ಮನೋರಂಜನೆ

ಗನಸಖಿಯ ಮಾಡೆಲಿಂಗ್‌ ಮೋಹ

Pinterest LinkedIn Tumblr

psmec02 seema-ರಮೇಶ ಕೆ.
ಎಂಬಿಎ ಪದವಿ ಪಡೆದ ಕೊಡಗಿನ ಯುವತಿ ಆರು ವರ್ಷಗಳ ಕಾಲ ಗಗನಸಖಿಯಾಗಿ ಕೆಲಸ ನಿರ್ವಹಿಸಿದ್ದಾರೆ. ದೇಶ ಸುತ್ತುವ ಆಸೆ ಈಡೇರಿದ ನಂತರ ಇವರು ಆಯ್ಕೆ ಮಾಡಿಕೊಂಡ ಕ್ಷೇತ್ರ ಮಾಡೆಲಿಂಗ್‌. ಮಾಡೆಲಿಂಗ್‌ ಬದುಕಿನ ಸೆಳೆತವೇ ಅಂಥದ್ದು.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಇದೀಗ ಮಾಡೆಲಿಂಗ್‌ನಲ್ಲಿ ಹೆಸರು ಮಾಡಬೇಕೆಂದು ಹೊರಟಿರುವ ಗಗನಸಖಿಯ ಹೆಸರು ಸೀಮಾ. ಚೆನ್ನೈನ ಮೇಕಪ್‌ ಬ್ರಾಂಡ್‌ ಹಾಗೂ ಪ್ರತೀಕ್ಷಾ ಎಕ್ಸ್‌ಪೋರ್ಟ್‌ಗೆ ರೂಪದರ್ಶಿಯಾಗಿ ಕಾಣಿಸಿಕೊಂಡ ಸೀಮಾ ಹುಟ್ಟಿದ್ದು ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ. ಪ್ಯಾಷನ್‌ಗಾಗಿ ಮಾಡೆಲಿಂಗ್‌ ಅನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಹೇಳುವ ಸೀಮಾ ಜೆಟ್‌ ಏರ್‌ವೇಸ್‌, ಸೌದಿ ಅರೇಬಿಯನ್‌ ಏರ್‌ಲೈನ್ಸ್‌ ಹಾಗೂ ಸಿಂಗಪುರ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ಮಾಡೆಲಿಂಗ್‌ ಸೆಳೆತ ಹಾಗೂ ಹವ್ಯಾಸದ ಬಗ್ಗೆ ‘ಮೆಟ್ರೊ’ದೊಂದಿಗೆ ಮಾತನಾಡಿದ್ದಾರೆ ಸೀಮಾ.

‘ನನ್ನ ಮತ್ತೊಂದು ಹೆಸರು ರಂಜನಿ ಪೂಣಚ್ಚ. ಅಮ್ಮ ಹಾಗೂ ತಮ್ಮ ಊರಿನಲ್ಲೇ ಇದ್ದಾರೆ. ನಾನು ಓದಿದ್ದು ಇಲ್ಲೇ. ಗಗನಸಖಿಯಾಗಿ ದೇಶ ಸುತ್ತಬೇಕೆಂಬ ನನ್ನ ಆಸೆ ಈಡೇರಿದೆ. ಪ್ಯಾಷನ್‌ಗಾಗಿ ಮಾಡೆಲಿಂಗ್‌ಗೆ ಬಂದೆ. ಇದಲ್ಲದೇ ಕಾರು ಓಡಿಸುವ ಹವ್ಯಾಸವೂ ನನಗಿದೆ. ರೇಸರ್‌ ಇಮ್ರಾನ್‌ ಅವರ ಬಳಿ ಕಾರ್‌ರೇಸ್‌ ತರಬೇತಿ ಪಡೆಯುತ್ತಿದ್ದೇನೆ. ಚೆನ್ನೈ ಹಾಗೂ ಕನಕಪುರ ಟ್ರ್ಯಾಕ್‌ನಲ್ಲಿ ಕಾರು ಓಡಿಸಿದ್ದೇನೆ. ಇತ್ತೀಚೆಗೆ ಹಾಸನದಲ್ಲಿ ನಡೆದ ಕಾರು ರೇಸ್‌ನಲ್ಲಿ ದ್ವಿತೀಯ ಸ್ಥಾನವೂ ನನ್ನದಾಗಿತ್ತು. ಮುಂದಿನ ದಿನಗಳಲ್ಲಿ ಮಾಡೆಲಿಂಗ್‌ ಹಾಗೂ ಕಾರು ರೇಸ್ ಕಡೆ ಹೆಚ್ಚು ಆಸಕ್ತಿ ವಹಿಸುತ್ತೇನೆ. ಅಲ್ಲದೇ ವ್ಯಾಪಾರ ಮಾಡುವ ಗುರಿಯನ್ನು ಹೊಂದಿದ್ದೇನೆ’ ಎನ್ನುತ್ತಾರೆ ಸೀಮಾ.

‘ಮೇಕಪ್‌ ಬ್ರಾಂಡ್‌ಗೆ ರೂಪದರ್ಶಿಯಾಗಿ ಆಯ್ಕೆಯಾದಾಗ ಬಹಳ ಖುಷಿ ಆಯಿತು. ಅಲ್ಲದೇ ಭಯವೂ ಇತ್ತು. ಮದುವೆ ಸಂಗ್ರಹದ ಥೀಮ್‌ ನಮಗೆ ನೀಡಿದ್ದರು. ಅದರಲ್ಲಿ ಉತ್ತರ ಭಾರತದ ಮದುಮಗಳ  ಸಿಂಗಾರ ಮಾಡಲಾಗಿತ್ತು. ಆರಂಭದಲ್ಲಿ ಕ್ಯಾಮೆರಾ ಎದುರಿಸಲು ಕಷ್ಟ ಆಗುತ್ತಿತ್ತು. ಆದರೂ ಧೈರ್ಯದಿಂದ ಎದುರಿಸಿದೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಶೂಟಿಂಗ್‌ ಇರುತ್ತಿತ್ತು. ಶೂಟಿಂಗ್‌ ಮುಗಿದ ಮೇಲೆ ಬೇರೆ ಬೇರೆ ರಾಜ್ಯದ ರೂಪದರ್ಶಿಯರು ಪರಿಚಯ ಆದರು. ಒಳ್ಳೆಯ ಅನುಭವ ಸಿಕ್ಕಿತು. ಆ ದಿನವನ್ನು ಎಂದೂ ಮರೆಯುವುದಿಲ್ಲ’ ಎಂದು ಅನುಭವ ಹಂಚಿಕೊಳ್ಳುತ್ತಾರೆ ಸೀಮಾ.

ಸೌಂದರ್ಯದ ಡೈರಿಯಿಂದ…
ಸೀಮಾ ವಾರಕ್ಕೆ ಮೂರು ದಿನ ಈಜುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ದಿನಕ್ಕೆ ಎರಡು ಗಂಟೆ ವರ್ಕೌಟ್‌ ಮಾಡುತ್ತಾರೆ. ಅದರಲ್ಲಿ ಕಾರ್ಡಿಯೊ, ಆ್ಯಪ್ಸ್‌, ಪುಶಪ್ಸ್‌ ವ್ಯಾಯಾಮವೂ ಸೇರಿದೆಯಂತೆ. ಹಣ್ಣು, ಗ್ರೀನ್‌ ಟೀ, ಚಪಾತಿ ತಿನ್ನುವ ಮೂಲಕ ಕಟ್ಟುನಿಟ್ಟಿನ ಡಯಟ್ ಮಾಡುತ್ತಾರೆ.

ರೂಪದರ್ಶಿ ಸೀಮಾ, ಮಹಿಳೆಯರು ಬೇಸಿಗೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳನ್ನು ನೀಡುತ್ತಾರೆ. ‘ಮನೆಯಿಂದ ಹೊರಗೆ ಹೋಗುವಾಗ ಸನ್‌ ಸ್ಕ್ರೀನ್‌ ಲೋಷನ್‌ ಹಚ್ಚಿಕೊಳ್ಳಿ. ದಿನಕ್ಕೆ ನಾಲ್ಕೈದು ಸಲ ಮುಖ ತೊಳೆದುಕೊಳ್ಳಬೇಕು. ದ್ವಿಚಕ್ರ ವಾಹನದಲ್ಲಿ ಹೋಗುವುದಾದರೆ ದೂಳಿನಿಂದ ಮುಖವನ್ನು ರಕ್ಷಿಸಿಕೊಳ್ಳಿ. ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯಿರಿ, ಕರಿದ ಆಹಾರವನ್ನು ಕಡಿಮೆ ಸೇವಿಸಿ. ಹೆಚ್ಚು ತರಕಾರಿ, ಸೊಪ್ಪಿನಿಂದ ಮಾಡಿದ ಆಹಾರ ಇರಲಿ’ ಎಂದು ಹೇಳುತ್ತಾರೆ ಸೀಮಾ.

ಈಜುವುದು, ಕಾರು ಚಾಲನೆ ಮಾಡುವುದು, ಡಿಜೆ ಚಟುವಟಿಕೆ… ಹೀಗೆ ಬಹು ಹವ್ಯಾಸಗಳನ್ನು ಮೈಗೂಡಿಸಿ ಕೊಂಡಿರುವ ಸೀಮಾ ಅವರಿಗೆ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲೂ ನಟಿಸುವ ಅವಕಾಶ ಬಂದಿತ್ತಂತೆ. ಆದರೆ ಮಾಡೆಲಿಂಗ್‌ನಲ್ಲೇ ಮುಂದುವರೆಯುವ ಬಯಕೆಯಿಂದ ಸಿನಿಮಾದತ್ತ ಚಿತ್ತ ಹರಿಸಲಿಲ್ಲ.

Write A Comment