ತಿರುವನಂತಪುರ: ಈಜುಕೊಳದಲ್ಲಿ ಕರ್ನಾಟಕದ ಪ್ರಾಬಲ್ಯ ಮುಂದುವರಿದಿದೆ. ಭರವಸೆಯ ಈಜುಗಾರ್ತಿ ದಾಮಿನಿ ಕೆ. ಗೌಡ ಇಲ್ಲಿ ನಡೆಯುತ್ತಿರುವ 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಬುಧವಾರ ನಡೆದ ಮಹಿಳೆಯರ 200ಮೀ. ಬಟರ್ ಫ್ಲೈ ಸ್ಪರ್ಧೆಯಲ್ಲಿ ದಾಮಿನಿ ಎರಡು ನಿಮಿಷ 22.35 ಸಕೆಂಡ್‌ಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದರು. ಮಧ್ಯ ಪ್ರದೇಶ ರಾಜ್ಯವನ್ನು ಪ್ರತಿನಿಧಿಸುವ ರಿಚಾ ಮಿಶ್ರಾ (ಕಾಲ: 2:21.66ಸೆ.) ಚಿನ್ನ ಜಯಿಸಿ ಹಿಂದಿನ ಸಾಧನೆಯನ್ನು ಉತ್ತಮಪಡಿಸಿಕೊಂಡರು. ರಿಚಾ 2002ರಲ್ಲಿ 2 ನಿಮಿಷ 23.95 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಈ ವಿಭಾಗದ ಕಂಚು ತಮಿಳುನಾಡಿನ ಶೆರ್ಲಿನ್ (ಕಾಲ: 2:25.73ಸೆ.) ಪಾಲಾಯಿತು.
ಚಿನ್ನ ಗೆದ್ದ ಜೋಷ್ನಾ: ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ಕ್ವಾಷ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ತಮಿಳುನಾಡಿನ ಜೋಷ್ನಾ ಚಿಣ್ಣಪ್ಪ ಇಲ್ಲಿ ನಿರೀಕ್ಷೆಯಂತೆಯೇ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಫೈನಲ್‌ನಲ್ಲಿ ಜೋಷ್ನಾ 11–5, 11–8, 11–4ರಲ್ಲಿ ತಮ್ಮದೇ ರಾಜ್ಯದ ಆರ್. ಲಕ್ಷ್ಯಾ ಎದುರು ಗೆದ್ದರು.
ಸ್ಕ್ವಾಷ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ತಮಿಳುನಾಡು ತಂಡ ಪೂರ್ಣ ಪ್ರಾಬಲ್ಯ ಮೆರೆಯಿತು. ಇಂಚೆನ್ ಏಷ್ಯನ್ ಕೂಟದ ತಂಡ ವಿಭಾಗದಲ್ಲಿ ಸ್ವರ್ಣ ಸಾಧನೆ ತೋರಿದ್ದ ಸೌರವ್ ಘೋಷಾಲ್ ರಾಷ್ಟ್ರೀಯ ಕೂಟದಲ್ಲಿ ಚಿನ್ನ ಗೆದ್ದರು. ಹರಿಪಾಲ್ ಸಿಂಗ್ ಸಂಧು ಬೆಳ್ಳಿ ಗೆದ್ದರೆ, ದೀಕ್ಷಿತ್ ರವಿ ಕಂಚು ತಮ್ಮದಾಗಿಸಿಕೊಂಡರು.
ಅಗ್ರಸ್ಥಾನದಲ್ಲಿ ಹರಿಯಾಣ: ಎರಡು ಬಾರಿ ಸಮಗ್ರ ಪ್ರಶಸ್ತಿ ಪಡೆದಿರುವ ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ ಸ್ಪರ್ಧಿಗಳನ್ನು ಹಿಂದಿಕ್ಕಿರುವ ಹರಿಯಾಣ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.
ಹರಿಯಾಣದ ಪೈಲ್ವಾನರು ಕುಸ್ತಿ ಸ್ಪರ್ಧೆಯಲ್ಲಿ ಪ್ರಾಬಲ್ಯ ಮೆರೆದರು. ಇದರಲ್ಲಿ ಹರಿಯಾಣಕ್ಕೆ ಒಟ್ಟು 18 ಚಿನ್ನದ ಪದಕಗಳು ಲಭಿಸಿದವು. ಈ ರಾಜ್ಯ 21 ಚಿನ್ನ, ಎಂಟು ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಜಯಿಸಿದೆ.
ಹರಿಯಾಣದ ರಾಜೇಂದ್ರ ಕುಮಾರ್ 59 ಕೆ.ಜಿ. ವಿಭಾಗದ ಗ್ರೀಕೊ ರೋಮನ್ ವಿಭಾಗದ ಹಣಾಹಣಿಯಲ್ಲಿ ದೆಹಲಿಯ ರವೀಂದರ್ ಅವರನ್ನು ಮಣಿಸಿದರು. 70 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನ ಫೈನಲ್‌ನಲ್ಲಿ ಅಮಿತ್ ದಿನಕರ್ ಎಸ್‌ಎಸ್‌ಸಿಬಿಯ ಅರುಣ್ ಎದುರು ಗೆದ್ದರು. ಯೋಗೇಶ್ (80 ಕೆ.ಜಿ.). ಎಸ್. ಅನಿತಾ (63 ಕೆ.ಜಿ. ಫ್ರೀಸ್ಟೈಲ್) ಮತ್ತು ಪ್ರಿಯಾಂಕಾ (53 ಕೆ.ಜಿ. ಫ್ರೀಸ್ಟೈಲ್) ಚಿನ್ನದ ನಗು ಬೀರಿದರು.
ಸತತ ಮೂರನೇ ಬಾರಿಗೆ ಸಮಗ್ರ ಪ್ರಶಸ್ತಿ ಗೆಲ್ಲುವ ಆಸೆ ಹೊಂದಿರುವ ಎಸ್‌ಎಸ್‌ಸಿಬಿ 21 ಚಿನ್ನ ಸೇರಿದಂತೆ ಒಟ್ಟು 35 ಪದಕ ಗೆದ್ದು ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ 45 ಪದಕಗಳಿಂದ ಮೂರನೇ ಸ್ಥಾನ ಹೊಂದಿದೆ.
ಸಾಜನ್ ಕೂಟ ದಾಖಲೆ: ಪುರುಷರ 200ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು ಎರಡು ನಿಮಿಷ 69 ಸಕೆಂಡ್‌ಗಳಲ್ಲಿ ಗುರಿ ಮುಟ್ಟಿ 1997ರಲ್ಲಿ ಕೇರಳದ ಕೆ. ಸುರೇಶ್ (ಕಾಲ: 2:06.88ಸೆ.) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
ಪಶ್ಚಿಮ ಬಂಗಾಳದ ಸುಪ್ರಿಯಾ ಮಂಡಲ್ (ಕಾಲ: 2:00.80ಸೆ.) ಬೆಳ್ಳಿ ಜಯಿಸಿದರೆ, ಮಧ್ಯಪ್ರದೇಶವನ್ನು ಪ್ರತಿನಿಧಿಸುವ ಆ್ಯರನ್ ಡಿಸೋಜಾ ಕಂಚಿಗೆ ತೃಪ್ತಿಪಟ್ಟರು. ಡಿಸೋಜಾ ಎರಡು ನಿಮಿಷ 03.89ಸೆ. ಗಳಲ್ಲಿ ಗುರಿ ತಲುಪಿದರು.
ವಿಜಯ್ ನಿಖರ ಗುರಿ: ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಶೂಟರ್ ವಿಜಯ್ ಕುಮಾರ್ ಮೂರನೇ ಚಿನ್ನದ ಪದಕ ಗೆದ್ದರು.
ವಿಜಯ್, ಗುರುಪ್ರೀತ್ ಸಿಂಗ್ ಮತ್ತು ಓಂಕಾರ್ ಸಿಂಗ್ ಅವರ ತಂಡ 25ಮೀ. ಪುರುಷರ ಸ್ಟಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಸ್ವರ್ಣ ಸಾಧನೆ ತೋರಿತು. ಇಂಚೆನ್ ಏಷ್ಯನ್ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ವಿಜಯ್ ಮಂಗಳವಾರ ಎರಡು ಚಿನ್ನ ಪಡೆದಿದ್ದರು. 25ಮೀ. ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯ ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಪದಕ ಲಭಿಸಿದ್ದವು.
ದಾಖಲೆ ಪತನ: ಮಹಿಳೆಯರ ಈಜು ಸ್ಪರ್ಧೆಯ 4X200ಮೀ. ವಿಭಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ನಿರ್ಮಿಸಿದ್ದ ದಾಖಲೆ ಬುಧವಾರ ಅಳಿಸಿ ಹೋಯಿತು. ಮಹಾರಾಷ್ಟ್ರದ ಈಜುಪಟುಗಳು 8 ನಿಮಿಷ 54.73ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. 9:04. 68. ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ಕರ್ನಾಟಕದ ಹಿಂದಿನ ದಾಖಲೆಯಾಗಿತ್ತು.
10ನೇ ಸ್ಥಾನದಲ್ಲಿ ಕರ್ನಾಟಕ
ಎರಡು ಚಿನ್ನ ಸೇರಿದಂತೆ ಒಟ್ಟು 16 ಪದಕಗಳನ್ನು ಗೆದ್ದಿರುವ ಕರ್ನಾಟಕ ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ತಲಾ ಏಳು ಬೆಳ್ಳಿ ಮತ್ತು ಕಂಚುಗಳನ್ನು ಜಯಿಸಿದೆ.