ಮನೋರಂಜನೆ

ಆಂಗ್ಲರನ್ನು ಮನೆಗಟ್ಟಿದ ಹುಸೈನ್

Pinterest LinkedIn Tumblr

rub-cut1

ಅಡಿಲೇಡ್, ಮಾ.9: ಇಲ್ಲಿ ನಡೆದ ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧ 15 ರನ್‌ಗಳ ರೋಚಕ ಜಯ ಗಳಿಸಿದ ಬಾಂಗ್ಲಾದೇಶ ಕ್ರಿಕೆಟ್ ತಂಡ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ಅವಕಾಶ ಗಿಟ್ಟಿಸಿಕೊಂಡಿದೆ.
ಅಡಿಲೇಡ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 276 ರನ್ ಮಾಡಬೇಕಿದ್ದ ಇಂಗ್ಲೆಂಡ್‌ನ್ನು 48.3 ಓವರ್‌ಗಳಲ್ಲಿ 260 ರನ್‌ಗಳಿಗೆ ನಿಯಂತ್ರಿಸಿದ ಬಾಂಗ್ಲಾ ತಂಡ ಇಂಗ್ಲೆಂಡ್‌ನ್ನು ಕೂಟದಿಂದ ಹೊರಗೆ ಅಟ್ಟಿದೆ.
ಬಾಂಗ್ಲಾದ ರುಬೆಲ್ ಹುಸೈನ್ ಅವರು 49ನೆ ಓವರ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸರನ್ನು ಪೆವಿಲಿಯನ್‌ಗೆ ಅಟ್ಟಿ ಬಾಂಗ್ಲಾಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇಂಗ್ಲೆಂಡ್ ಇದರೊಂದಿಗೆ ಕಳೆದ ಐದು ವಿಶ್ವಕಪ್ ಪಂದ್ಯಗಳಲ್ಲಿ ಮೂರನೆ ಬಾರಿ ಗ್ರೂಪ್ ಹಂತದಿಂದಲೇ ನಿರ್ಗಮಿಸಿದೆ. ಬಾಂಗ್ಲಾ ಎರಡನೆ ಬಾರಿ ಗ್ರೂಪ್ ಹಂತದಿಂದ ತೇರ್ಗಡೆಯಾಗಿದೆ,
ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿರುವ ಇಂಗ್ಲೆಂಡ್ ಕೊನೆಯ ಪಂದ್ಯದಲ್ಲಿ ಶುಕ್ರವಾರ ಸಿಡ್ನಿಯಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆದ್ದರೂ ಇಂಗ್ಲೆಂಡ್‌ಗೆ ಪ್ರಯೋಜನವಿಲ್ಲ. 1992ರಲ್ಲಿ ಇಂಗ್ಲೆಂಡ್ ಕೊನೆಯ ಬಾರಿ ಫೈನಲ್ ಪ್ರವೇಶಿಸಿತ್ತು. ಆ ಬಳಿಕ 23 ವರ್ಷಗಳ ಅವಧಿಯಲ್ಲಿ ಮತ್ತೊಮ್ಮೆ ಫೈನಲ್ ಹಂತಕ್ಕೆ ತಲುಪಿಲ್ಲ.
ಸೋಮವಾರ ನಡೆದ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬಾಂಗ್ಲಾ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ನಾಯಕ ಇಯಾನ್ ಮೊರ್ಗನ್ ಯೋಜನೆ ಆರಂಭದಲ್ಲಿ ಫಲ ನೀಡಿತು. ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಬಾಂಗ್ಲಾದ ಆರಂಭಿಕ ದಾಂಡಿಗರಾದ ಇಮ್ರುಲ್ ಕೈಸ್ (2) ಮತ್ತು ತಮೀಮ್ ಇಕ್ಬಾಲ್(2) ಅವರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ.
2.1 ಓವರ್‌ಗಳಲ್ಲಿ 8 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲ ತಂಡವನ್ನು ಮೂರನೆ ವಿಕೆಟ್‌ಗೆ ಸೌಮ್ಯ ಸರ್ಕಾರ್ ಮತ್ತು ಮಹಮ್ಮದುಲ್ಲಾ ಆಧರಿಸಿದರು. ಆದರೆ ಈ ಜೋಡಿಗೆ ಸ್ಕೋರ್‌ನ್ನು 100ರ ಗಡಿ ತಲುಪಿಸಲು ಸಾಧ್ಯವಾಗಲಿಲ್ಲ. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 86 ರನ್ ಸೇರ್ಪಡೆಗೊಂಡಿತು. ಸೌಮ್ಯ ಸರ್ಕಾರ್40 ರನ್ ಗಳಿಸಿ ಔಟಾದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಶಾಕೀಬ್ ಅಲ್ ಹಸನ್(2) ವಿಫಲರಾದರು.
ಮಹಮ್ಮದುಲ್ಲಾ ಶತಕ: ಮಹಮ್ಮದುಲ್ಲಾ ಮತ್ತು ವಿಕೆಟ್ ಕೀಪರ್ ಮುಶ್ಫೀಕುರ್ರಹೀಂ ಐದನೆ ವಿಕೆಟ್‌ಗೆ ಜೊತೆಯಾಗಿ ಆಂಗ್ಲರ ದಾಳಿಯನ್ನು ಪುಡಿ ಪುಡಿ ಮಾಡಿದರು.
ಮಹಮ್ಮದುಲ್ಲಾ ಬಾಂಗ್ಲಾದ ಪರ ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. 131 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ಪೂರೈಸಿದ ಮಹಮ್ಮದುಲ್ಲಾ ಈ ಸಾಧನೆ ಮಾಡಿದ ಬಾಂಗ್ಲಾದ ಮೊದಲ ಬ್ಯಾಟ್ಸ್‌ಮನ್ ಆಗಿ ದಾಖಲೆ ಬರೆದರು. 103 ರನ್(138ಎ, 7ಬೌ, 2ಸಿ) ಗಳಿಸಿ ಮಹಮ್ಮದುಲ್ಲಾ ರನೌಟಾದರು. ಈ ಇಬ್ಬರ ಜೊತೆಯಾಟದಲ್ಲಿ ತಂಡದ ಖಾತೆಗೆ 141 ರನ್ ಸೇರ್ಪಡೆಗೊಂಡಿತು. ಬಾಂಗ್ಲಾದ ಸ್ಕೋರ್ 45.4 ಓವರ್‌ಗಳಲ್ಲಿ 240ಕ್ಕೆ ತಲುಪಿತು.
ಮುಶ್ಫೀಕುರ್ರಹೀಂ 89 ರನ್(77ಎ, 8ಬೌ,1ಸಿ) ಗಳಿಸಿ ಬ್ರಾಡ್ ಎಸೆತದಲ್ಲಿ ಜೋರ್ಡನ್‌ಗೆ ಕ್ಯಾಚ್ ನೀಡುವುದರೊಂದಿಗೆ ಶತಕ ಗಳಿಸುವ ಅವಕಾಶ ಕಳೆದುಕೊಂಡರು. ಶಬೀರ್ ರಹ್ಮಾನ್(14), ಮಶ್ರಾಫೆ ಮೊರ್ತಾಝಾ(ಔಟಾಗದೆ 6) ಮತ್ತು ಅರಾಫತ್ ಸುನ್ನಿ( ಔಟಾಗದೆ 3) ತಂಡದ ಸ್ಕೋರ್‌ನ್ನು 275ಕ್ಕೆ ತಲುಪಿಸಲು ನೆರವಾದರು.
ಉತ್ತಮ ಆರಂಭ: 276 ರನ್‌ಗಳ ಗೆಲುವಿನ ಸವಾಲನ್ನು ಪಡೆದಿದ್ದ ಇಂಗ್ಲೆಂಡ್‌ನ ಆರಂಭ ಚೆನ್ನಾಗಿತ್ತು. ಅದು ಮೊದಲ 10 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 50 ರನ್ ಮಾಡಿತ್ತು.
ಆರಂಭಿಕ ದಾಂಡಿಗರಾದ ಮೊಯೀನ್ ಅಲಿ(19) ಮತ್ತು ಇಯಾನ್ ಬೆಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡಲು ಶ್ರಮಿಸಿದ್ದರು. 7.2ನೆ ಓವರ್‌ನಲ್ಲಿ ಅಲಿ ಅನಗತ್ಯವಾಗಿ ರನ್ ಕದಿಯಲು ಹೋಗಿ ರನೌಟಾದರು.

ಇಯಾನ್ ಬೆಲ್ ಮತ್ತು ಅಲೆಕ್ಸ್ ಹೇಲ್ಸ್ (27) ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿ ಎರಡನೆ ವಿಕೆಟ್‌ಗೆ 54 ರನ್‌ಗಳ ಕಾಣಿಕೆ ನೀಡಿದರು. 19.5ನೆ ಓವರ್‌ನಲ್ಲಿ ನಾಯಕ ಮಶ್ರಾಫೆ ಮೊರ್ತಾಝಾ ಈ ಜೋಡಿಯನ್ನು ಬೇರ್ಪಡಿಸಿದರು. ರುಬೆಲ್‌ನ ಅಪಾಯದ ಬೆಲ್: ಇಯಾನ್ ಬೆಲ್ ಅರ್ಧಶತಕ ದಾಖಲಿಸಿದರು. ಬೆಲ್ 63 ರನ್ (82ಎ,7ಬೌ) ಗಳಿಸಿ ಕ್ರೀಸ್‌ಗೆ ಅಂಟಿಕೊಳ್ಳುವ ಹಾದಿಯಲ್ಲಿದ್ದಾಗ ವೇಗಿ ರುಬೆಲ್ ಹುಸೈನ್ ಪ್ರಹಾರ ಆರಂಭಿಸಿದರು. ಬೆಲ್‌ಗೆ ಮೊದಲು ಪೆವಿಲಿಯನ್ ಹಾದಿ ತೋರಿಸಿದ ರುಬೆಲ್ ಪಂದ್ಯದ ಮೇಲೆ ಬಾಂಗ್ಲಾದ ಹಿಡಿತ ಬಿಗಿಗೊಳಿಸಿದರು.
ನಾಯಕ ಇಯಾನ್ ಮೊರ್ಗನ್(0) ಅವರನ್ನು ರುಬೆಲ್ ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸಿದರು. ರುಬೆಲ್‌ಗೆ ಬೆಂಬಲ ನೀಡಿದ ತಾಸ್ಕಿನ್ ಅಹ್ಮದ್ ಅವರು ಜೇಮ್ಸ್ ಟೇಲರ್(1) ಅವರನ್ನು ಪೆವಿಲಿಯನ್‌ಗೆ ಹಿಂದಕ್ಕೆ ಕಳುಹಿಸಿದರು. 35.4ನೆ ಓವರ್‌ನಲ್ಲಿ ನಾಯಕ ಮಶ್ರಾಫೆ ಮೊರ್ತಾಝಾ ಇಂಗ್ಲೆಂಡ್‌ಗೆ ಇನ್ನೊಂದು ಆಘಾತ ನೀಡಿದರು. ಜೋ ರೂಟ್(29) ಔಟಾದರು. ಇಂಗ್ಲೆಂಡ್ ಒತ್ತಡಕ್ಕೆ ಸಿಲುಕಿತು.
ಬಟ್ಲರ್-ವೋಕೆಸ್ ಹೋರಾಟ: 35.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿದ್ದ ಇಂಗ್ಲೆಂಡ್‌ನ ಬ್ಯಾಟಿಂಗ್‌ನ್ನು ಮುನ್ನಡೆಸಿದ ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕೆಸ್ ಗೆಲುವಿಗಾಗಿ ಹೋರಾಟ ನಡೆಸಿದರು. 10.1 ಓವರ್‌ಗಳಲ್ಲಿ 75 ರನ್ ತಂಡದ ಖಾತೆಗೆ ಸೇರಿಸಿದರು. ಬಟ್ಲರ್ 65 ರನ್(52ಎ, 6ಬೌ,1ಸಿ) ಗಳಿಸಿ ಇಂಗ್ಲೆಂಡ್‌ನ ಗೆಲವಿನ ಕನಸನ್ನು ಜೀವಂತವಾಗಿರಿಸಿದ್ದರು. 45.5ನೆ ಓವರ್‌ನಲ್ಲಿ ಬಟ್ಲರ್ ಹೋರಾಟ ಅಂತ್ಯಗೊಂಡಿತು.
ಬಟ್ಲರ್ ನಿರ್ಗಮನದ ಬಳಿಕ ಜೋರ್ಡನ್(0) ಖಾತೆ ತೆರೆಯದೆ ರನೌಟಾದರು. ಬ್ರಾಡ್(9) ಒಂದು ಸಿಕ್ಸರ್ ಬಾರಿಸಿ ಹೋರಾಟ ಮುಂದುವರಿಸಿದರು. ಅಂತಿಮ ಎರಡು ಓವರ್‌ಗಳಲ್ಲಿ 16 ರನ್ ಮಾಡಬೇಕಿತ್ತು. ಆದರೆ ರುಬೆಲ್ ಹುಸೈನ್ 49ನೆ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್(0) ಮತ್ತು ಜೇಮ್ಸ್ ಆ್ಯಂಡರ್ಸನ್(0) ವಿಕೆಟ್‌ನ್ನು ಉಡಾಯಿಸಿ ಇಂಗ್ಲೆಂಡ್‌ನ ಇನಿಂಗ್ಸ್ ಮುಗಿಸಿದರು. ರುಬೆಲ್ 53ಕ್ಕೆ 4 ವಿಕೆಟ್ ಕಿತ್ತು ಬಾಂಗ್ಲಾದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು.
ಸ್ಕೋರ್ ಪಟ್ಟಿ
ಬಾಂಗ್ಲಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 275
ತಮೀಮ್ ಇಕ್ಬಾಲ್ ಸಿ ರೂಟ್ ಬಿ ಆ್ಯಂಡರ್ಸನ್ 2
ಇಮ್ರುಲ್ ಸಿ ಜೋರ್ಡನ್ ಬಿ ಆ್ಯಂಡರ್ಸನ್ 2
ಸೌಮ್ಯ ಸರ್ಕಾರ್ ಸಿ ಬಟ್ಲರ್ ಬಿ ಜೋರ್ಡನ್ 40
ಮಹಮ್ಮದುಲ್ಲಾ ರನೌಟ್(ವೋಕೆಸ್) 103
ಶಾಕೀಬ್ ಅಲ್ ಹಸನ್ ಸಿ ರೂಟ್ ಬಿ ಅಲಿ 2
ಮುಶ್ಫೀಕುರ್ರಹೀಂ ಸಿ ಜೋರ್ಡನ್ ಬಿ ಬ್ರಾಡ್ 89
ಶಬೀರ್ ಸಿ ಮೊರ್ಗನ್ ಬಿ ಜೋರ್ಡನ್ 14
ಮಶ್ರಾಫೆ ಮೊರ್ತಾಝಾ ಔಟಾಗದೆ 6
ಅರಾಫತ್ ಸುನ್ನಿ ಔಟಾಗದೆ 3
ಇತರ 14
ವಿಕೆಟ್ ಪತನ: 1-3, 2-8, 3-94, 4-99, 5-240, 6-261, 7-265.
ಬೌಲಿಂಗ್ ವಿವರ
ಜೇಮ್ಸ್ ಆ್ಯಂಡರ್ಸನ್ 10-1-45-2
ಕ್ರಿಸ್ ಬ್ರಾಡ್ 10-0-52-1
ಜೋರ್ಡನ್ 10-0-59-2
ಕ್ರಿಸ್ ವೋಕೆಸ್ 10-0-64-0
ಮೊಯೀನ್ ಅಲಿ 9-0-44-1
ಜೋ ರೂಟ್ 1-0-6-0
ಇಂಗ್ಲೆಂಡ್ 48.3 ಓವರ್‌ಗಳಲ್ಲಿ ಆಲೌಟ್ 260
ಅಲಿ ರನೌಟ್(ಸರ್ಕಾರ್/ಮುಶ್ಫೀಕುರ್ರಹೀಂ ) 19
ಬೆಲ್ ಸಿ ಮುಶ್ಫೀಕುರ್ರಹೀಂ ಬಿ ಹುಸೈನ್ 63
ಅಲೆಕ್ಸ್ ಸಿ ಮುಶ್ಫೀಕುರ್ರಹೀಂ ಬಿ ಮೊರ್ತಾಝಾ 27
ರೂಟ್ ಸಿ ಮುಶ್ಫೀಕುರ್ರಹೀಂ ಬಿ ಮೊರ್ತಾಝಾ 29
ಇಯಾನ್ ಮೋರ್ಗನ್ ಸಿ ಶಾಕೀಬ್ ಬಿ ಹುಸೈನ್ 0
ಜೇಮ್ಸ್ ಟೇಲರ್ ಸಿ ಇಮ್ರುಲ್ ಬಿ ಅಹ್ಮದ್ 1
ಬಟ್ಲರ್ ಸಿ ಮುಶ್ಫೀಕುರ್ರಹೀಂ ಬಿ ಅಹ್ಮದ್ 65
ಕ್ರಿಸ್ ವೋಕೆಸ್ ಔಟಾಗದೆ 42
ಜೋರ್ಡ್‌ನ್ ರನೌಟ್(ಶಾಕಿಬ್) 0
ಸ್ಟುವರ್ಟ್ ಬ್ರಾಡ್ ಬಿ ಹುಸೈನ್ 0
ಜೇಮ್ಸ್ ಆ್ಯಂಡರ್ಸನ್ ಬಿ ಹುಸೈನ್ 0
ಇತರ 5
ವಿಕೆಟ್ ಪತನ: 1-43, 2-97, 3-121, 4-121, 5-132, 6-163, 7-238, 8-238, 9-260, 10-260.
ಬೌಲಿಂಗ್ ವಿವರ
ಮಶ್ರಾಫೆ ಮೊರ್ತಾಝಾ 10-0-48-2
ರುಬೆಲ್ ಹುಸೈನ್ 9.3-0-53-4
ಅರಾಫತ್ ಸುನ್ನಿ 8-0-42-0
ಶಾಕಿಬ್ ಅಲ್ ಹಸನ್ 10-0-41-0
ತಾಸ್ಕಿನ್ ಅಹ್ಮದ್ 9-0-59-2
ಶಬೀರ್ ರಹ್ಮಾನ್ 2-0-13-0
ಪಂದ್ಯಶ್ರೇಷ್ಠ: ಮುಹಮ್ಮದುಲ್ಲಾ.

Write A Comment