ.
ರವಿವಾರ ಪಂದ್ಯದಲ್ಲಿ ಕೊಹ್ಲಿಯನ್ನು ರನೌಟ್ ಮಾಡಲು ಜಾನ್ಸನ್ ಚೆಂಡನ್ನು ಎಸೆದರು. ಚೆಂಡು ಸ್ಪಂಟ್ ಬದಲಿಗೆ ಕೊಹ್ಲಿ ಬೆನ್ನಿಗೆ ತಾಗಿತು. ಜಾನ್ಸನ್ ತಕ್ಷಣವೇ ಕ್ಷಮೆಯಾಚಿಸಿದ್ದರು. ಆದರೆ, ಇಬ್ಬರ ನಡುವೆ ಇದೇ ವಿಷಯಕ್ಕೆ ಸಂಬಂಧಿಸಿ ಜಗಳವಾಯಿತು. ಆಗ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು.