ಮುಂಬೈ: ವಿವಾದಿತ ‘ಎಐಬಿ ರೋಸ್ಟ್’ ಕಾಮಿಡಿ ಷೋದಲ್ಲಿ ಭಾಗವಹಿಸಿದ್ದಕ್ಕೆ ಸಂಬಂಧಿಸಿ ನಗರ ಪೊಲೀಸರು ಬಾಲಿವುಡ್‌್ ನಟಿ ದೀಪಿಕಾ ಪಡುಕೋಣೆ ಅವರನ್ನು ಬಂಧಿಸುವುದಾಗಲೀ ಅಥವಾ ಅವರ ವಿರುದ್ಧ ಬಲವಂತವಾಗಿ ಕ್ರಮ ಜರುಗಿಸುವುದಾಗಲೀ ಮಾಡಕೂಡದು ಎಂದು ಬಾಂಬೆ ಹೈಕೋರ್ಟ್ ಮಧ್ಯಾಂತರ ಆದೇಶ ನೀಡಿದೆ.
ಈ ಸಂಬಂಧ ತಮ್ಮ ಹಾಗೂ ಇನ್ನಿತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡಬೇಕು ಎಂದು ಕೋರಿ ದೀಪಿಕಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದೀಪಿಕಾ ಅವರ ಅರ್ಜಿ ಮಾರ್ಚ್ ೧೬ರಂದು ವಿಚಾರಣೆಗೆ ಬರುತ್ತದೆ. ಅಲ್ಲಿಯವರೆಗೆ ಅವರನ್ನು ಬಂಧಿಸಬಾರದು ಎಂದು ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಹಾಗೂ ಅನುಜಾ ಪ್ರಭುದೇಸಾಯಿ ಅವರಿದ್ದ ಪೀಠ ಹೇಳಿದೆ.
ಕಳೆದ ವರ್ಷ ಮುಂಬೈನಲ್ಲಿ ನಡೆದ ಈ ಷೋದಲ್ಲಿ ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದ ಆರೋಪ ಚಿತ್ರ ನಿರ್ದೇಶಕ ಕರಣ್ ಜೋಹರ್, ನಟರಾದ ಅರ್ಜುನ್ ಕಪೂರ್, ರಣವೀರ್ ಸಿಂಗ್ ಹಾಗೂ ಇನ್ನಿತರರ ಮೇಲೆ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪುಣೆ ಹಾಗೂ ಮುಂಬೈನ ತಾಡ್‌ದೇವ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನು ರದ್ದು ಮಾಡಬೇಕು ಎಂದು ಕೋರಿ ದೀಪಿಕಾ 2 ಅರ್ಜಿಗಳನ್ನು ಸಲ್ಲಿಸಿದ್ದರು. ಸಾಮಾಜಿಕ ಕಾರ್ಯಕರ್ತ ಸಂತೋಷ್ ದೌಂಡ್ಕರ್ ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.