ಕರ್ನಾಟಕ ನೆಲ-ಜಲ-ಭಾಷೆ ಉಳಿಸಿಕೊಳ್ಳಲು ಕನ್ನಡಿಗರು ಯಾವುದೇ ಸಂದರ್ಭದಲ್ಲೂ ಕೆಚ್ಚೆದೆಯಿಂದ ಹೋರಾಡುತ್ತಾರೆ ಎನ್ನುವುದನ್ನು ನಿರ್ದೇಶಕ ಪವನ್ ಒಡೆಯರ್ ಪಕ್ಕಾ ಆಕ್ಷನ್ ಮೂಲಕ ಪ್ರೇಕ್ಷಕರ ಮೈನವಿರೇಳಿಸುವಂತೆ ಒಂದು ಅದ್ಭುತ ಪವರ್‌ಫುಲ್ ರಣವಿಕ್ರಮ ಸಿನಿಮಾ ಮಾಡಿದ್ದಾರೆ. ಪುನಿತ್‌ರಾಜ್‌ಕುಮಾರ್ ಅವರ ಹಾವಭಾವ ಹಾಗೂ ಕಟ್ಟುಮಸ್ತಾದ ದೇಹ ಪ್ರದರ್ಶನದ ಮೂಲಕ ಪಕ್ಕಾ ಆಕ್ಷನ್ ಫೈಟ್‌ಗಳಿಗೆ ರವಿವರ್ಮ ಬಳಸಿಕೊಂಡಿದ್ದಾರೆ. ಸ್ವಾತಂತ್ರ್ಯಪೂರ್ವ ಸಂದರ್ಭ ದಲ್ಲಿ ನಡೆದ ಎರಡು ರಾಜ್ಯಗಳ ಗಡಿ ಪ್ರದೇಶದ ಬೆಲೆಬಾಳುವ ನಿಕ್ಷೇಪದ ಭೂಮಿಯ
(ಕಾಲ್ಪನಿಕ ಪ್ರದೇಶ) ಸೂಕ್ಷ್ಮ ವಿಚಾರವನ್ನು ಎಳೆ ಎಳೆಯಾಗಿ ನಿರ್ದೇಶಕರು ಚಿತ್ರಿಸಿದ್ದರೂ, ಪ್ರೇಕ್ಷಕರ ಮನಸ್ಸಿನಲ್ಲಿ ಗುನುಗುವ ಹಾಡುಗಳಿಲ್ಲ.
ಚಿತ್ರದಲ್ಲಿ ನಾಯಕ ನಟನನ್ನೇ ಹೈಲೆಟ್ ಮಾಡಿರುವುದರಿಂದ ನಾಯಕಿ ಆದಾಶರ್ಮಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ನಟಿ ಅಂಜಲಿ ಅವರ ಮೇಕಪ್, ಕತ್ತಿವರಸೆಯ ನಟನೆ ಮೂಲಕ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾರೆ. ಭವಿಷ್ಯದಲ್ಲಿ ಉತ್ತಮ ನಟಿಯಾಗುವ ಲಕ್ಷಣ ಗಳು ಅವರಲ್ಲಿವೆ. ಚಿತ್ರದ ಓಟ ಸ್ವಲ್ಪ ಮಟ್ಟಿಗೆ ಏರಿಳಿತಗಳ ನಡುವೆ ಮಂದಗತಿ ಯಲ್ಲಿ ಸಾಗಿದೆ. ಚಿತ್ರ ನಿರ್ಮಾಣದ ಖರ್ಚು-ವೆಚ್ಚದಲ್ಲಿ ನಿರ್ಮಾಪಕರು ಚೌಕಾಸಿ ಮಾಡಿಲ್ಲ. ಚಿತ್ರದಲ್ಲಿ ಒಂದಷ್ಟು ಫ್ಲಾಷ್ ಬ್ಯಾಕ್ ದೃಶ್ಯಗಳಿವೆ. ಲವ್, ರೊಮ್ಯಾನ್ಸ್ ಹಾಗೂ ಕಾಮಿಡಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿಲ್ಲ. ಹೆಚ್ಚಿನ ಆಕ್ಷನ್ ದೃಶ್ಯಗಳ ಮೂಲಕ ಸಿನಿಮಾ ನಾಯಕನ ಸುತ್ತ ಸಾಗುತ್ತದೆ. ಖಳನಟ ವಿಕ್ರಮ್ ಕಪೂರ್ ಅವರ ಆರ್ಭಟ ಅಷ್ಟಾಗಿಲ್ಲ. ಗಿರೀಶ್ ಕಾರ್ನಾಡ್ ಹಾಗೂ ಮುಖ್ಯಮಂತ್ರಿಚಂದ್ರು ಮೆಚ್ಚುವಂತೆ ಅಭಿನಯಿಸಿದ್ದಾರೆ. ಛಾಯಾಗ್ರಾಹಕ ವೈದಿ ತುಂಬ ಸೂಕ್ಷ್ಮ ವಿಷಯ ಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಒಟ್ಟಾರೆ ಆಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರವಾಗಿ ರಣವಿಕ್ರಮ ಹೊರಹೊಮ್ಮಿದೆ.
ಚಿತ್ರ-ರಣವಿಕ್ರಮ
ನಿರ್ಮಾಣ- ಜಯಣ್ಣ ಕಂಬೈನ್ಸ್, ನಿರ್ದೇಶನ- ಪವನ್ ಒಡೆಯರ್
ತಾರಾಗಣ- ಪುನೀತ್‌ರಾಜ್‌ಕುಮಾರ್, ಆದಾ ಶರ್ಮಾ, ಅಂಜಲಿ, ಗಿರೀಶ್ ಕಾರ್ನಾಡ್, ವಿಕ್ರಮ್‌ಸಿಂಗ್, ಮುಖ್ಯಮಂತ್ರಿ ಚಂದ್ರು ಮೊದಲಾದವರು.
ರೇಟಿಂಗ್ :*** (* ಅಷ್ಟಕ್ಕಷ್ಟೆ , ** ಸುಮಾರು, *** ನೋಡಬಹುದು,**** ಸೂಪರ್)