– ಡಿ.ಎಂ.ಕುರ್ಕೆ ಪ್ರಶಾಂತ.
ನಿಮ್ಮನ್ನು ಪ್ರಶ್ನೆ ಕೇಳಲಿಕ್ಕೆ ಕೊಂಚ ಅಳುಕಿದೆ. ಏಕೆಂದರೆ, ಇತ್ತೀಚೆಗೆ ಕೆಲವರು ನಿಮ್ಮನ್ನು ‘ಜಂಬದ ಹುಡುಗಿ’ ಎನ್ನುತ್ತಿದ್ದಾರೆ… ‘ಬೆಂಕಿಪಟ್ಣ’ ಸಿನಿಮಾದಿಂದ ನೀವು ಬದಲಾಗಿದ್ದೀರಂತೆ?
ರಾಜ್ಯ ಪ್ರಶಸ್ತಿ ಸಿಕ್ಕಿದ್ದರೆ ಜಂಬ ಪಡಬಹುದಿತ್ತು. ನಾನು ಕಷ್ಟದಿಂದ ಬೆಳೆದವಳು. ‘ಬಿಗ್‌ಬಾಸ್’ ರಿಯಾಲಿಟಿ ಷೋಗೆ ಹೋಗುವ ಮುಂಚೆ ಆ ತಂಡದ ಸಂಘಟಕರಿಂದ ಫೋನ್ ಬಂದಿತ್ತು– ‘ಇಲ್ಲಿಯವರೆಗೂ ನಿಮ್ಮ ಬಗ್ಗೆ ನೀವು ಕೇಳಿದ, ಇಲ್ಲವೇ ಪತ್ರಿಕೆಗಳಲ್ಲಿ ಬಂದ ವಿವಾದ ಯಾವುದು’ ಎಂದವರು ಕೇಳಿದರು.
ನಾನು ತಬ್ಬಿಬ್ಬಾದೆ. ‘ಚಿತ್ರರಂಗದಲ್ಲಿ ಕಾಂಟ್ರವರ್ಸಿ ಇಲ್ಲದಿದ್ದರೆ ಬಾಳು ಇಷ್ಟೇನಾ’ ಎನಿಸಿತು. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡ ಎಂದು ನನ್ನ ತಾಯಿ ಹೇಳುತ್ತಾರೆ. ನನ್ನ ಬಗ್ಗೆ ಯಾವುದೇ ವಿವಾದಗಳು ಬಂದರೂ ನಾನು ಗಮನ ನೀಡುವುದಿಲ್ಲ. ನಾನಲ್ಲದಿರುವುದರ ಬಗ್ಗೆ ಏಕೆ ಗಮನನೀಡಬೇಕು.
ಕಿರುತೆರೆ ಕಾರ್ಯಕ್ರಮಗಳಲ್ಲಿ ನಿಮ್ಮ ವಿಚಾರಗಳನ್ನು ಹೇರುತ್ತೀರಿ ಎನ್ನುವ ಆರೋಪವೂ ಇದೆ…
ನಾನು ಮಾಡುವ ಕೆಲಸ ನನಗೆ ಸಿಕ್ಕಾಪಟ್ಟೆ ಇಷ್ಟ. ಅದನ್ನು ದೇವರ ಸೇವೆ ರೀತಿ ಮಾಡುವೆ. ನನಗೆ ನಿರೂಪಣೆಯ ರೀತಿ, ಇತ್ಯಾದಿ ಸರಿ ಕಾಣಲಿಲ್ಲ ಅಥವಾ ಅದನ್ನು ಇನ್ನೂ ಉತ್ತಮಗೊಳಿಸಬಹುದು ಅನ್ನಿಸಿದರೆ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಅನಿಸಿಕೆ ವ್ಯಕ್ತಪಡಿಸುವುದು ಹೇರಿಕೆಯಲ್ಲ. ಕನ್ನಡದ ಎಲ್ಲ ವಾಹಿನಿಗಳಲ್ಲೂ ನನಗೆ ಅವಕಾಶಗಳು ದೊರೆಯುತ್ತಿವೆ. ನಾನು ಜಂಬದ ಹುಡುಗಿ ಆಗಿದ್ದರೆ, ಅನಗತ್ಯವಾಗಿ ಬೇರೆ ವಿಷಯಗಳಲ್ಲಿ ಮೂಗು ತೂರಿಸುವ ಚಾಳಿ ಹೊಂದಿದ್ದರೆ ನನಗೆ ಅವಕಾಶಗಳೇ ಸಿಗುತ್ತಿರಲಿಲ್ಲ.
ವಿವಾದಗಳ ಮಾತು ಬಿಡಿ. ‘ಬೆಂಕಿಪಟ್ಣ’ ಸಿನಿಮಾದ ಬಗ್ಗೆ ಹೇಳಿ. ಸಿನಿಮಾಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ, ಅಲ್ಲವೇ?
ಯಾವುದೇ ಸಿನಿಮಾ ಒಬ್ಬರಿಗೆ ಇಷ್ಟವಾಗಬಹುದು ಮತ್ತೊಬ್ಬರಿಗೆ ಇಷ್ಟವಾಗದಿರಬಹುದು. ಅದು ಅವರವರ ಆಯ್ಕೆ ಮತ್ತು ಅಭಿವ್ಯಕ್ತಿ. ನಾವು ಇಷ್ಟ ಮತ್ತು ಕಷ್ಟದಿಂದಲೇ ಆ ಸಿನಿಮಾ ಮಾಡಿದ್ದು. ನನ್ನ ಪಾತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಆ ಪ್ರತಿಕ್ರಿಯೆಗಳು ನಟಿಯಾಗಿ ನಾನು ಉತ್ತಮಗೊಳ್ಳಲು ಸಲಹೆಗಳಂತಿವೆ. ಹಾಂ, ನಾನು ಬೆಂಗಳೂರಿಗೆ ಬಂದು ಎಂಟು ವರ್ಷಗಳಾದವು. ಈ ಅವಧಿಯಲ್ಲಿ– ‘ಬೆಂಕಿಪಟ್ಣ’ದಲ್ಲಿ ದೊರೆತ ಅವಕಾಶ ನನ್ನ ವೃತ್ತಿ ಬದುಕಿನ ಮಹತ್ವದ ಘಟ್ಟ ಎನ್ನಿಸಿದೆ.
ನಿಮ್ಮ ಪಾಲಿಗೆ ‘ಬೆಂಕಿಪಟ್ಣ’ ಕೊಟ್ಟಿದ್ದೇನು?
ಹೊಸ ಚಾಲೆಂಜ್ ಮತ್ತು ಜವಾಬ್ದಾರಿ. ಹತ್ತು ಜನ ಮಂಜುಳ ಸೇರಿದರೆ ಒಬ್ಬ ಅನುಶ್ರೀ ಎಂದು ಒಬ್ಬರು ಬರೆದಿದ್ದರು. ಆಗ ಸಂತಸದ ಜತೆಗೆ ಭಯವೂ ಆಯಿತು. ಈ ಒಂದೇ ಚಿತ್ರ ನನಗೆ ಅಪಾರ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಟ್ಟಿದೆ.
ನಿರೂಪಣೆಗೆ ಹೆಚ್ಚು ಗಮನ ನೀಡುತ್ತೀದ್ದೀರಿ, ಧಾರಾವಾಹಿಗಳಲ್ಲಿ ನಟಿಸುವುದಿಲ್ಲವೇ?
ಸದ್ಯಕ್ಕೆ ಧಾರಾವಾಹಿ ಬೇಡ. ನಿರೂಪಣೆಯಲ್ಲಿ ಮುಂದುವರೆಯುವೆ. ನಾನು ಹಳೆಯ ಚಿತ್ರಗಳನ್ನು ನೋಡುತ್ತಾ ಬೆಳೆದಿರುವುದು. ಆ ರೀತಿಯ ಪ್ರಾಜೆಕ್ಟ್‌ಗಳು ಭವಿಷ್ಯದಲ್ಲಿ ಸಿಕ್ಕರೆ ನಾನು ಕಿರುತೆರೆಯಲ್ಲಿ ನಟಿಸುವೆ.
‘ಬೆಂಕಿಪಟ್ಣ’ ತೆರೆಕಂಡ ನಂತರ ಚಿತ್ರದ ಕಥೆ ಮತ್ತು ನಿಮ್ಮ ಪಾತ್ರವನ್ನು ಮತ್ತಷ್ಟು ಉತ್ತಮಗೊಳಿಸಬಹುದಿತ್ತು ಎನಿಸಿದೆಯೇ?
ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಎಷ್ಟೇ ಶ್ರಮಪಟ್ಟರೂ ಶೇ 100ರಷ್ಟು ತೃಪ್ತಿ ಸಿಗುವುದಿಲ್ಲ. ಸಿನಿಮಾ ನೋಡಿದಾಗ ಈ ರೀತಿ ಮಾಡಬಹುದಿತ್ತು, ಆ ರೀತಿ ಇರಬೇಕಿತ್ತು ಎನಿಸಿದ್ದು ನಿಜ. ಆದರೆ ನಿರ್ದೇಶಕರಿಗೆ ಅವರದ್ದೇ ಆದ ವಿಷನ್ ಇರುತ್ತದೆ. ಅವರು ಕಥೆಯನ್ನು ಉತ್ತಮವಾಗಿ ನಿರೂಪಿಸಿದ್ದಾರೆ.
ಬಹುಪಾಲು ಜನರಿಂದ ಬಂದ ಪ್ರತಿಕ್ರಿಯೆ ಎಂದರೆ, ಸಿನಿಮಾ ಇನ್ನಷ್ಟು ಖಚಿತವಾಗಿ ಇರಬೇಕಿತ್ತು ಎನ್ನುವುದು. ಪಾತ್ರದ ವಿಚಾರಕ್ಕೆ ಬಂದರೆ ನನಗೆ ಎಷ್ಟು ಸಾಧ್ಯವೋ ಅಷ್ಟು ನ್ಯಾಯ ಒದಗಿಸಿದ್ದೇನೆ. ಚಿತ್ರ ಗೆದ್ದಿದ್ದರೆ ಅದು ಇಡೀ ಚಿತ್ರತಂಡದ ಗೆಲುವಾಗುತ್ತಿತ್ತು.
ನಿಮ್ಮ ಪಾತ್ರದಲ್ಲಿನ ಅತಿಯಾದ ಮಾತುಗಾರಿಕೆಯೂ ಸಿನಿಮಾದ ಒಂದು ಮಿತಿ, ಲೋಪ ಎನ್ನುವ ಆರೋಪವಿದೆಯಲ್ಲ?
‘ಪಾನಿ’ ಪಾತ್ರಕ್ಕೆ ಅವಳದ್ದೇ ಆದ ಪ್ರಪಂಚವಿದೆ. ಅವಳೊಬ್ಬ ಪಕ್ಕಾ ಲೋಕಲ್ ಬಜಾರಿ. ಮಾತನಾಡಲೇಬೇಕು. ಆ ಪಾತ್ರವನ್ನು ಆ ರೀತಿಯೇ ತೋರಿಸಬೇಕು, ಅತಿರೇಕ ಎನಿಸಿಲ್ಲ.
ನಿಮ್ಮ ನಟನೆಯ ‘ರಿಂಗ್ ಮಾಸ್ಟರ್’ ಚಿತ್ರದ ಸದ್ಯದ ಸ್ಥಿತಿ ಮತ್ತು ನಿಮ್ಮ ಪಾತ್ರ?
ಚಿತ್ರದ ಡಬ್ಬಿಂಗ್ ಇತ್ತೀಚೆಗೆ ಮುಗಿದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ. ‘ರಿಂಗ್ ಮಾಸ್ಟರ್’ನಲ್ಲಿ ನಾನು ಮಾತನಾಡುವುದೇ ಇಲ್ಲ, ಕಣ್ಣುಗಳೇ ಹೆಚ್ಚು ಮಾತನಾಡುತ್ತವೆ. ಅರುಣ್ ಸಾಗರ್, ಶೃಂಗಾ, ಶ್ವೇತಾ ಸೇರಿದಂತೆ ರಂಗಭೂಮಿ ಕಲಾವಿದರು ಮುಖ್ಯಭೂಮಿಕೆಯಲ್ಲಿ ಇದ್ದಾರೆ.
ಸಿನಿಮಾ ಬದುಕು ಹೇಗೆ ಸಾಗುತ್ತಿದೆ…
ಎಲ್ಲರೂ ಮಂಜುಳ ರೀತಿಯ ಪಾತ್ರಗಳ ಶೇಡ್ ಹೇಳುತ್ತಾರೆ. ಎಲ್ಲವೂ ಒಂದೇ ರೀತಿಯಲ್ಲಿ ಇರುವುದು ಸರಿಯಲ್ಲ. ಐದಾರು ಚಿತ್ರಗಳ ತರುವಾಯ ಮತ್ತೆ ಆ ರೀತಿ ಪಾತ್ರದಲ್ಲಿ ತೊಡಗಬಹುದು. ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಪರವಾಗಿಲ್ಲ, ಕಥೆ ಮತ್ತು ಪಾತ್ರ ಒಳ್ಳೆಯದಿರಬೇಕು. ಹಾಗಾಗಿಯೇ ಎಲ್ಲ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ. ‘ಕ್ವೀನ್’ ರೀತಿಯ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಅವಕಾಶ ದೊರೆಯಬೇಕಷ್ಟೇ?