ಮನೋರಂಜನೆ

‘ನಾನು ಸ್ಟಾರ್ ಅಲ್ಲ; ಮಾರ್ಕೆಟ್ಟಿದೆ’: ನಗೆಯ ನಿರೀಕ್ಷೆಯಲ್ಲಿ ‘ಸ್ಮೈಲ್ ಕೃಷ್ಣ’

Pinterest LinkedIn Tumblr

13krishanaಮೊದಲ ನಿರ್ಮಾಣದ ಅನುಭವ ಹೇಗಿತ್ತು?
ಸಹ ಕಲಾವಿದನಾಗಿ ವೃತ್ತಿ ಜೀವನ ಆರಂಭಿಸಿ, ನಾಯಕನಾಗಿ ಗುರ್ತಿಸಿಕೊಂಡು ಈಗ ನಿರ್ಮಾಪಕನಾಗಿದ್ದೇನೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಇಷ್ಟು ವರ್ಷ ಸಿನಿಮಾದಿಂದ ದುಡಿದದ್ದನ್ನೆಲ್ಲ ಮತ್ತೆ ಸಿನಿಮಾಕ್ಕೇ ತೊಡಗಿಸುತ್ತಿದ್ದೇನೆ. ನನ್ನ ಚಿತ್ರಗಳಲ್ಲಿ ಅತಿ ಹೆಚ್ಚು ಬಜೆಟ್‌ನ ಚಿತ್ರವಿದು. ಬೇರೆ ಚಿತ್ರಗಳಲ್ಲಿ ನಟಿಸುವಾಗ ಒಂದು ಅಳುಕಿರುತ್ತದೆ. ಕೆಲವೊಮ್ಮೆ ಅವರು ಹೇಳುವುದು ಒಂದು; ಚಿತ್ರದಲ್ಲಿ ಇರುವುದು ಬೇರೇನೋ. ಅದು ಬಜೆಟ್ ಕಾರಣಕ್ಕಾಗಿ ಆಗುವಂಥವು. ಆದರೆ ನನ್ನ ಚಿತ್ರಕ್ಕೆ ಈ ಯಾವುದೇ ಕೊರತೆಗಳು ಬಾರದಂತೆ ನೋಡಿಕೊಂಡಿದ್ದೇನೆ.

ನಿರೀಕ್ಷಿತ ಬಜೆಟ್‌ಗೂ ಮೀರಿ ಖರ್ಚಾಗಿದೆ. ನನ್ನ ಈವರೆಗಿನ ಸಂಪಾದನೆಯೂ ಸಾಲದಿದ್ದಾಗ ಸಾಲ ಮಾಡಿದೆ. ಆಸ್ತಿ ಮಾರಿದೆ, ಅಡವಿಟ್ಟೆ. ಅಷ್ಟಿದ್ದರೂ ಒಂದು ದಿನವೂ ಯಾರಿಗೂ ಸಂಭಾವನೆ ನೀಡದೆ ಕೆಲಸ ಮಾಡಿಸಿಕೊಂಡಿದ್ದಿಲ್ಲ. ಸರಿಯಾದ ಸಮಯಕ್ಕೆ ನಿರ್ದೇಶಕ ಶಶಾಂಕ್ ನನ್ನ ಬೆನ್ನಿಗೆ ನಿಂತರು. ಏನೇ ಖರ್ಚಾಗಿದ್ದರೂ ಅದನ್ನು ಮತ್ತೆ ಗಳಿಸುವ ನಂಬಿಕೆ ಇದೆ. ವಿಶೇಷ ಎಂದರೆ, ಬೆಳಿಗ್ಗೆ ಕಚೇರಿಗೆ ಹೋಗಿ ಕೂತವನಿಗೆ ಸಂಜೆ ಮನೆಗೆ ಬರುವುದರೊಳಗೆ ರಾಜ್ಯದಾದ್ಯಂತ ಚಿತ್ರದ ಹಂಚಿಕೆದಾರರು ದೊರೆತರು. ಸ್ಯಾಟಲೈಟ್ ಹಕ್ಕು ಕೂಡ ಮಾರಾಟವಾಗಿದೆ. ಆ ಕಾರಣಕ್ಕೆ ನಾನಿಂದು ನಿರಾಳ.

ನಟನಾಗಿದ್ದಾಗ ಮಾರುಕಟ್ಟೆ ಬಗ್ಗೆ ಚಿಂತೆ ಇರುವುದಿಲ್ಲ. ಆದರೀಗ ಅದನ್ನೆಲ್ಲ ನಿಭಾಯಿಸಲೇ  ಬೇಕಲ್ಲ?
ನನಗೆ ಗೊತ್ತು, ನಾನೇನು ಸ್ಟಾರ್ ನಟನಲ್ಲ. ಆದರೂ ನಿರ್ಮಾಪಕರು ನನ್ನನ್ನು ಹುಡುಕಿಕೊಂಡು ಬಂದರು. ನಿರ್ಮಾಪಕರು ನಟನ ಹತ್ತಿರ ಬರುವುದು ಬಿಜಿನೆಸ್‌ಗಾಗಿಯೇ. ಅಂದರೆ ನನಗೆ ಮಾರುಕಟ್ಟೆ ಇದೆ ಎಂದೇ ಅರ್ಥ. ನಾನು ಕೇವಲ ನಟನಾಗಿದ್ದಾಗಲೂ ಮಾರುಕಟ್ಟೆ ಎಂಬ ಮಾಯೆ ಬಗ್ಗೆ ಚಿಂತನೆ ಮಾಡಿದ್ದಿದೆ. ‘ತಾಜ್‌ಮಹಲ್’ ಚಿತ್ರದ ಸಂದರ್ಭದಲ್ಲಿ ಮಾರುಕಟ್ಟೆ ಬಗ್ಗೆ ಕೊಂಚ ಜ್ಞಾನವೂ ಲಭ್ಯವಾಗಿತ್ತು. ‘ತಾಜ್‌ಮಹಲ್’ಗೂ ಮೊದಲು ನಾನೊಬ್ಬ ಫ್ಲಾಪ್ ನಾಯಕ. ಆದರೂ ಅದು ಹಿಟ್ ಆಯಿತು.

ಅದರ ನಂತರದ ‘ಪ್ರೇಮ್ ಕಹಾನಿ’ ಬಿದ್ದುಹೋಯಿತು. ಆಮೇಲೆ ಬಂದ ‘ಕೃಷ್ಣನ್ ಲವ್ ಸ್ಟೋರಿ’ ಭರ್ಜರಿ ಯಶಸ್ಸು ಗಳಿಸಿತು. ಅವೆಲ್ಲ ಕೇವಲ ಮಾರುಕಟ್ಟೆ ಎಂಬ ಅಂಶದಿಂದಾಗಿ ಅಲ್ಲ. ಮಾರುಕಟ್ಟೆ ಒಳ್ಳೆಯ ಆರಂಭ ಕೊಡಬಹುದು. ಆದರೆ ಚಿತ್ರದ ಭವಿಷ್ಯ ನಿರ್ಧಾರವಾಗುವುದು ಅದರ ನಿರೂಪಣೆಯಿಂದ, ಕಲಾವಿದರಿಂದ. ಹಾಗಾಗಿ ನಾನು ಬರೀ ಮಾರುಕಟ್ಟೆ ನಂಬಿಕೊಂಡು ಚಿತ್ರ ಮಾಡಿಲ್ಲ. ಉತ್ತಮ ಅಂಶದ ಕಾರಣಕ್ಕೆ ಈ ಚಿತ್ರ ಒಳ್ಳೆಯ ಗಳಿಕೆಯ ಜೊತೆಗೆ ಒಂದಷ್ಟು ದಿನ ನಿಲ್ಲುವ ಭರವಸೆಯಂತೂ ನನಗಿದೆ.

‘ಕೃಷ್ಣ–ಲೀಲಾ’ ಪರಿಚಯ ಮಾಡಿಸಿ.
2010ರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿದ್ದು ‘ಕೃಷ್ಣ ಲೀಲಾ’. ಒಂದು ‘ಸಿಮ್’ನಿಂದಾಗಿ ಹುಡುಗ ಹುಡುಗಿಗೆ ಪ್ರೀತಿ ಹುಟ್ಟಿ ಅದು ಪೊಲೀಸ್ ಠಾಣೆ ಮೆಟ್ಟಿಲೇರುತ್ತದೆ. ಅಲ್ಲಿ ಸಿಗುವ ತಿರುವಿನಿಂದಾಗಿ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳ ಜೀವನದಲ್ಲಿ ಅನೂಹ್ಯ ಬದಲಾವಣೆಗಳಾಗುತ್ತದೆ. ಆ ಕಥೆಯಲ್ಲಿ ಕಿ(ರಿ)ಕ್ ಇದೆ. ನಾನು ಶಾಲಾ ವಾಹನದ ಚಾಲಕ ಕೃಷ್ಣ. ಅರ್ಥಾತ್ ಸ್ಮೈಲ್ ಕೃಷ್ಣ. ಅವನ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ನಗುತ್ತಲೇ ಅವನ್ನೆಲ್ಲ ಎದುರಿಸುವ ವ್ಯಕ್ತಿತ್ವ ಆತನದ್ದು. ಆತನೇ ‘ಫೆಸಲ್ ಮ್ಯಾನ್’.

ಸಿನಿಮಾದ ವಿಶೇಷವೇನು?
ಇಲ್ಲಿ ನನ್ನ ನೃತ್ಯ ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅಷ್ಟು ಮೈಚಳಿ ಬಿಟ್ಟು ನರ್ತಿಸಿದ್ದೇನೆ. ನಾನು ಕಾಲೇಜು ದಿನಗಳಲ್ಲಿ ಒಳ್ಳೆಯ ಡಾನ್ಸರ್. ಇಂಡಸ್ಟ್ರಿಗೆ ಬಂದಾಗಿನಿಂದ ನನ್ನಲ್ಲಿದ್ದ ಡಾನ್ಸರ್ ನನಗೇ ಮರೆತು ಹೋಗಿದ್ದ. ಈ ಚಿತ್ರಕ್ಕಾಗಿ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ. ಅಲ್ಲದೆ ಉಪೇಂದ್ರ ಮತ್ತು ಪುನೀತ್ ರಾಜ್‌ಕುಮಾರ್ ಅವರ ಕಂಠದಲ್ಲಿ ಎರಡು ಅದ್ಭುತ ಹಾಡುಗಳಿವೆ. ಹಾಗೇ ರಂಗಾಯಣ ರಘು, ಅಚ್ಯುತ ರಾವ್ ಅಭಿನಯಕ್ಕೆ ಮನಸೋಲುತ್ತೀರಿ. ಸಾಧು ಕೋಕಿಲ, ತಬಲಾ ನಾಣಿ, ಬುಲೆಟ್ ಪ್ರಕಾಶ್, ಧರ್ಮೇಂದ್ರ ಅರಸ್ ಅವರೆಲ್ಲರ ನಟನೆಯ ರಸದೌತಣ ಇದೆ.

ಹಾಗಿದ್ದರೆ ಈ ಚಿತ್ರ ಮತ್ತೆ ಗಾಂಧಿನಗರದಲ್ಲಿ ನಿಮ್ಮನ್ನು ನಿಲ್ಲಿಸುತ್ತದೆ ಎಂಬ ಭರವಸೆ ಇದೆ?
ಖಂಡಿತವಾಗಿಯೂ. ‘ರೋಸ್’ ಒಳ್ಳೆಯ ಓಪನಿಂಗ್ ಪಡೆದುಕೊಂಡರೂ ಸೋತಿತು. ‘ಜೈ ಭಜರಂಗಬಲಿ’ಯಲ್ಲಿನ ಕೆಲ ವಿಚಾರಗಳು ಜನರಿಗೆ ಇಷ್ಟವಾಗದೆ ಹೋದವೇನೋ. ಆದರೆ ಗಟ್ಟಿತನದಲ್ಲಿ ‘ಕೃಷ್ಣ ಲೀಲಾ’ ಯಾವುದಕ್ಕೂ ಕಡಿಮೆ ಇಲ್ಲ. ಇದು ಈ ಹಿಂದಿನ ಸೋಲುಗಳನ್ನೆಲ್ಲ ಮರೆಸಿ ಮತ್ತೆ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರ ಸಾಲಿಗೆ ನನ್ನನ್ನು ಸೇರಿಸುತ್ತದೆ ಎಂಬ ವಿಶ್ವಾಸವಿದೆ.

ಮುಂದಿನ ಯೋಜನೆಗಳೇನಿವೆ?
‘ಎಂದೆಂದಿಗೂ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ‘ಸೆಕೆಂಡ್ ಹ್ಯಾಂಡ್ ಲವರ್’ ಕೂಡ ಬಹುತೇಕ ಸಿದ್ಧವಾಗಿದೆ. ‘ಕೃಷ್ಣ ಸನ್ ಆಫ್ ಸಿ.ಎಂ’ ಬಗ್ಗೆ ಯಾವುದೇ ನಿರೀಕ್ಷೆಗಳನ್ನಿರಿಸಿಕೊಂಡಿಲ್ಲ. ನನ್ನ ಪ್ರಕಾರ ಅವರು ಒಳ್ಳೆಯ ಸಿನಿಮಾ ತಯಾರಕರಲ್ಲ. ಯಾವ್ಯಾವುದೋ ಕಾರಣಕ್ಕೆ ಸಿನಿಮಾಕ್ಕೆ ಹಣ ಹೂಡಿ, ನಂತರ ಬಿಡುಗಡೆ ಮಾಡದೇ ಇರುವ ಇಂಥವರಿಂದಾಗಿ ಕಲಾವಿದರಿಗೆ ಕೆಟ್ಟ ಹೆಸರು ಪ್ರಾಪ್ತಿಯಾಗುತ್ತದೆ. ಇಲ್ಲಿ ಆಗಿರುವುದೂ ಅದೇ.

ಇಂದಿಗೂ ಅವರು ಬಂದು ಚಿತ್ರ ಬಿಡುಗಡೆ ಮಾಡುವುದಾಗಿ ಕೇಳಿಕೊಂಡರೆ ನಾನು ಪ್ರಚಾರದಲ್ಲಿ ಭಾಗಿಯಾಗಲು ಸಿದ್ಧವಿದ್ದೇನೆ. ಆದರೆ ಅದು ಬಿಡುಗಡೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇವಿಷ್ಟು ಹೊರತಾಗಿ ಸದ್ಯ ಬೇರಾವ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲ. ‘ಕೃಷ್ಣ–ಲೀಲಾ’ಕ್ಕೆ ಹಾಕಿದ ಬಂಡವಾಳ ಮತ್ತು ಅದರ ಯಶಸ್ಸು ನೋಡಿಕೊಂಡು ನಿರ್ಮಾಪಕನಾಗಿಯೂ ಮುಂದುವರೆವ ಆಸಕ್ತಿಯಿದೆ.

Write A Comment