ಮನೋರಂಜನೆ

ಕೀ ಇಲ್ಲದೆ ಲಾಕ್ ತೆಗೆಯಿರಿ

Pinterest LinkedIn Tumblr

psmec11key

-ಸುಮಲತಾ ಎನ್‌.
ಸಿನಿಮಾ ನೋಡಲು, ಮಾತನಾಡಲು,  ಹಾಡು ಕೇಳಲು, ಫೋಟೊ ಕ್ಲಿಕ್ಕಿಸಲು, ಹೀಗೆ ಹತ್ತಾರು ಕೆಲಸಗಳಿಗೆ ಉಪಯೋಗಕ್ಕೆ ಬರುವ ಸ್ಮಾರ್ಟ್‌ಫೋನ್‌ ಇದೀಗ ರೂಂ ಕೀ ಆಗಿಯೂ ನೆರವಾಗಲಿದೆ. ಹೌದು. ಇಂಥದ್ದೊಂದು ಹೊಸ ಸಾಧ್ಯತೆ ಕಂಡು ಬಂದಿದ್ದು ನಗರದ ಸೆಸ್ನಾ ಬಿಸ್‌ನೆಸ್‌ ಪಾರ್ಕ್‌ನ ಅಲಾಫ್ ಹೋಟೆಲ್‌ನಲ್ಲಿ. ‘ಎಸ್‌ಪಿಜಿ ಕೀಲೆಸ್‌ ರೂಂ ಎಂಟ್ರಿ’ ಎಂಬ ಈ ಹೊಸ ತಂತ್ರಜ್ಞಾನ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿತು.

ಕೀ ಉಪಯೋಗಿಸಿ ಅಥವಾ ಸ್ವೈಪ್ ಮಾಡಿ‌‌ಲಾಕ್‌ ತೆಗೆಯುವ ಪದ್ಧತಿಯನ್ನು ಬದಲಾಯಿಸಿ ಹೋಟೆಲ್‌ಗೆ ಬಂದವರಿಗೆ  ಸ್ಮಾರ್ಟ್‌ಫೋನ್‌ ಬಳಸಿ ರೂಮಿನ ಕೀ ತೆರೆಯುವ ಸುಲಭ ವಿಧಾನವನ್ನು ಪರಿಚಯಿಸಲು ಮುಂದಾಗಿರುವುದು ಸ್ಟಾರ್‌ವುಡ್‌ ಹೋಟೆಲ್‌ ಮತ್ತು ರೆಸಾರ್ಟ್ಸ್‌.
ಹೋಟೆಲ್‌ಗೆ ಬಂದು, ರಿಸೆಪ್ಷನ್‌ನಲ್ಲಿ ನಿಂತು ಎಂಟ್ರಿ ಮಾಡಿಸಿ ಕೀ ತೆಗೆದುಕೊಂಡು ಹೋಗುವ ಚಿಕ್ಕ ಪುಟ್ಟ ನಿಯಮಗಳೇ ಕೆಲವೊಮ್ಮೆ ಕಿರಿಕಿರಿ ಎನಿಸುತ್ತದೆ. ಜೊತೆಗೆ ಹೊರಗೆ ಹೋದಾಗ ರೂಂ ಕೀ ಅನ್ನೂ ಜೋಪಾನವಾಗಿ ನೋಡಿಕೊಳ್ಳಬೇಕು. ಇಂಥ ಹಲವು ಕಾರಣಗಳನ್ನು ಗಣನೆಗೆ ತೆಗೆದುಕೊಂಡು ಬಳಕೆದಾರಸ್ನೇಹಿ ಲಾಕ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಸ್ಟಾರ್‌ವುಡ್‌ನ ಅಧೀಕೃತ ಸ್ಟಾರ್‌ವುಡ್ ಪ್ರಿಫರ್ಡ್‌‌ ಗೆಸ್ಟ್ ಆ್ಯಪ್ ಮೂಲಕ ಈ ಸ್ಮಾರ್ಟ್ ಕೀ ಬಳಕೆಗೆ ಲಭ್ಯ. ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿದ ಎಸ್‌ಪಿಜಿ ಸದಸ್ಯರು ಈ ಆ್ಯಪ್‌ಗೆ ನೋಂದಾಯಿಸಿಕೊಳ್ಳಬಹುದು. ಬುಕ್‌ ಮಾಡಿದ ನಂತರ ಅಥವಾ 24 ಗಂಟೆಯೊಳಗೆ ಈ ‘ಕೀಲೆಸ್’ ಆಯ್ಕೆ ಕುರಿತು ನಿಮಗೆ ಸಂದೇಶ ಬರುತ್ತದೆ. ನಂತರ ಹೋಟೆಲ್‌ ಪ್ರವೇಶಿಸುತ್ತಿದ್ದಂತೆ ರೂಮ್‌ ನಂಬರ್ ಮತ್ತು ಬ್ಲೂಟೂಥ್ ಕೀ ನಿಮ್ಮ  ಸ್ಮಾರ್ಟ್‌ಪೋನ್‌ಗೆ ಸಿಗುತ್ತದೆ. ಇದರಿಂದ ನೀವು ಕೀ ಪಡೆಯಲು ಕಾಯುವ ಅಗತ್ಯ ಇರುವುದಿಲ್ಲ.

ಬ್ಲೂಟೂಥ್ ಆನ್ ಮಾಡಿ ಈ ಆ್ಯಪ್ ತೆರೆದು ಬಾಗಿಲಿನ ಲಾಕ್‌ ಬಳಿ ಸ್ಮಾರ್ಟ್‌ಫೋನ್ ಹಿಡಿದರೆ, ಹಸಿರು ಬೆಳಕು ಬಂದು ಲಾಕ್ ತೆರೆದುಕೊಳ್ಳುತ್ತದೆ. ಪ್ರತಿ ಕೀಗೂ ತನ್ನದೇ ಆದ ಎಸ್‌ಪಿಜಿ ನಂಬರ್ ಇರುವುದರಿಂದ ದುರ್ಬಳಕೆಯಾಗುವ ಸಾಧ್ಯತೆ ಇಲ್ಲ.  ಇದು ಕೋಡ್ ಅವಲಂಬಿತ. ಮೊಬೈಲ್ ಕಳೆದುಕೊಂಡರೆ, ಅಥವಾ ಬ್ಯಾಟರಿ ಸಂಪೂರ್ಣ ಖಾಲಿಯಾಗಿ ರೂಂ ಲಾಕ್ ತೆರೆಯಲು ಸಾಧ್ಯವಾಗದಿದ್ದರೆ ಅಥವಾ ಇನ್ನಾವುದೇ ತುರ್ತು ಪರಿಸ್ಥಿತಿಯಲ್ಲಿ ಹೋಟೆಲ್‌ನ ಸಿಬ್ಬಂದಿ ನಿಮ್ಮ ಸಹಾಯಕ್ಕೆ ಬರುತ್ತಾರೆ.

‘ಹೋಟೆಲ್‌ಗೆ ಬರುವವರಿಗೆ ಅನುಕೂಲವಾಗಲೆಂದು ಈ ಹೊಸ ತಂತ್ರವನ್ನು ರೂಪಿಸಲಾಗಿದೆ. ವಿಶ್ವದ ಅತ್ಯಂತ ದೊಡ್ಡ ಲಾಕ್‌ ಉತ್ಪಾದಕರಾದ ಅಸ್ಸ ಅಬ್ಲಾಯ್‌ರೊಂದಿಗೆ ಜೊತೆಗೂಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ಸ್ಮಾರ್ಟ್‌ಫೋನ್‌ ಬಳಸುವವರೇ ಹೆಚ್ಚು. ಆದ್ದರಿಂದ ಈ ಹೈಟೆಕ್ ಜೀವನಶೈಲಿಗೆ ಹೊಂದುವಂತಿದೆ ಈ ಹೈಟೆಕ್ ಸೌಲಭ್ಯ. ಆದರೆ ಇದು ಅವರವರ ಆಯ್ಕೆಗೆ ಬಿಟ್ಟಿದ್ದು.

ಈ ಕೀಲೆಸ್‌ನೊಂದಿಗೆ ಮಾಮೂಲಿ ಕೀ ಆಯ್ಕೆಯೂ ಇದೆ’ ಎಂದು ಮಾಹಿತಿ ನೀಡಿದರು ಸ್ಟಾರ್‌ವುಡ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ವಲ್ಡ್‌ವೈಡ್‌ ಇಂಕ್‌ನ ಏಷಿಯಾ ಪೆಸಿಫಿಕ್ ಅಧ್ಯಕ್ಷ ಸ್ಟಿಫೆನ್ ಹೋ. ಇದೇ ವರ್ಷ 2015ರಲ್ಲಿ ಅಲಾಫ್, ಎಲೆಮೆಂಟ್ ಮತ್ತು ಡಬ್ಲು ಹೋಟೆಲ್‌ ಸೇರಿದಂತೆ 150 ಹೋಟೆಲ್‌ಗಳಲ್ಲಿ 30,000 ಬಾಗಿಲುಗಳಿಗೆ ಇದನ್ನು ಅಳವಡಿಸುವ ಯೋಜನೆಯನ್ನೂ ಹೊಂದಿದ್ದಾರೆ ಅವರು.

Write A Comment