ತಾರಾ ವರ್ಚಸ್ಸಿನ ನಟರ ಚಿತ್ರ ಬಿಡುಗಡೆಯಾದಾಗ ಪ್ರೇಕ್ಷಕರು ಚಿತ್ರಮಂದಿರಕ್ಕೆ ಧಾವಿಸುವುದು, ನೂಕುನುಗ್ಗಲು ಆಗುವುದೇನೋ ಸರಿ. ಆದರೆ ಹೊಸ ತಂಡದವರ ಹೊಸ ಚಿತ್ರದ ಗೀತೆಗಳ ಆಡಿಯೊ ಸೀಡಿ ಬಿಡುಗಡೆ ಸಮಾರಂಭಕ್ಕೂ ಈ ರೀತಿಯೇ ಅಗುವುದೆಂದರೆ! ಅದು ತ್ರಿಭುವನ್ ಚಿತ್ರಮಂದಿರದಲ್ಲಿ ನಡೆದ ‘ಹಾಫ್ ಮೆಂಟ್ಲು’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಈ ಕಾರ್ಯಕ್ರಮಕ್ಕೆ ಕೂಡ ಚಿತ್ರಮಂದಿರ ‘ಹೌಸ್‌ಫುಲ್’.
ಸಮಾರಂಭದ ಮತ್ತೊಂದು ವಿಶೇಷವೆಂದರೆ ಮಂಗಳಮುಖಿಯರ ಅಮೃತಹಸ್ತದಿಂದ ಹಾಡುಗಳ ಸೀಡಿ ಅನಾವರಣ ಮಾಡಿಸಿದ್ದು. ‘ಸಿಂಪಲ್ಲಾಗೊಂದ್ ಲವ್ ಸ್ಟೋರಿ’ ಖ್ಯಾತಿಯ ಬಿ.ಜೆ.ಭರತ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ.
ಶಶಿಕುಮಾರ್ ಅವರು ನಿರ್ಮಾಣ ಮಾಡುತ್ತಿರುವ ‘ಹಾಫ್ ಮೆಂಟ್ಲು’ಗೆ ಲಕ್ಷ್ಮೀ ದಿನೇಶ್ ಅವರ ನಿರ್ದೇಶನವಿದೆ. ಗೀತ ಸಾಹಿತ್ಯ ರಚನೆಯ ಹೊಣೆಯನ್ನೂ ಅವರು ನಿಭಾಯಿಸಿದ್ದಾರೆ. ಅವರಿಗಿದು ಮೊದಲ ನಿರ್ದೇಶನದ ಅನುಭವ. ‘ನಾನು ಚಿತ್ರ ನಿರ್ಮಾಣ ಮಾಡಿದರೆ ನಿಮ್ಮನ್ನೇ ನಿರ್ದೇಶಕರನ್ನಾಗಿ ಮಾಡುತ್ತೇನೆ’ ಎಂದು ಒಂಬತ್ತು ವರ್ಷಗಳ ಹಿಂದೆ ಲಕ್ಷ್ಮೀದಿನೇಶ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ನಿರ್ಮಾಪಕ ಶಶಿಕುಮಾರ್.
ಮುಖ್ಯ ಪಾತ್ರದಲ್ಲಿ ಸಂದೀಪ್, ಸೋನು ಗೌಡ, ಐಶ್ವರ್ಯ ಕಾಣಿಸಿಕೊಂಡಿದ್ದಾರೆ. ಅಚ್ಯುತ್‌ಕುಮಾರ್, ಮಿತ್ರ, ತಬಲಾ ನಾಣಿ, ಪೋಷಕ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ಹಾಸ್ಯದ ಹೊನಲು ಹರಿಸುವಂತೆ ಸಮಾರಂಭದಲ್ಲೂ ನಾಣಿ ಮತ್ತು ಮಿತ್ರರ ಜೋಡಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ಹಾಡುಗಳ ಜೊತೆಗೆ ಟ್ರೇಲರನ್ನು ಕೂಡ ಪ್ರೇಕ್ಷಕರು ಕಣ್ತುಂಬಿಕೊಂಡರು. ಚಿತ್ರಮಂದಿರವು ಪ್ರೇಕ್ಷಕರಿಂದ ಭರ್ತಿಯಾದಂತೆ ಸಿನಿಮಾ ಕಲಾವಿದರು, ಗಣ್ಯರು, ತಂತ್ರಜ್ಞರಿಂದಲೂ ವೇದಿಕೆ ತುಂಬಿತುಳುಕುತ್ತಿತ್ತು. ಎಸ್.ಕೆ. ಭಗವಾನ್, ವಿ. ಮನೋಹರ್, ಲಹರಿ ವೇಲು, ಪವನ್ ಒಡೆಯರ್, ಅಜೇಯ್ ರಾವ್ ಮುಂತಾದವರು ಅಲ್ಲಿದ್ದರು.