ಮುದ್ದು ಮುಖ…ತುಂಟ ನಗೆ…ಮೊದಲ ನೋಟದಲ್ಲೇ ಕಣ್ಮನ ಸೆಳೆಯುವ ಮಾಲಿವುಡ್ ನಟಿ, ಮಲ್ಲು ಕುಟ್ಟಿ ಸನುಶಾ. ಮಲೆಯಾಳಂ ಚಿತ್ರರಂಗದಲ್ಲಿ ಜನಪ್ರಿಯವಾಗಿರುವ ಈಕೆ, ಈಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ಮೂಲಕ ಗಾಂಧಿನಗರಕ್ಕೆ ಕಾಲಿಟ್ಟಿರುವ ಸುನುಶಾ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮೊದಲ ಬಾರಿಗೆ ಜೋಡಿಯಾಗಿದ್ದಾರೆ.
ಕನ್ನಡಿಗರಿಗೆ ಹೊಸ ಪರಿಚಯವಾಗಿರುವ ಸನುಶಾ, ಮಲೆಯಾಳಂ ಮತ್ತು ತಮಿಳು ಸಿನಿ ಅಂಗಳದಲ್ಲಿನ ಬ್ಲಾಕ್ ಬಸ್ಟರ್ ಚಿತ್ರಗಳ ನಾಯಕಿ. ಚಿಕ್ಕವಯಸ್ಸಲ್ಲೇ ರಾಜ್ಯ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿರುವ ಪ್ರತಿಭಾವಂತ ನಟಿ ಸನುಶಾ ವೃತ್ತಿ ಬದುಕಿನ ಕಿರುನೋಟ ಇಲ್ಲಿದೆ.
ಬಾಲನಟಿ ‘ಬೇಬಿ’ ಸನುಶಾ ಸಂತೋಷ್
ಕಾಸರಗೋಡು ಜಿಲ್ಲೆಯಲ್ಲಿ ಜನಿಸಿದ ಸನುಶಾ ಸಂತೋಷ್ ತುಂಟ ಹುಡುಗಿ. ಚಿಕ್ಕವಯಸ್ಸಲ್ಲೇ ನಟನೆ ಬಗ್ಗೆ ಆಕರ್ಷಿತಗೊಂಡಿದ್ದ ಸನುಶಾ, ಬಣ್ಣದ ಬದುಕಿಗೆ ಕಾಲಿಟ್ಟಿದ್ದು ಐದು ವರ್ಷದ ಪುಟ್ಟ ಬಾಲಕಿಯಾಗಿರುವಾಗಲೇ.
ಸೀರಿಯಲ್ ಗಳಿಂದ ಸನುಶಾ ಫೇಮಸ್..!
ಮಾಲಿವುಡ್ ಅಂಗಳದ ಪ್ರಸಿದ್ಧ ಸೀರಿಯಲ್ ಗಳಲ್ಲಿ ನಟಿಸುವುದಕ್ಕೆ ಶುರುಮಾಡಿದ ಸುನುಶಾಗೆ ನೋಡ ನೋಡುತ್ತಲೇ ಬೇಡಿಕೆ ಹೆಚ್ಚಾಯ್ತು. ‘ದಾದಾ ಸಾಹೇಬ್’ ಚಿತ್ರದ ಮೂಲಕ ಬಣ್ಣ ಹಚ್ಚಿದ ಸನುಶಾ ‘ಫಿಲಿಪ್ಸ್ ಅಂಡ್ ದಿ ಮಂಕಿ ಪೆನ್’ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದರು. ಅಲ್ಲಿಂದ ಪ್ರತಿ ಸಿನಿಮಾದಲ್ಲೂ ಬಾಲನಟಿ ಪಾತ್ರಕ್ಕೆ ಸನುಶಾ ಖಾಯಂ.
Kaazhcha ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಸನುಶಾ 2004ರಲ್ಲಿ ‘ಅತ್ತ್ಯುತ್ತಮ ಬಾಲನಟಿ’ ವಿಭಾಗದಲ್ಲಿ ಕೇರಳ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಹಾಗೆ, Soumyam ಚಿತ್ರಕ್ಕೂ ಪ್ರಶಸ್ತಿ ಪಡೆಯುವ ಮೂಲಕ ಚಿಕ್ಕವಯಸ್ಸಲ್ಲೇ ಎರಡೆರಡು ರಾಜ್ಯ ಪ್ರಶಸ್ತಿ ಪಡೆದಿರುವ ಖ್ಯಾತಿ ಸನುಶಾರದ್ದು. ಇನ್ನೂ, ಕಳೆದ ವರ್ಷ ತೆರೆಕಂಡ Zachariayude Garbhinikal ಚಿತ್ರದ ನಟನೆಗಾಗಿ ರಾಜ್ಯದ ಸ್ಪೆಷಲ್ ಜ್ಯೂರಿ ಅವಾರ್ಡ್ ಕೂಡ ಮುಡಿಗೇರಿಸಿಕೊಂಡಿದ್ದಾರೆ. ಇದೇ ಚಿತ್ರದ ಆಕ್ಟಿಂಗ್ ಗಾಗಿ ‘ಫಿಲ್ಮ್ ಫೇರ್ ಅವಾರ್ಡ್’ ಸ್ವೀಕರಿಸಿರುವ ಸನುಶಾ ಈಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.
ಮಲೆಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಸನುಶಾ ನಟನೆಯನ್ನ ನೋಡಿ ಮೆಚ್ಚಿರುವ ನಿರ್ದೇಶಕ ಇಂದ್ರಬಾಬು, ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರಕ್ಕಾಗಿ ಸನುಶಾರಿಗೆ ಬುಲಾವ್ ನೀಡಿದರು.
ವರ್ಷಗಳ ಹಿಂದೆ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಶೈಲೂ’ ಚಿತ್ರಕ್ಕೆ ನಾಯಕಿಯಾಗಿ ಸನುಶಾ ಅಭಿನಯಿಸಬೇಕಿತ್ತು. ನಿರ್ದೇಶಕ ಎಸ್.ನಾರಾಯಣ್, ಸನುಶಾರನ್ನ ಫೈನಲ್ ಕೂಡ ಮಾಡಿದ್ರು. ಆದ್ರೆ, ಅನಂತರ ಆದ ಬೆಳವಣಿಗೆಗಳಿಂದ ಸನುಶಾ ಜಾಗಕ್ಕೆ ಭಾಮಾ ಬರಬೇಕಾಯ್ತು.
ಡಾ.ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಚಿತ್ರಗಳನ್ನ ನೋಡಿ ಇಷ್ಟಪಟ್ಟಿದ್ದ ಸನುಶಾಗೆ, ಕನ್ನಡದಿಂದ ಅವಕಾಶ ಹುಡುಕಿಕೊಂಡು ಬಂದ ತಕ್ಷಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೇ, ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ಉತ್ತಮ ಪಾತ್ರ ಲಭಿಸಿರುವುದಕ್ಕೆ ಸನುಶಾ ಫುಲ್ ಖುಷ್ ಆಗಿದ್ದಾರೆ. ಭಾಷೆ ಕಷ್ಟವಾದರೂ, ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಆಸೆ ಸನುಶಾಗಿದೆ.
ಮಳೆಯಾಳಂನ ಸನುಶಾ ಜೊತೆಗೆ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ಪರಭಾಷೆಯ ದೊಡ್ಡ ಕಲಾವಿದರ ದಂಡೇ ಇದೆ. ಕಾಲಿವುಡ್ ನ ಶರತ್ ಕುಮಾರ್, ಬಾಲಿವುಡ್ ನ ಓಂ ಪುರಿ ಸೇರಿದಂತೆ ‘ಗೀತಾ’ ಖ್ಯಾತಿಯ ಅಕ್ಷತಾ ರಾವ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.