‘ಮಳೆ’ ಸಿನಿಮಾದ ಹಾಡುಗಳ ಆಡಿಯೊ ಬಿಡುಗಡೆ ಸಮಾರಂಭಕ್ಕೆ ಗ್ಲಾಮರ್ ಕಳೆ ಬಂದಿತ್ತು. ಅಂದು ನಿರ್ಮಾಪಕ ಆರ್.ಚಂದ್ರು ಅವರ ಜನ್ಮ ದಿನವೂ ಆಗಿದ್ದರಿಂದ, ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕುಟುಂಬ ವರ್ಗ, ಸ್ನೇಹಿತರು, ಅಭಿಮಾನಿಗಳ ಪ್ರೀತಿಯ ಮಳೆಯಲ್ಲಿ ಚಂದ್ರು ತೋಯ್ದು ಹೋದರು!
ಸಿಡಿ ಬಿಡುಗಡೆಯನ್ನು ಹಾಸನದಲ್ಲಿ ಭರ್ಜರಿಯಾಗಿ ಮಾಡುವ ಯೋಚನೆಯಿತ್ತು. ಆದರೆ ಅದಕ್ಕೂ ಮುನ್ನ ಇಂಟರ್‌ನೆಟ್‌ನಲ್ಲಿ ಹಾಡುಗಳು ‘ಪ್ರತ್ಯಕ್ಷ’ವಾದುದರಿಂದ, ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಅದ್ಧೂರಿಗೇನೂ ಕೊರತೆ ಇರಲಿಲ್ಲ.
‘ಮಳೆ ಅಂದರೆ ಅಭಿವೃದ್ಧಿಯ ಸಂಕೇತ. ಎಲ್ಲರಿಗೂ ಅದು ಖುಷಿ ತರುವಂಥದು. ನನ್ನ ಹಾಗೂ ನಾಯಕಿಯ ಪಾತ್ರ ಕೂಡ ಎಲ್ಲರ ಬದುಕಿನಲ್ಲಿ ಸಂಸತ ಮೂಡಿಸುವಂತಿರುತ್ತವೆ’ ಎಂದು ನಾಯಕ ಪ್ರೇಮ್ ಪಾತ್ರದ ಬಗ್ಗೆ ವಿವರ ಹಂಚಿಕೊಂಡರು.
ನಿರ್ದೇಶಕ ತೇಜಸ್ ಅವರ ಬದ್ಧತೆ ಹಾಗೂ ಶ್ರದ್ಧೆ ಪ್ರೇಮ್ ಅವರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ‘ಸಾಕಷ್ಟು ಕಷ್ಟಪಟ್ಟು ತೇಜಸ್ ಇಷ್ಟಪಟ್ಟು ಮಾಡಿದ ಸಿನಿಮಾ ಪ್ರೀತಿಯ ಮಳೆ ಸುರಿಸಲಿದೆ’ ಎಂದರು. ಈ ಮಳೆಯಿಂದ ನಿರ್ಮಾಪಕರಿಗೆ ಹಣದ ಸುರಿಮಳೆಯಾಗಲಿ ಎಂದು ನಾಯಕಿ ಅಮೂಲ್ಯ ಆಶಿಸಿದರು.
ಅಭಿಮಾನಿಗಳ ಮಳೆಯಲ್ಲಿ ನೆನೆದ ಚಂದ್ರು, ತಮ್ಮ ಬದುಕಿನ ಹಿನ್ನೆಲೆಯನ್ನು ಚುಟುಕಾಗಿ ಹಂಚಿಕೊಂಡರು. ಪಿಯುಸಿಯಲ್ಲಿ ಫೇಲ್ ಆಗಿದ್ದು, ಅಲ್ಲಿಂದ ಬೆಂಗಳೂರಿಗೆ ಬಂದು ನೆಲೆ ಕಂಡುಕೊಂಡಿದ್ದು, ಈಗ ತೆಲುಗಿಗೆ ಹಾರಿದ ವಿವರಗಳ ಜತೆಗೆ ಜತೆಗೆ ಮತ್ತೆ ಮತ್ತೆ ಕನ್ನಡ ಸಿನಿಮಾ ಮಾಡುವ ಆಸೆಯನ್ನೂ ತೆರೆದಿಟ್ಟರು.
ಸಂಗೀತ ಹೊಸೆದ ಜೆಸ್ಸಿ ಗಿಫ್ಟ್, ಕ್ಯಾಮೆರಾ ಹಿಡಿದ ಸುಜ್ಞಾನ್, ಕಾರ್ಯಕಾರಿ ನಿರ್ಮಾಪಕ ಮುನೀಂದ್ರ, ಡಿಸೈನರ್ ಮಣಿ, ಸಂಕಲನಕಾರ ಕೆ.ಎಂ.ಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದ ಮಧ್ಯೆ ನಾಲ್ಕು ಹಾಡುಗಳನ್ನು ಪ್ರದರ್ಶಿಸಲಾಯಿತು.
ರೇನ್‌ಕೋಟ್ ಹಾಕಿಕೊಂಡು ಯತಿರಾಜ್ ಮಾಡಿದ ನಿರೂಪಣೆ ಹಾಗೂ ಹಿನ್ನೆಲೆಯಲ್ಲಿ ಹನಿಗಳ ಸದ್ದು ಮಳೆ ಸುರಿಯುತ್ತಿರುವ ವಿಶೇಷ ಅನುಭವ ನೀಡಿತು. ಇದರ ಮಧ್ಯೆಯೇ ಬಣ್ಣಬಣ್ಣದ ದಿರಿಸು ಧರಿಸಿದ ಚೆಲುವೆಯರು ಕ್ಯಾಟ್‌ವಾಕ್ ಮಾಡಿದರು. ಬರ್ತ್‌ಡೇ ಬಾಯ್ ಆರ್.ಚಂದ್ರು ದೊಡ್ಡ ಕೇಕ್ ಕತ್ತರಿಸಿದರು. ಅವರ ತಂದೆ, ಸಹೋದರರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.