ಮನೋರಂಜನೆ

ಇಂಟರ್ನೆಟ್‌ನಲ್ಲಿ 1 ಸೆಕೆಂಡಿನಲ್ಲೇನಾಗುತ್ತಿದೆ ಗೊತ್ತೇ?

Pinterest LinkedIn Tumblr

internet-users

ಇಂಟರ್ನೆಟ್ ಎಂಬುದು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಲೇ ಇದೆ. ಆನ್‌ಲೈನ್‌ನ ಪ್ರತಿಯೊಂದು ಕ್ಷಣವೂ ಮಾಹಿತಿ ಪ್ರವಾಹ ಮತ್ತು ಚಟುವಟಿಕೆಗಳಿಂದ ತುಂಬಿ ತುಳುಕುತ್ತಿರುತ್ತದೆ. ಕಾರು, ವಿಮಾನಗಳಿರಲಿ, ಕಂಪ್ಯೂಟರು ಮತ್ತಿತರ ತಂತ್ರಜ್ಞಾನಗಳೇ ಇರಲಿ, ಅವುಗಳಿಂದಾಗಿ ಇಂಗಾಲದ (ಕಾರ್ಬನ್) ಹೊರಸೂಸುವಿಕೆ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ ಮತ್ತು ಪರಿಸರಕ್ಕೆ ಧಕ್ಕೆಯಾಗುತ್ತಲೂ ಇರುತ್ತದೆ; ಇದಕ್ಕೆ ಇಂಟರ್ನೆಟ್ ಬಳಕೆಯೂ ಹೊರತಾಗಿಲ್ಲ. ಇಮೇಲ್‌ಗಳು, ಟ್ವೀಟ್‌ಗಳು, ಬ್ರೌಸಿಂಗ್ ಹಾಗೂ ವೀಡಿಯೋ ವೀಕ್ಷಣೆಯೇ ಮೊದಲಾದ ಇಂಟರ್ನೆಟ್ ಆಧಾರಿತ ಚಟುವಟಿಕೆಗಳಿಂದಾಗಿ, ಅದಕ್ಕೆ ಬಳಕೆಯಾಗುವ ವಿದ್ಯುತ್ ಮತ್ತಿತರ ಮೂಲ ಸೌಕರ್ಯಗಳಿಂದಾಗಿ, ಒಂದು ಸೆಕೆಂಡಿನಲ್ಲಿ 20 ಮಿಲಿಗ್ರಾಂನಷ್ಟು ಇಂಗಾಲದ ಡೈಆಕ್ಸೈಡ್ ಅನಿಲವು ವಾತಾವರಣವನ್ನು ಸೇರಿಕೊಳ್ಳುತ್ತದೆ. ಒಂದು ಸೆಕೆಂಡಿನಲ್ಲಿ ಏನಾಗುತ್ತದೆ ಎಂಬ ಕುರಿತಾದ ಸ್ಥೂಲ ಮಾಹಿತಿ ನೀಡುವ ಅಂಕಿ ಅಂಶ ಇಲ್ಲಿದೆ.

2355911 ಇಮೇಲ್ ಕಳುಹಿಸಲಾಗುತ್ತದೆ
8,195 ಟ್ವೀಟ್‌ಗಳು
1,558 ಇನ್‌ಸ್ಟಾಗ್ರಾಂಗೆ ಫೋಟೋ ಅಪ್‌ಲೋಡ್‌ಗಳು
1,636 ಟಂಬ್ಲರ್ ಪೋಸ್ಟ್‌ಗಳು
1,611 ಸ್ಕೈಪ್ ಕರೆಗಳು
24,765 ಜಿಬಿ ಡೇಟಾ ಬಳಕೆ
46,701 ಗೂಗಲ್ ಹುಡುಕಾಟಗಳು
92,841 ಯೂಟ್ಯೂಬ್ ವೀಡಿಯೋ ವೀಕ್ಷಣೆಗಳು
1,298 ಆ್ಯಪ್‌ಗಳ ಡೌನ್‌ಲೋಡ್
54,806 ಫೇಸ್‌ಬುಕ್ ಲೈಕ್‌ಗಳು
405 ಗಂಟೆ ನೆಟ್‌ಫ್ಲಿಕ್ಸ್ ವೀಕ್ಷಣೆ

ಈ ಎಲ್ಲ ಚಟುವಟಿಕೆಗಳಿಂದಾಗಿ ಒಂದು ಸೆಕೆಂಡಿನಲ್ಲಿ 20 ಮಿಲಿಗ್ರಾಂ ಕಾರ್ಬನ್ ಡೈ ಆಕ್ಸೈಡ್ ಅನಿಲವು ವಾತಾವರಣಕ್ಕೆ ಹೊರಸೂಸುತ್ತದೆ.

ಒಂದು ಕ್ಷಣದಲ್ಲಿ
1,500 ಮೈಲಿ
ಬಳಕೆದಾರರ ಕಂಪ್ಯೂಟರ್ ಅಥವಾ ಮೊಬೈಲ್‌ನಿಂದ ಡೇಟಾ ಕೇಂದ್ರಕ್ಕೆ ವಿಚಾರಣೆ ರವಾನೆಯಾಗಿ ಮರಳಿ ಬಳಕೆದಾರರಿಗೆ ಮಾಹಿತಿ ಲಭ್ಯವಾಗುವ ಹಾದಿಯಲ್ಲಿ ಡೇಟಾದ ಸರಾಸರಿ ಪ್ರಯಾಣದ ದೂರ.

ಗೂಗಲ್‌ನಲ್ಲಿ ನೀವೇನಾದರೂ ಹುಡುಕಾಡಿದರೆ, ಅದರ ಬಗ್ಗೆ ಮಾಹಿತಿಯನ್ನು, ಉತ್ತರವನ್ನು ನಿಮ್ಮ ಮುಂದಿಡಲು ಗೂಗಲ್ ಕಂಪನಿಯು 0.2 ಸೆಕೆಂಡುಗಳಲ್ಲಿ 1000 ಕಂಪ್ಯೂಟರುಗಳನ್ನು ಬಳಸಿಕೊಳ್ಳುತ್ತದೆ.

1,43,199
2013ರ ಆಗಸ್ಟ್ 3ರಂದು ಒಂದೇ ಸೆಕೆಂಡಿನಲ್ಲಿ ಕಳುಹಿಸಲಾದ ದಾಖಲೆ ಪ್ರಮಾಣದ ಟ್ವೀಟ್‌ಗಳ ಸಂಖ್ಯೆಯಿದು. ಜಪಾನೀ ವೀಕ್ಷಕರು ಕ್ಯಾಸಲ್ ಇನ್ ದ ಸ್ಕೈ ಎಂಬ ಆನಿಮೇಶನ್ ಚಲನಚಿತ್ರದ ಕುರಿತಾಗಿ ಟ್ವೀಟ್ ಮಾಡಿದ್ದರು.

ಮಾಹಿತಿ ಕೃಪೆ: ಟೈಮ್ಸ್ ಆಫ್ ಇಂಡಿಯಾ

ಪೈರೇಟೆಡ್ ಒಎಸ್ ಇದ್ದವರಿಗೂ ವಿಂಡೋಸ್ 10 ಉಚಿತ ಅಪ್‌ಗ್ರೇಡ್
ಮೈಕ್ರೋಸಾಫ್ಟ್ ವಿಂಡೋಸ್ ಬಳಸುತ್ತಿರುವ ಎಲ್ಲರಿಗೂ ಶುಭ ಸುದ್ದಿ. ಪೈರೇಟೆಡ್ ಚೀನೀ ತಂತ್ರಾಂಶವೇ ಹೆಚ್ಚಿರುವ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ತನ್ನ ಹಿಡಿತ ಸಾಧಿಸುವ ನಿಟ್ಟಿನಲ್ಲಿ ತನ್ನ ಅತ್ಯಾಧುನಿಕ ವಿಂಡೋಸ್ 10 ಆವೃತ್ತಿಯನ್ನು ಎಲ್ಲರಿಗೂ ಉಚಿತವಾಗಿ ಅಪ್‌ಗ್ರೇಡ್ ಮಾಡಿಸಲು ಮೈಕ್ರೋಸಾಫ್ಟ್ ಉದ್ದೇಶಿಸಿದೆ. ವಿಶೇಷವೆಂದರೆ, ಪೈರೇಟೆಡ್ ತಂತ್ರಾಂಶ ಬಳಸುತ್ತಿರುವವರಿಗೂ ಉಚಿತವಾಗಿ ವಿಂಡೋಸ್ 10ರ ಅಪ್‌ಗ್ರೇಡ್ ದೊರೆಯಲಿದೆ ಎಂಬುದು ಹೊಸ ಸುದ್ದಿ.

ಚೀನಾದಲ್ಲಿಯೇ ಇದನ್ನು ಘೋಷಿಸಿದ್ದೇಕೆ? ಅಲ್ಲಿ ಪರವಾನಗಿರಹಿತವಾಗಿ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಳಕೆಯಲ್ಲಿವೆ. ಈ ಬಳಕೆದಾರರೆಲ್ಲರ ತಂತ್ರಾಂಶಗಳನ್ನು ಕಾನೂನುಬದ್ಧಗೊಳಿಸುವ ಮೂಲಕ, ಕಂಪ್ಯೂಟರ್ ಮಾರುಕಟ್ಟೆಯಲ್ಲಿ ತನ್ನ ಹಿಡಿತ ಬಲಪಡಿಸುವ ಪ್ರಯತ್ನಕ್ಕೆ ಮೈಕ್ರೋಸಾಫ್ಟ್ ಮುಂದಾಗಿದೆ. ಚೀನಾದಲ್ಲಿ ನಾಲ್ಕನೇ ಮೂರರಷ್ಟು ಪಿಸಿ ತಂತ್ರಾಂಶಗಳು ಸೂಕ್ತ ಪರವಾನಗಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಇತ್ತೀಚೆಗೆ ನಡೆಸಲಾಗಿದ್ದ ಅಧ್ಯಯನವೊಂದು ಕಂಡುಕೊಂಡಿತ್ತು.

ಚೀನಾದ ಶೆಂಝೆನ್‌ನಲ್ಲಿ ನಡೆದ ವಿಂಡೋಸ್ ಸಮಾವೇಶವೊಂದರಲ್ಲಿ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಂ ಘಟಕದ ಮುಖ್ಯಾಧಿಕಾರಿ ಟೆರಿ ಮಯರ್ಸನ್ ಅವರು ಮೈಕ್ರೋಸಾಫ್ಟ್‌ನ ಈ ಯೋಜನೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.

“ಅರ್ಹವಾಗಿರುವ ಎಲ್ಲ ಪಿಸಿಗಳನ್ನೂ, ಅದು ಸಾಚಾ ಆಗಿರಲಿ, ಪೈರೇಟೆಡ್ ಆಗಿರಲಿ, ವಿಂಡೋಸ್ 10ಕ್ಕೆ ಅಪ್‌ಗ್ರೇಡ್ ಮಾಡಿಸುತ್ತೇವೆ” ಎಂದು ಅವರು ಹೇಳಿದ್ದು, ಚೀನಾದ ವಿಂಡೋಸ್ ಬಳಕೆದಾರರನ್ನು ಮತ್ತೆ ತಮ್ಮ ತಂತ್ರಾಂಶದತ್ತ ಸೆಳೆದುಕೊಳ್ಳುವಂತೆ ಮಾಡುವುದೇ ಇದರ ಹಿಂದಿನ ಉದ್ದೇಶ ಎಂದಿದ್ದಾರೆ. ಆದರೆ, ಪರವಾನಗಿರಹಿತ ಬಳಕೆಗಿಂತ, ಪರವಾನಗಿಯುಳ್ಳ ತಂತ್ರಾಂಶ ಬಳಸಿದರೆ ಏನೆಲ್ಲಾ ಅನುಕೂಲಗಳಿವೆ ಎಂಬುದನ್ನು ಬಳಕೆದಾರರಿಗೆ ತಿಳಿಹೇಳುವುದು ಮತ್ತು ಮುಂದುವರಿಸುವ ಇಷ್ಟವಿದ್ದರೆ, ವರ್ಷದ ಬಳಿಕ ಸೂಕ್ತ ಹಣ ಪಾವತಿಸಿ ವಿಂಡೋಸ್ 10 ಬಳಕೆಯನ್ನು ಮುಂದುವರಿಸುವಂತೆ ಮಾಡುವ ಯೋಜನೆಯಿದು ಎಂದು ಮೂಲಗಳು ತಿಳಿಸಿವೆ.

ಈ ಬೇಸಿಗೆಯಲ್ಲೇ 190 ದೇಶಗಳಲ್ಲಿ 111 ಭಾಷೆಗಳಲ್ಲಿ ವಿಂಡೋಸ್ 10 ಬಿಡುಗಡೆಯಾಗಲಿದೆ. ವಿಂಡೋಸ್ 7 ಅಥವಾ ವಿಂಡೋಸ್ 8 ಬಳಕೆದಾರರರಿಗೆ ವಿಂಡೋಸ್ 10ಕ್ಕೆ ಉಚಿತವಾಗಿ ಅಪ್‌ಗ್ರೇಡ್ ನೀಡಲಾಗುತ್ತದೆ ಎಂದು ಜನವರಿ ತಿಂಗಳಲ್ಲಿ ಮೈಕ್ರೋಸಾಫ್ಟ್ ಘೋಷಿಸಿತ್ತು.

Write A Comment